ಜಿಲ್ಲೆಯಾದ್ಯಂತ ಹೋರಾಟ ವಿಸ್ತರಣೆ; ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆ
ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಆರೋಗ್ಯ ಇಲಾಖೆಯ ಆದೇಶವನ್ನು ಹಿಂಪಡೆಯಲು ಆಗ್ರಹಿಸಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಂಗಳೂರಿನಲ್ಲಿ ಬೃಹತ್ ಮೆರವಣಿಗೆ ಹಾಗು ಪ್ರತಿಭಟನಾ ಸಭೆ ನಡೆಸಿತು. ಡಾ. ಬಿ ಆರ್ ಅಂಬೆಡ್ಕರ್ ವೃತ್ತದಿಂದ ಹೊರಟ ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು, ಮೆರವಣಿಗೆಯ ಉದ್ದಕ್ಕೂ ಆರೋಗ್ಯ ಸಚಿವರೂ ಆಗಿರುವ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿರುದ್ದ ಘೋಷಣೆಗಳು ಮೊಳಗಿದವು. ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ ವಹಿಸಿದ್ದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದರು. ಅವರು ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲೆ ಖಾಸಗಿ ಮೆಡಿಕಲ್ ಕಾಲೇಜುಗಳು ಹಾಗೂ ಕಾರ್ಪೊರೇಟ್ ಖಾಸಗಿ ಆಸ್ಪತ್ರೆಗಳ ಒಡೆಯರ ಹಿಡಿತಕ್ಕೆ ಸಿಲುಕಿದೆ. ಮಂಗಳೂರನ್ನು ಅತ್ಯುತ್ತಮ ಚಿಕಿತ್ಸೆ ದೊರಕುವ ಆಸ್ಪತ್ರೆಗಳ ನಗರ ಎಂದು ಇಲ್ಲಿನ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಕೊಂಡಾಡುತ್ತವೆ. ವಾಸ್ತವದಲ್ಲಿ ಮಂಗಳೂರಿನ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳು ರೋಗಿಗಳ ಪಾಲಿಗೆ ನರಕವಾಗಿದೆ, ಬಹುತೇಕ ಸುಲಿಗೆಯ ಕೇಂದ್ರವಾಗಿವೆ. ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಭರಿಸಲಾಗದೆ ಬಹುತೇಕ ಕುಟುಂಬಗಳು ಬಡತನದ ಬೇಗೆಗೆ ಸಿಲುಕಿ, ಸಾಮಾಜಿಕ ಜಾಲತಾಣದಲ್ಲಿ ದೇಣಿಗೆ ಎತ್ತುವ ದಯನೀಯ ಸ್ಥಿತಿಯನ್ನು ಕಾಣುತ್ತಿದ್ದೇವೆ. ಇಂತಹ ಲಾಭಕೋರ ಖಾಸಗಿ ಆರೋಗ್ಯ ಲಾಭಿಗಳಿಗೆ ಸರಕಾರಿ ಆಸ್ಪತ್ರೆಗಳ ಹಸ್ತಾಂತರ ಬಡಜನರ ಪಾಲಿಗೆ ಆರೋಗ್ಯದ ಹಕ್ಕಿನ ಪೂರ್ಣ ನಿರಾಕರಣೆ ಆಗಲಿದೆ. ಸಾರ್ವಜನಿಕ ಆರೋಗ್ಯ ಸೇವೆಯನ್ನು ಪೂರ್ಣ ಪ್ರಮಾಣದ ಖಾಸಗೀಕರಣಕ್ಕೆ ತೆರದಿಡಲಿದೆ. ಬಡ ರೋಗಿಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳು ವೈದ್ಯ ವಿದ್ಯಾರ್ಥಿಗಳ ಕಲಿಕೆಯ ಸಾಧನವಾಗಿ ಮಾರ್ಪಡಿಸಲಿದೆ. ಅತ್ಯಂತ ಪ್ರತಿಗಾಮಿಯಾದ ಈ ತೀರ್ಮಾನವನ್ನು ಹಿಂಪಡೆಯದಿದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟ ವಿಸ್ತರಣೆಗೊಳ್ಳಲಿದೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ರಸ್ತೆಯಲ್ಲಿ ತಡೆದು ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ, ಆರೋಗ್ಯ ಕ್ಷೇತ್ರದ ಖಾಸಗೀಕರಣ ಯಾವುದೇ ಕಾರಣಕ್ಕೂ ಒಪ್ಪಲಾಗದು. ಕಾಂಗ್ರೆಸ್ ಸರಕಾರದ ಈ ತೀರ್ಮಾನವನ್ನು ವಿರೋಧ ಪಕ್ಷ ಬಿಜೆಪಿಯ ಶಾಸಕರುಗಳು ಪ್ರಶ್ನಿಸದಿರುವುದು, ಬಿಜೆಪಿಯು ಈ ಒಪ್ಪಂದದಲ್ಲಿ ಶಾಮೀಲಾಗಿರುವುದನ್ನು ಎತ್ತಿ ತೋರಿಸುತ್ತದೆ. ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳ ಒಡೆಯರ ಪರವಾಗಿ ಬಿಜೆಪಿ ಹಾಗು ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡುತ್ತವೆ. ಸರಕಾರಿ ಆಸ್ಪತ್ರೆಗಳ ಖಾಸಗೀಕರಣದ ಕುರಿತಾಗಿ ಬಿಜೆಪಿಯ ಮೌನ ಈ ಅಂಶವನ್ನು ಅನುಮಾನ ಇಲ್ಲದಂತೆ ಸಾಬೀತು ಪಡಿಸಿದೆ. ಸಿಪಿಐಎಂ ಈ ಆದೇಶ ರದ್ದಾಗುವವರೆಗೂ ವಿರಮಿಸುವುದಿಲ್ಲ. ಕಾಂಗ್ರೆಸ್, ಬಿಜೆಪಿ ಪಕ್ಷಗಳ ಶಾಮೀಲಾತಿಯನ್ನು ಬಯಲುಗೊಳಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ. ಕೃಷ್ಣಪ್ಪ ಕೊಂಚಾಡಿ, ಬಿ ಎಂ ಭಟ್, ವಸಂತ ಆಚಾರಿ, ಜಯಂತಿ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಸದಸ್ಯ ಮನೋಜ್ ವಾಮಂಜೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಸದಾಶಿವ ದಾಸ್ ದನ್ಯವಾದ ಸಲ್ಲಿಸಿದರು.
