ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. ವಿಶೇಷ ತಂಡದ ಮುಖ್ಯಸ್ಥರನ್ನಾಗಿ ಸಿಐಡಿ.ಎಡಿಜಿಪಿ.ಮನೀಷ್ ಕರ್ಬೀಕರ್ ರವರನ್ನು ನೇಮಕ ಮಾಡಿದ್ದು,ಇವರ ನೇತೃತ್ವದಲ್ಲಿ ನುರಿತ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ.ಎಸ್ಐಟಿ ತಂಡದಲ್ಲಿ ಡಿಐಜಿ ವಂಶಿಕೃಷ್ಣ, ಡಿಸಿಪಿ.ಅನೂಪ್ ಶೆಟ್ಟಿ, ಎಸ್‌ಪಿ ಶರತ್ ಕುಮಾರ್ ಸಹ ಇರಲಿದ್ದಾರೆ.

ತಂಡ ರಚನೆಯಾಗುತ್ತಿದ್ದಂತೆ ಸಿಐಡಿಯಲ್ಲಿ ಎಸ್ ಐಟಿ ಅಧಿಕಾರಿಗಳ ಜೊತೆ ಸಿಐಡಿ ಡಿಜಿ ಎಂ. ಎ. ಸಲೀಂ ಸಭೆ ನಡೆಸಿದ್ದಾರೆ. ತನಿಖೆಯ ರೂಪುರೇಖೆಗಳ ಬಗ್ಗೆ ಚರ್ಚೆ ನಡೆಸಿದ್ದು, ಫೈಲ್ ವರ್ಗಾವಣೆ, ಕೆಳಹಂತದಿಂದ ಯಾವೆಲ್ಲ ಅಧಿಕಾರಿಗಳು ತಂಡದಲ್ಲಿ ಇರಬೇಕು ಎಂಬುದರ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಈಗಾಗಲೇ ಸಿಸಿಬಿಯಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಮೊದಲು ನ್ಯಾಯಾಲಯದ ಅನುಮತಿ ಪಡೆದು ತನಿಖೆ ಮುಂದುವರೆಸಲು ಸಿದ್ಧತೆ ನಡೆಸಲಾಗುತ್ತಿದೆ.