ಎಂ.ಪಿ ಗೆದ್ದರೆ ಮಾತ್ರ ಜಿಲ್ಲೆಯ ನಾಯಕರಿಗೆ ಅಧಿಕಾರ ಭಾಗ್ಯ!
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಪೂರ್ಣ ಪ್ರಮಾಣದ ಸಚಿವ ಸಂಪುಟ ಬಹುತೇಕ ನಾಳೆಗೆ ಖಚಿತವಾಗಲಿದೆ. ಹಲವಾರು ಹಿರಿಯ ನಾಯಕರಿಗೆ ಕೊಕ್ ಕೊಟ್ಟು ವರ್ಚಸ್ಸು, ಗೆಲುವು ತಂದು ಕೊಟ್ಟ ನಾಯಕರಿಗೆ ಮಣೆ ಹಾಕಲು ಕಾಂಗ್ರೆಸ್ ಪಕ್ಷ ಈ ಬಾರಿ ನಿರ್ಧರಿಸಿದೆ. ಶಾಮನೂರು ಶಿವಶಂಕರಪ್ಪ, ದೇಶಪಾಂಡೆ, ಟಿ.ಬಿ. ಜಯಚಂದ್ರ ಆದಿಯಾಗಿ ಹಿರಿಯರಿಗೆ ಸಚಿವ ಸ್ಥಾನ ಕೈ ತಪ್ಪಲಿದೆ ಅನ್ನುವ ಮಾಹಿತಿ ಲಭ್ಯವಾಗಿದೆ.
ಇತ್ತ ಕರಾವಳಿಯಲ್ಲಿ ಸಚಿವ ಸ್ಥಾನಕ್ಕಾಗಿ ಮಂಜುನಾಥ ಭಂಡಾರಿ, ಬಿ.ಕೆ. ಹರಿಪ್ರಸಾದ್ ಪ್ರಬಲ ಲಾಬಿ ನಡೆಸುತ್ತಿದ್ದು, ಬಂಟ್ವಾಳದಲ್ಲಿ ಸೋತ ರಮಾನಾಥ ರೈ ಯವರನ್ನು ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಲಿದ್ದಾರೆ ಅನ್ನುವ ಸುದ್ದಿಗಳು ಹರಿದಾಡುತ್ತಿವೆ.

ಆದರೆ ಈ ಎಲ್ಲಾ ಸುದ್ದಿಗಳಿಗೆ ತೆರೆಬಿದ್ದಿದ್ದು ದಕ್ಷಿಣ ಕನ್ನಡ ಜಿಲ್ಲೆಯಿಂದ ಯಾವುದೇ ರಾಜಕೀಯ ನಾಯಕರಿಗೆ ಅಧಿಕಾರ ಸಿಗುವ ಸಾಧ್ಯತೆ ಇಲ್ಲ ಅನ್ನುವುದು ಮೂಲಗಳಿಂದ ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆದ್ದ ಯು.ಟಿ. ಖಾದರ್ ರವರನ್ನು ಸಭಾಧ್ಯಕ್ಷ ಸ್ಥಾನ ನೀಡಿ ಕೂರಿಸಲಾಗಿದೆ. ಎರಡೆರಡು ಬಾರಿ ಸಂಪುಟ ದರ್ಜೆಯ ಸ್ಥಾನಮಾನ ಖಾದರ್ ರವರಿಗೆ ನೀಡಿದರೂ ಉಳ್ಳಾಲ ಬಿಟ್ಟು ಬೇರೆ ಕಡೆ ತಮ್ಮ ವರ್ಚಸ್ಸಿನಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡದೆ ಇರುವುದರಿಂದ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಹಿಂದೇಟು ಹಾಕಿತ್ತು. ಆದರೆ ಕರಾವಳಿ ಭಾಗದಲ್ಲಿ ಅಲ್ಫಸಂಖ್ಯಾತ ಸಮುದಾಯ ಕಾಂಗ್ರೆಸ್ ಕೈ ಹಿಡಿದಿದ್ದರಿಂದ, ಖಾದರ್ ರಿಗೆ ಮಂತ್ರಿ ಪಟ್ಟ ನೀಡದೆ ಇದ್ದರೆ ತಪ್ಪು ಸಂದೇಶ ರವಾನೆಯಾಗಬಹುದು ಅನ್ನುವ ದೃಷ್ಟಿಯಿಂದ ಸಭಾಧ್ಯಕ್ಷ ಸ್ಥಾನಕ್ಕೆ ಒಪ್ಪಿಸಿ ಕುಳ್ಳಿರಿಸಲಾಗಿದೆ ಅನ್ನುವ ಮಾಹಿತಿ ಲಭ್ಯವಾಗಿದೆ.
ಖಾದರ್ ಸಭಾಧ್ಯಕ್ಷ ರಾಗುತ್ತಿದ್ದಂತೆ ಜಿಲ್ಲೆಯ ಇನ್ನಿತರ ಪ್ರಬಲ ಸಮುದಾಯದ ಕಾಂಗ್ರೆಸ್ ಮುಖಂಡರು ಮಂತ್ರಿ ಪಟ್ಟಕ್ಕಾಗಿ ಲಾಬಿ ನಡೆಸಲು ಮುಂದಾಗಿದ್ದು, ಜಿಲ್ಲೆಯ ಕಾಂಗ್ರೆಸ್ ನಾಯಕರು ಸೀಟು ತಂದುಕೊಡುವಲ್ಲಿ ವಿಫಲರಾಗಿರುವುದರಿಂದ ಜಿಲ್ಲೆಯ ಯಾವುದೇ ನಾಯಕರಿಗೂ ಸಚಿವ ಸ್ಥಾನ ನೀಡದೆ ಇರಲು ಕಾಂಗ್ರೆಸ್ ಮುಂದಾಗಿದೆ ಅನ್ನುವ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯದೆ ಕೇವಲ ಅಧಿಕಾರಕ್ಕಾಗಿ ನಾಯಕರು ಮುಂದಾಗಿರುವುದಕ್ಕೆ ಉಪಮುಖ್ಯಮಂತ್ರಿ ಡಿಕೆಶಿ ಕೆಂಡಾಮಂಡಲರಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬನ್ನಿ ಆನಂತರವೇ ಅಧಿಕಾರ, ಎಂಎಲ್ಸಿ ಸ್ಥಾನ ನೀಡುವ ಬಗ್ಗೆ ಡಿಕೆಶಿ ಜಿಲ್ಲೆಯ ನಾಯಕರಿಗೆ ಖಡಕ್ ಸಂದೇಶ ನೀಡಿದ್ದಾರೆ ಅನ್ನುವ ಮಾಹಿತಿ ತಿಳಿದುಬಂದಿದೆ.
ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಇಲ್ಲಿನ ನಾಯಕರು ವಿಫಲ ರಾಗಿರುವುದರಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಹೊರ ಜಿಲ್ಲೆಯ ಮಂತ್ರಿಗಳಿಗೆ ಉಸ್ತುವಾರಿ ಸಚಿವ ನೀಡುವ ಸಾಧ್ಯತೆ ಬಹುತೇಕ ಹೆಚ್ಚಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ಉಸ್ತುವಾರಿಯಾಗಿದ್ದ, ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿರುವ ಮಧು ಬಂಗಾರಪ್ಪ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಇದೆ. ಈಡಿಗ (ಬಿಲ್ಲವ) ಸಮುದಾಯಕ್ಕೆ ಮಧು ಬಂಗಾರಪ್ಪ ಸೇರಿರುವುದರಿಂದ ಇಲ್ಲಿನ ಕೋಟಾ ಭರ್ತಿ ಮಾಡಿದಂತಾಗುತ್ತದೆ. ಅದೇ ರೀತಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಲ್ಲವ ಮತ ಸೆಳೆಯುವ ತಂತ್ರಗಾರಿಕೆಯು ಇದೆ. ಜೊತೆಗೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನವೂ ಅಡಗಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲ್ಯಾನ್ ಡಿಕೆಶಿಯದ್ದು. ಇತ್ತ ಉಡುಪಿಗೆ ಭಟ್ಕಳ ಶಾಸಕ ಮಂಕಾಳ ವೈದ್ಯ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.