ಉಳಾಯಿಬೆಟ್ಟು ಸಮೀಪದ ಇಡ್ಮಾದ ಬಳಿ ಫಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮತ್ತು ಸಾಗಾಟವನ್ನು ಪತ್ತೆ ಹಚ್ಚಿರುವ ಎಸಿಪಿ ಧನ್ಯಾ ಎನ್.ನಾಯಕ್ ನೇತ್ರತ್ವದ ಪೊಲೀಸ್ ತಂಡ ಕೋಟ್ಯಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉಳಾಯಿಬೆಟ್ಟುವಿನ ಇಡ್ಮಾದ ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅನ್ನುವ ಖಚಿತ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ಎನ್ ನಾಯಕ್ ನೇತೃತ್ವದ ತಂಡದೊಂದಿಗೆ ಕಂಕನಾಡಿ ಗ್ರಾಮಾಂತರ ಪೊಲೀಸರು ಮತ್ತು ಸ್ಥಳೀಯ ಪಂಚಾಯಿತಿ ಅಧಿಕಾರಿ ದಾಳಿ ನಡೆಸಿದಾಗ ಇಲಾಖಾ ವಾಹನ ಬರುತ್ತಿದ್ದಂತೆ ಲಾರಿಗಳಲ್ಲಿದ್ದ ಚಾಲಕರು ಮತ್ತು ಕಾರ್ಮಿಕರು ಪಕ್ಕದ ತೋಟದ ಮೂಲಕ ಓಡಿ ಪರಾರಿಯಾಗಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಮಾರ್ಗದರ್ಶನದಲ್ಲಿ DCP ಗಳಾದ ಅಂಶುಕುಮಾರ್, ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ದಕ್ಷಿಣ ಉಪವಿಭಾಗದ ACP ಧನ್ಯಾ ಎನ್.ನಾಯಕ್ ನೇತ್ರತ್ವದ ತಂಡ ದಾಳಿ ನಡೆಸಿ ಅಕ್ರಮ ಸ್ವತ್ತುಗಳನ್ನು,ಬೃಹತ್ ಪ್ರಮಾಣದ ಮರಳನ್ನು ವಶಪಡಿಸಿಕೊಂಡು, ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಸದ್ರಿ ಸ್ಥಳದಲ್ಲಿ ಮರಳು ತುಂಬಿಸಲು ಉಪಯೋಗಿಸಿತ್ತಿದ್ದ ಡೋಜರ್ ಮತ್ತು ಜೆಸಿಬಿ,ಮರಳು ತುಂಬಿಸಿದ್ದ ಎರಡು ಟಿಪ್ಪರ್ ಲಾರಿ ಮತ್ತು ಎಂಟು ಖಾಲಿ ಟಿಪ್ಪರ್ ಗಳನ್ನು ಹಾಗೂ ದಾಸ್ತಾನು ಇರಿಸಲಾಗಿದ್ದ ಮರಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಂಕನಾಡಿ ಗ್ರಾಮಾಂತರ ಠಾಣೆಗೆ ಯಾವುದೇ ಮಾಹಿತಿ ನೀಡದೆ ದಿಢೀರ್ ದಾಳಿ ನಡೆಸಲಾಗಿದೆ.