ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಇದೀಗ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ‘ಗ್ಯಾರಂಟಿ’ ಆಶ್ವಾಸನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ನಿರ್ಧಾರವನ್ನು ಮಾಡುತ್ತಿದೆ.ಚುನಾವಣಾ ಪ್ರನಾಳಿಕೆಯಲ್ಲಿ ನೀಡಿರುವ ಐದು ಗ್ಯಾರಂಟಿಗಳ ಪೈಕಿ ಇದೀಗ ಅತೀ ಹೆಚ್ಚು ಚರ್ಚೆಗೆ ಒಳಗಾಗಿರುವುದು 200 ಯುನಿಟ್ ಉಚಿತ ಕರೆಂಟ್. ಇದರ ಲೆಕ್ಕಾಚಾರ ಇನ್ನೂ ಸ್ಪಷ್ಟವಾಗಿಲ್ಲದ ಕಾರಣ ಈ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಸ್ವಲ್ಪ ಗೊಂದಲ ಮುಂದುವರೆದಿದೆ.
ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಪ್ರಕಾರ, ಪ್ರತೀ ತಿಂಗಳು ವಿದ್ಯುತ್ ಬಳಕೆದಾರರು 200 ಯುನಿಟ್ ವರೆಗೆ ಬಳಸುವ ವಿದ್ಯುತ್ ಗೆ ಬಿಲ್ ಕಟ್ಟಬೇಕಾಗಿಲ್ಲ ಎನ್ನುವುದಕ್ಕೆ ಸಂಬಂಧಿಸಿದಂತೆ ಸರಕಾರ ಒಂದು ಬುದ್ದಿವಂತಿಕೆಯನ್ನು ಬಳಸಿದೆ. ಒಂದು ಕುಟುಂಬ ಕಳೆದು ಹೋದ 12 ತಿಂಗಳಿನಲ್ಲಿ ಎಷ್ಟು ವಿದ್ಯುತ್ ಬಳಸಿದೆ ಎಂದು ಸರಾಸರಿ ಲೆಕ್ಕ ತೆಗೆದು ಅವರ ಮೇಲೆ 10% ಯುನಿಟ್ ಸೇರಿಸಿ ಆ ಕುಟುಂಬದ ಕಟ್ ಆಫ್ ಯುನಿಟನ್ನು ಫಿಕ್ಸ್ ಮಾಡಲಾಗುತ್ತದೆ. ಆ ಯುನಿಟ್ ಆಧಾರದಲ್ಲಿ ಆ ಕುಟುಂಬಕ್ಕೆ ಜುಲೈ ತಿಂಗಳಿನಿಂದ ಉಚಿತ ವಿದ್ಯುತ್ ಸೌಲಭ್ಯವನ್ನು ನೀಡಲಾಗುತ್ತದೆ.
ಕಳೆದ 12 ತಿಂಗಳ ವಿದ್ಯುತ್ ಬಳಕೆಯ ಯೂನಿಟ್ ಗಳನ್ನು ಒಟ್ಟಾಗಿ ಕೂಡಿಸಿ, ಅದನ್ನು 12 ರಿಂದ ಬಾಗಿಸಿ ಮತ್ತೆ 1.1 ರಿಂದ ಗುಣಿಸಿದಾಗ ಬರುವ ಮೊತ್ತಕ್ಕೆ 10% ಸೇರಿಸಬೇಕು.ಅದರ ಒಳಗೆ ಈಗಿನ ನಿಮ್ಮ ಉಚಿತ ವಿದ್ಯುತ್ ಬಳಕೆಯ ಯೂನಿಟ್ ಇರತಕ್ಕದ್ದು. ಮತ್ತೆ ಅದು ಅ ಮಿತಿಯ ಯೂನಿಟ್ ಗಳನ್ನು ಮೀರಿರಬಾರದು.ಇದನ್ನು ಕ್ರಿಕೆಟ್ ನಲ್ಲಿ ಬಳಸುವ ಡಕ್ ವರ್ತ್ ಲೂಯಿಸ್ ನಿಯಮಕ್ಕೆ ಅನ್ವಯಿಸಿಕೊಳ್ಳಬಹುದೇನೋ.?ಒಟ್ಟಿನಲ್ಲಿ ಈ ಲೆಕ್ಕಾಚಾರವವನ್ನು ಅರ್ಥಮಾಡಿಕೊಳ್ಳದೇ,200 ಯುನಿಟ್ ಫ್ರೀ ಎಂದು ಭರ್ಜರಿಯಾಗಿ ಕರೆಂಟ್ ಖರ್ಚು ಮಾಡಿದ್ರಾ ಆಗಿದ್ದಲ್ಲಿ ‘ಶಾಕ್’ ಹೊಡೆಯೋದಂತು ಪಕ್ಕಾ.!