ಬಜಾಲ್ ವಾರ್ಡಿನ ಅಭಿವೃದ್ಧಿ ಕಡೆಗಣಿಸಿದರೆ ಹೋರಾಟ ತೀವೃಗೊಳ್ಳಲಿದೆ: ಸಂತೋಷ್ ಬಜಾಲ್

ಕರಾವಳಿ

ಸ್ಮಾರ್ಟ್ ಸಿಟಿಯ ಹೆಸರಲಿ ಕೋಟಿ ಕೋಟಿ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಅಭಿವೃದ್ಧಿ ಹೆಸರಲ್ಲಿ ಕಮಿಷನ್ ಹೊಡೆದು ಜನರ ತೆರಿಗೆ ಹಣವನ್ನು ಪೋಲು ಮಾಡುವ ಶಾಸಕರಿಗೆ ಬಜಾಲ್ ವಾರ್ಡಿನ ಮುಖ್ಯರಸ್ತೆಯ ಅಗಲೀಕರಣ ಮತ್ತು ಕಾಂಕ್ರಟೀಕರಣಗೊಳಿಸಲಾಗಲಿ ಅಥವಾ ಬಜಾಲ್ ವಾರ್ಡಿನ ಅಭಿವೃದ್ಧಿಗೊಳಿಸುವಲ್ಲಿ ಕಡೆಗಣಿಸುವುದಾದರೆ ಈ ಭಾಗದ ಜನರ ಹೋರಾಟ ತೀವೃಗೊಳ್ಳಲಿದೆ ಎಂದು ಸಿಪಿಐಎಂ ಪಕ್ಷದ ನಗರ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು (18-7-2023) ಬಜಾಲ್ ಜಲ್ಲಿಗುಡ್ಡೆ ಮುಖ್ಯರಸ್ತೆ ಅಗಲೀಕರಿಸಿ ಕಾಂಕ್ರಟೀಕರಣಗೊಳಿಸಲು ಹಾಗೂ ಜಯನಗರ ಸಹಿತ ಎಲ್ಲಾ ಮುಖ್ಯರಸ್ತೆಗಳ ಕಾಂಕ್ರೀಟಿಕರಣಗೊಳಿಸಲು ಒತ್ತಾಯಿಸಿ ಸಿಪಿಐಎಂ ಜಲ್ಲಿಗುಡ್ಡೆ ಶಾಖೆ ಸಂಘಟಿಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಬಹುತೇಕ ಬಡವರೇ ಮತ್ತು ದುಡಿದು ತಿನ್ನುವ ಜನಸಾಮಾನ್ಯರೇ ಬದುಕುತ್ತಿರುವ ಬಜಾಲ್ ವಾರ್ಡಿನ ಅಭಿವೃದ್ಧಿ ಗೊಳಿಸುವಲ್ಲಿ ಬಿಜೆಪಿ ನೇತೃತ್ವದ ಮಂಗಳೂರು ಮಹಾನಗರ ಪಾಲಿಕೆ ಆಡಳಿತ, ಬಿಜೆಪಿ ಶಾಸಕ ವೇದವ್ಯಾಸ ಕಾಮತರು ಸಂಪೂರ್ಣ ಕಡೆಗಣಿಸಿದ್ದಲ್ಲದೆ ಬಡಜನ ವಿರೋಧಿಯಾಗಿ ವರ್ತಿಸಿದ್ದಾರೆ. ಕಳೆದ ಹಲವು ವರುಷಗಳಿಂದ ಬಜಾಲ್ ಭಾಗದ ಅಭಿವೃದ್ಧಿ ಕೆಲಸಗಳು ನಡೆಯುವಲ್ಲಿ ಈ ಭಾಗದ ಜನರು ಹೋರಾಟ ನಡೆಸುತ್ತಾ ಬಂದು ಪಡೆದುಕೊಂಡಿರುತ್ತಾರೆ. ಪಡೀಲ್ ಬಜಾಲ್ ಮುಖ್ಯರಸ್ತೆಯಿಂದ ಹಿಡಿದು ಪಡೀಲ್ ರೈಲ್ವೇ ಕೆಳಸೇತುವೆ, ನಗರ ಆರೋಗ್ಯ ಕೇಂದ್ರ , ಸರಕಾರಿ ಬಸ್ಸು ಇಂತಹ ಅಭಿವೃದ್ಧಿ ಕೆಲಸಗಳು ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಸಂಘಟಿಸಿ ನಡೆದ ಹೋರಾಟದ ಮೂಲಕ ಪಡೆಯಲಾಗಿದೆ ಹೊರತು ಯಾವ ಜನಪ್ರತಿನಿಧಿಗಳ ಕೊಡುಗೆಯೂ ಕಾಳಜಿಯಿಂದಲ್ಲ ಎಂದು ಆರೋಪಿಸಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡುತ್ತಾ ಜಯನಗರ ಜಲ್ಲಿಗುಡ್ಡೆ 200 ಮೀಟರ್ ರಸ್ತೆಯ ಕಾಮಗಾರಿಗೆ ಈಗಾಗಲೇ 68ಲಕ್ಷ ಮಂಜೂರಾಗಿದೆ. ಆದರೆ ಕಾಮಗಾರಿ ಕೆಲಸ ಪ್ರಾರಂಭಿಸಲು ಈವರೆಗೂ ಕ್ರಮಕೈಗೊಂಡಿಲ್ಲ. ಪ್ರತೀ ಬಾರಿ ಈ ಪ್ರದೇಶಕ್ಕೆ ಭೇಟಿ ನೀಡುವ ಶಾಸಕ ವೇದವ್ಯಾಸ ಕಾಮತ್ ಗೆ ಮುಖ್ಯರಸ್ತೆ ಅವ್ಯವಸ್ಥೆ ಕಾಣುವುದಿಲ್ಲವೇ. ಬಿಜೆಪಿ ಆಡಳಿತ ಇಲ್ಲಿಯ ಜನಪ್ರತಿನಿಧಿಯನ್ನು ಕಡೆಗಣಿಸಿ ಶಾಸಕರ ಹಿಂಬಾಲಕರೇ ಕಾರ್ಪೊರೇಟರ್ ರೀತಿಯಲ್ಲಿನ ದುರಂಹಕಾರದ ವರ್ತನೆಯನ್ನು ಸಿಪಿಐಎಂ ಪಕ್ಷ ಸಹಿಸೋದಿಲ್ಲ. ಬಜಾಲ್ ವಾರ್ಡಿನ ಮುಖ್ಯರಸ್ತೆಯಿಂದ ಹಿಡಿದು ಒಳರಸ್ತೆಯನ್ನು ಕೂಡಲೇ ಸರಿಪಡಿಸಲು ಕ್ರಮಕೈಗೊಳ್ಳಿ ಇಲ್ಲವಾದರೆ ಹೋರಾಟ ತೀವೃಗೊಳ್ಳುತ್ತದೆ ಮುಂದೆ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.