ಪುತ್ತೂರಿನಲ್ಲಿ ಸಂಘದ ಅಣತಿ ಮೀರಿ ಬಿಜೆಪಿ ವಿರುದ್ದ ಬಂಡೆದ್ದ ಅರುಣ್ ಕುಮಾರ್ ಪುತ್ತಿಲ ಬೆಂಬಲಕ್ಕೆ ನಿಂತ ಕಾರ್ಯಕರ್ತರ ಮೇಲೆ ಬಿಜೆಪಿ ನಾಯಕತ್ವದ ನಿರ್ದೇಶನದಂತೆ ಪೊಲೀಸರು ನಡೆಸಿದ ದೌರ್ಜನ್ಯ ಅಪಾಯಕಾರಿಯಾದದ್ದು. ನಳಿನ್ ಕುಮಾರ್ ಕಟೀಲರ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಒಂದು ಬ್ಯಾನರ್ ಅಳವಡಿಸಿದ್ದಕ್ಕೆ ಇಷ್ಟು ದೌರ್ಜನ್ಯ ನಡೆಯಲು ಸಾಧ್ಯವಿಲ್ಲ. ಇದು ಬಿಜೆಪಿ, ಸಂಘಪರಿವಾರದ ನಾಯಕತ್ವವನ್ನು ಆಗಾಗ ಪ್ರಶ್ನಿಸುತ್ತಿರುವ ಕಾರ್ಯಕರ್ತರ ಮೇಲೆ ನಾಯಕರುಗಳ ಒಳಗಡೆ ಕುದಿಯುತ್ತಿರುವ ಆಕ್ರೋಶದ ಪ್ರತಿಫಲನ. “ಇನ್ನು ಮುಂದೆ ಬಂಡಾಯ ಎದ್ದರೆ ಹುಷಾರ್” ಎಂಬ ಎಚ್ಚರಿಕೆ. ಮುಸ್ಲಿಂ ಯುವಕರ ಮೇಲಿನ ದೌರ್ಜನ್ಯಕ್ಕಿಂತಲೂ ಕ್ರೂರವಾಗಿ ನಿಮ್ಮನ್ನು ಹತ್ತಿಕ್ಕಲಾಗುವುದು ಎಂಬ ಸಂದೇಶ.

ಅಧಿಕಾರ ಕಳೆದು ಕೊಂಡಿರುವ ಬಿಜೆಪಿ ಪರಿವಾರ ಇಷ್ಟೊಂದು ಅಮಾನವೀಯವಾಗಿ ನಡೆದುಕೊಂಡಿರುವಾಗ, ಸರಕಾರ ಮರಳಿ ಬಿಜೆಪಿ ಕೈಗೆ ಹೋಗಿದ್ದರೆ ಪುತ್ತೂರು, ಕಾರ್ಕಳದ ಬಿಜೆಪಿ ಬಂಡಾಯ ಕಾರ್ಯಕರ್ತರ ಪರಿಸ್ಥಿತಿ ಹೇಗಿರುತ್ತಿತ್ತು ? ರಾಜಕೀಯ ಪ್ರೇರಿತ ಧರ್ಮದ ಬಾವುಟ ಹಿಡಿದು ಬೀದಿಗಿಳಿಯುವ ಯುವಕರು ಪಾಠ ಕಲಿಯಬೇಕು. ಬಿಜೆಪಿ ಪರಿವಾರವನ್ನು ಪ್ರಶ್ನಿಸುತ್ತಲೇ ಮತ್ತಷ್ಟು ತೀವ್ರವಾದ ಧರ್ಮಾಂಧತೆಯ ಕಡೆಗೆ ಚಲಿಸುವುದನ್ನು ಕೈ ಬಿಡಬೇಕು. ಮಾನವೀಯ ಚಿಂತನೆಗಳು, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್ ರ ಆದರ್ಶಗಳತ್ತ ವಾಲಬೇಕು. ಉದ್ಯೋಗ, ಶಿಕ್ಷಣ, ಆರೋಗ್ಯ, ಸಮಾನತೆಯ ಹೋರಾಟದ ಧ್ವಜವನ್ನು ಎತ್ತಿ ಹಿಡಿಯಬೇಕು. ಅದು ಪರ್ಯಾಯ ಆಗಬೇಕು.
ಏನೇ ಇರಲಿ, ಪುತ್ತೂರು ಪುತ್ತಿಲ ಬೆಂಬಲಿಗರ ಮೇಲಿನ ದೌರ್ಜನ್ಯ ಖಂಡನೀಯ. ಪೊಲೀಸರು ಇನ್ನೂ ಬಿಜೆಪಿ ಸರಕಾರದ ಮನಸ್ಥಿತಿಯಲ್ಲೆ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ. ಈ ಪ್ರಕರಣ ಸರಿಯಾದ ತನಿಖೆ ಆಗಬೇಕು. ತಪ್ಪಿತಸ್ಥ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಬೇಕು. ಶಾಸಕ ಅಶೋಕ್ ರೈ ಮೇಲೆ ನ್ಯಾಯ ಒದಗಿಸುವ ದೊಡ್ಡ ಜವಾಬ್ದಾರಿ ಇದೆ. ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.