ತನ್ನ ಮೃತ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಸಾವಿನ ಪುರಾವೆಯಾಗಿ ಆಕೆಯ ಅಸ್ಥಿಪಂಜರವನ್ನೇ ಬ್ಯಾಂಕಿಗೆ ಹೊತ್ತು ತಂದಿರುವ ಘಟನೆ ಒಡಿಶಾದ ಕೆಂಜಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ತಂಗಿಯ ಮರಣದ ನಂತರ ಆಕೆಯ ಖಾತೆಯಲ್ಲಿದ್ದ ಹಣ ಬಿಡಿಸಿಕೊಳ್ಳಲು ಬ್ಯಾಂಕಿಗೆ ಅಲೆದಾಡುತ್ತಿದ್ದರು. ಬ್ಯಾಂಕ್ ಅಧಿಕಾರಿಗಳು ಮರಣ ಪ್ರಮಾಣಪತ್ರ ಸೇರಿದಂತೆ ಸೂಕ್ತ ದಾಖಲೆಗಳನ್ನು ಕೇಳಿದ್ದರು ಎನ್ನಲಾಗಿದೆ. ಇದರಿಂದ ಹತಾಶರಾದ ವ್ಯಕ್ತಿ, ಹೂತುಹಾಕಿದ್ದ ತಂಗಿಯ ಶವವನ್ನು ಹೊರತೆಗೆದು, ಅದರ ಅಸ್ಥಿಪಂಜರವನ್ನೇ ಚೀಲದಲ್ಲಿ ಹಾಕಿಕೊಂಡು ಬ್ಯಾಂಕಿಗೆ ಬಂದಿದ್ದಾರೆ.
ಜಿತು ಮುಂಡ ಎಂಬಾತ ಸಹೋದರಿ ಕಲ್ರ ಮುಂಡ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಸಾಯುವ ಮುನ್ನ ಕಲ್ರ ಮುಂಡ ಸೋದರ ಜಿತು ಬಳಿ ತನ್ನ ಬ್ಯಾಂಕ್ ಖಾತೆಯಲ್ಲಿ 19,300 ರೂಪಾಯಿಗಳಿದ್ದು, ಅದನ್ನು ಪಡೆದುಕೊಳ್ಳುವಂತೆ ಹೇಳಿದ್ದರು.

ಅದರಂತೆ ಜಿತು ಮುಂಡ ಹಣ ಪಡೆದುಕೊಳ್ಳಲು ಬ್ಯಾಂಕ್‌ಗೆ ಹಲವಾರು ಬಾರಿ ತೆರಳಿದಾಗ ಬ್ಯಾಂಕ್ ಸಿಬ್ಬಂದಿ ಖಾತಾದಾರರನ್ನು ಕರೆದುಕೊಂಡು ಬಾ ಇಲ್ಲವೇ ನೀನು ಹೇಳುವ ಹಾಗೆ ಮೃತಪಟ್ಟಿದ್ದರೆ ಮರಣ ಪತ್ರದ ಸಾಕ್ಷಿ ತೆಗೆದುಕೊಂಡು ಬಾ ಎಂದಿದ್ದರು. ಕಡು ಬಡವನಾಗಿರುವ ಜಿತು ಮುಂಡಗೆ ಮರಣ ಪತ್ರ ಪಡೆದುಕೊಳ್ಳುವುದು ಕಷ್ಟಕರವಾಗಿದ್ದ ಕಾರಣ ಆತ ತನ್ನ ಸಹೋದರಿಯ ಹೆಣವನ್ನು ಸಮಾಧಿಯಿಂದ ತೆಗೆದು ಬ್ಯಾಂಕ್‌ಗೆ ತಂದಿದ್ದಾನೆ. ಬ್ಯಾಂಕ್‌ನಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿದ್ದ ಸಮಾಧಿಯಿಂದ ಸಹೋದರಿಯ ಹೆಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಅರ್ಧ ಮುಚ್ಚಿ ಹೆಗಲೆ ಮೇಲೆ ಹೊತ್ತುತಂದಿದ್ದಾನೆ.
ಈ ದೃಶ್ಯವನ್ನು ಕಂಡ ರಸ್ತೆಯಲ್ಲಿದ್ದವರು ವಿಡಿಯೊ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. 19,300 ರೂ ಹಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಹೆಣವನ್ನು ಸಮಾಧಿಯಿಂದ ಬ್ಯಾಂಕ್‌ಗೆ ಹೊತ್ತು ತುರುತ್ತಾನೆ ಎಂದರೆ ದೇಶದ ಬಡತನ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆದಿವೆ.
