ಆರೋಗ್ಯ ಸಚಿವರು ಜಿಲ್ಲೆಯವರು, ಆಸ್ಪತ್ರೆಗೆ ಬಡಿದಿರುವ ರೋಗವ ವಾಸಿ ಮಾಡಿಯಾರಾ.?
ಇದು ನಮ್ಮ ಆರೋಗ್ಯ ಮಂತ್ರಿ ಮಹೋದಯರ ಜಿಲ್ಲೆಯ ಪಕ್ಕದ ಊರು ಶಿರ್ತಾಡಿ. ಇಲ್ಲಿ ಬಹಳ ಹಳೇ ಕಾಲದ ಸರಕಾರಿ ಆಸ್ಪತ್ರೆವೊಂದಿದೆ. ಈ ಆಸ್ಪತ್ರೆ ಸರಿ-ಸುಮಾರು ಹನ್ನೆರಡು ಊರುಗಳಿಗೆ ಕೇಂದ್ರವಾಗಿರುವ ಬಡವರ ಸರಕಾರಿ ಆಸ್ಪತ್ರೆ. ಶಿರ್ತಾಡಿ ಆಸುಪಾಸಿನ ಹಲವು ಗ್ರಾಮಗಳಿಗೆ ಸರಕಾರಿ ಆಸ್ಪತ್ರೆ ಅಂತ ಇರುವುದು ಇದೊಂದೇ ಆರೋಗ್ಯ ಮಂತ್ರಿಗಳೇ..
ಸುಮಾರು ವರ್ಷಗಳ ಇತಿಹಾಸ ಹೊಂದಿರುವ ಈ ಆಸ್ಪತ್ರೆ ಈಗ ಈ ನಾಡಿನ ನಾಗರಿಕರಿಗೆ ಬೇಕು. ಆದರೆ.. ಆರೋಗ್ಸ ಇಲಾಖೆಗೆ ಬೇಡ ಎಂಬಂತಿದೆ. ಹಲವಾರು ಘಟಾನುಘಟಿ ವೈದ್ಯರುಗಳು ಇಲ್ಲಿ ಸೇವೆ ನೀಡಿ, ಇಂದಿಗೂ ಜನ ಮಾನಸದಲ್ಲಿ ನೆನಪಿಡುವಂತಹ ಸಾರ್ಥಕ ಸೇವೆಗೈದು ಜನರ ಮನಃ ಗೆದ್ದಿದ್ದಾರೆ.
ಡಾ.ಕಾಮತ್, ಬಿ.ಬಿ.ಶೆಣೈ, ಡಾ.ಪ್ರಕಾಶ್, ಡಾ.ನಸೀಬಾ, ಡಾ.ಹಾದಿಯಾ ಹೀಗೆ ಹಲವು ಮಂದಿ ವೈದ್ಯರುಗಳು, ದಾದಿಯರಾದ ಪ್ರತಿಭಾ, ಅನಸೂಯ ರವರಂತವರು ಇಲ್ಲಿನ ಬಡ ರೋಗಿಗಳಿಗಿನ್ನು ನೆನಪಿಟ್ಟು ಕೊಳ್ಳವಂತ ಸೇವೆಗೈದು ತಮ್ಮ ಕರ್ತವ್ಯದಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ. ಕಂಪೌಂಡರ್ ಬಾಬಣ್ಣ, ಪಿ.ಕೆ.ರಾಜಣ್ಣ, ರೋಗಿಗಳಿಗೆ ಅಡುಗೆ ಮಾಡಿ ಕೊಡುತ್ತಿದ್ದ ಶಿರ್ತಾಡಿಯ ಗೀತಕ್ಕ ಅವರ ಹೆಸರೂ ಶಾಶ್ವತವಾಗಿ ನೆನಪಿನಲ್ಲುಳಿವಂತೆ ಮಾಡಿದ್ದಾರೆ. ಶಿರ್ತಾಡಿ ಆಸುಪಾಸಿನ ನಲವತ್ತು ದಾಟಿದ ಹೆಚ್ಚಿನವರ ಹೆರಿಗೆ ಇದೇ ಆಸ್ಪತ್ರೆಯಲ್ಲಿ ನಡೆದಿದೆ. ಅಂದಿನ ವೈದ್ಯ ರಾಮಣ್ಣ ಶೆಟ್ಟರು ಕೆಲ ಸಂದರ್ಭಗಳಲ್ಲಿ ತನ್ನ ಕಾರಿನಲ್ಲೇ ಗರ್ಭಿಣಿಯರ ಮನೆಗೇ ಹೋಗಿ ಹೆರಿಗೆ ಮಾಡಿಸುತ್ತಿದ್ದ ಕಾಲವೂ ಇತ್ತು. ಈ ಆಸ್ಪತ್ರೆಯಲ್ಲಿ ಐದಾರು ಹಾಸಿಗೆಗಳ ವ್ಯವಸ್ಥೆ ಇತ್ತು. ಬೇರೆ ಬೇರೆ ಕಾಯಿಲೆಯ ರೋಗಿಗಳು, ಗರ್ಭಿಣಿ ಮಹಿಳೆಯರು ಹೆರಿಗೆಗಾಗಿ ಇಲ್ಲೇ ದಾಖಲಾಗುತ್ತಿದ್ದರು. ಸಾಕಷ್ಟು ಸಂಖ್ಯೆಯ ಸಿಬ್ಬಂದಿಗಳೂ ಇದ್ದರು. ಈ ಆಸ್ಪತ್ರೆ 24×7 ಸೇವೆಯ ಬಡವರ ಆಸ್ಪತ್ರೆಯಾಗಿತ್ತು. ಅಂದು ಎಲ್ಲವೂ ಇತ್ತು. ಇಂದು ಸರಕಾರಿ ಅಸ್ಪತ್ರೆಗಳ ಇಲ್ಲವಾಗುವಂತಿದೆ.

ಶಿರ್ತಾಡಿ, ವಾಲ್ಪಾಡಿ, ಅಳಿಯೂರು, ದರೆಗುಡ್ಡೆ, ಮಾಂಟ್ರಾಡಿ, ಬೋರುಗುಡ್ಡೆ, ಪೆರಾಡಿ, ಸಾವ್ಯ, ಕಾಶಿಪಟ್ಣ, ಪಡುಕೊಣಾಜೆ, ಮೂಡುಕೊಣಾಜೆ, ಮಕ್ಕಿ, ಮರೋಡಿ, ದಡ್ಡಾಲ್ಪಲ್ಕೆ, ಆನೆಗುಡ್ಡೆ ಹೀಗೆ ಇನ್ನೂ ಕೆಲವು ಊರುಗಳ ಬಡರೋಗಿಗಳಿಗೆ ಇದ್ದದ್ದು ಇದೇ ಬಡವರ ಸರಕಾರಿ ಆಸ್ಪತ್ರೆ. ನಮ್ಮ ಜಿಲ್ಲೆಯ, ನೆರೆಯ ಕ್ಷೇತ್ರದವರಾದ ಮಾನ್ಯ ಆರೋಗ್ಯ ಸಚಿವರೇ.!
ಅದೆಷ್ಟು ಮದ್ಯರಾತ್ರಿಗಳಲ್ಲಿ ವೈದ್ಯರ, ನರ್ಸ್ ಗಳ ಕ್ವಾಟ್ರಸ್ ನ ಬೆಲ್ ಹೊಡೆದ ತಕ್ಷಣ ಎದ್ದು ಬಿದ್ದು ಓಡೋಡಿ ಬಂದು, ರೋಗಿಗಳ ತಪಾಸಣೆ ನಡೆಸಿ, ಯೋಗಕ್ಷೇಮ ವಿಚಾರಿಸಿ, ಮದ್ದು ನೀಡುತ್ತಿದ್ದುದರಿಂದಲೇ ಇಂದು ಆ ವೈದ್ಯರ ಹೆಸರು ಜನ ಮಾನಸದಲ್ಲಿ ಅಚ್ಚಳಿದಿದೆ. ಶಿರ್ತಾಡಿ, ಅಳಿಯೂರು ಹಾಗೂ ಪಕ್ಕದ ಊರಿನ ಶಾಲಾ ಮಕ್ಕಳಿಗೆ ಏನಾದರೂ ಸಂಭವಿಸಿದರೆ ಇದೇ ಆಸ್ಪತ್ರೆಯ ಮದ್ದು ಬೇಕಿತ್ತು. ಮರುದಿನ ರಜಾ ಅರ್ಜಿಯ ಜೊತೆಗೆ ಈ ಆಸ್ಪತ್ರೆಯ ವೈದ್ಯರು ಬರೆದ ಮುದ್ದಿನ ಮದ್ದಿನ ಚೀಟಿಯೂ ಕೂಡಾ ಅಗತ್ಯವಿತ್ತು.!
ಇಷ್ಟೆಲ್ಲಾ ಇತಿಹಾಸವಿರುವ ಈ ಆಸ್ಪತ್ರೆಯ ಅವಸ್ಥೆ..! ಈಗ ಯಾಕೋ ಸರಿಯಿಲ್ಲ, ಬಿಕೋ ಅನ್ನುತ್ತಿದೆ. ಅದೆಷ್ಟೋ ಬಡ ಜನರ ಜೀವ ರಕ್ಷಿಸಿದ, ಜನರ ಪಾಲಿನ ಆಶಾಕಿರಣವಾಗಿದ್ದ ಆಸ್ಪತ್ರೆ ಇದೀಗ ಅದ್ಯಾವುದೋ ಕಾಯಿಲೆಗೆ ಜಾರಿದೆ. ಹಳೆಯ ಸುಂದರವಾದ ಕಟ್ಟಡದ ಕೆಲವು ಕೊಠಡಿಗಳು, ಬಾಗಿಲುಗಳಿನ್ನೂ ಗಟ್ಟಿ ಮುಟ್ಟಾಗಿದೆ. ಆದರೆ ಆಸ್ಪತ್ರೆಯ ಸುತ್ತಮುತ್ತಲು ಅನಾರೋಗ್ಯದ ದರ್ಶನವಾಗುತ್ತಿದೆ. ಇದಕ್ಕೆಲ್ಲಾ ಕಾರಣ ಇಲ್ಲಿಗೊಬ್ಬರು ಪರ್ಮನೆಂಟಾದ ವೈದ್ಯರಿಲ್ಲ. ಒಬ್ಬರೇ ಸ್ಟಾಫ್ ನರ್ಸ್ ಇರೋದು. ಸಿಬ್ಬಂದಿಗಳಿದ್ದರೂ ಅವರಿಗೆ ಫೀಲ್ಡ್ ವರ್ಕ್ ನ ಜವಾಬ್ದಾರಿ. ಉಳಿದ ಸಿಬ್ಬಂದಿಗಳಿದ್ದಾರೆ, ಅವರೇ ಈಗಿನ ಇಲ್ಲಿನ ವೈದ್ಯರು.! ಅಂದರೆ ಮದ್ದಿಗೆಂದು ಬರುವ ರೋಗಿಗಳನ್ನು ಚೆನ್ನಾಗಿ ವಿಚಾರಿಸುತ್ತಾರೆ. ಆದರೆ ವೈದ್ಯರಿಲ್ಲ. ಮದ್ದು ಕೊಡಲು ವೈದ್ಯರನ್ನೇ ಸಂಪರ್ಕಿಸಬೇಕಾಗುತ್ತದೆ.

ಇಲ್ಲಿ 24X7 ಸೇವೆಬೇಕು. ಸುತ್ತಮುತ್ತಲಿನ ಜನರಿಗೆ ಇದು ಕೇಂದ್ರಾಸ್ಪತ್ರೆಯಾಗಬೇಕು. ಅದರ ಎಲ್ಲಾ ಅರ್ಹತೆಗಳನ್ನು ಈ ಅಸ್ಪತ್ರೆ ಪಡಕೊಂಡಿದೆ. ಆದರೆ ಸಂಬಂಧ ಪಟ್ಟ ಇಲಾಖೆಯ ಉನ್ನತರಿಗೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಖಾಯಂ ವೈದ್ಯರು ಬೇಕು ಅಂತ ಹೋರಾಟಗಾರ ಸುದತ್ತ ಜೈನ್ ಎಂಬವರು ಕೆಲವು ದಿನ ರಾತ್ರಿ-ಹಗಲು ಉಪವಾಸ ಸತ್ಯಾಗ್ರಹ ಮಾಡಿದ್ದರು. ಅಂದಿನ ಜನಪ್ರತಿನಿಧಿಗಳೆನಿಸಿಕೊಂಡವರು, ಅಧಿಕಾರಿಗಳು ‘ಬಂದು ಮುಂದಕ್ಕೆ ಮಾಡೋಣ’ ಅಂತ ಬೊಂಡ ಕುಡಿಸಿ, ಭರವಸೆ ನೀಡಿ, ನಾಮ ಬಳಿದು, ಹೋದವರು ತಿರುಗಿನ್ನು ನೋಡಿಲ್ಲ.
ಈಗ ಇಲ್ಲಿನ ಸಂಕಟ ಹೇಳಿ ಪ್ರಯೋಜನವಿಲ್ಲ. ಮತ್ತೆ ಅದೇ ಅವಸ್ಥೆ. ಪರ್ಮನೆಂಟ್ ವೈದ್ಯರಿಲ್ಲ.! ವಾರದಲ್ಲಿ ಒಂದೇ ದಿನ ಬರುವ ವೈದ್ಯರು. ಪಾಪ ಬೆಳುವಾಯಿಯ ವೈದ್ಯರಾಗಿರುವ ಡಾ.ಭರತ್ ಅವರಿಗೆ ಈ ಆಸ್ಪತ್ರೆಯ ಚಾರ್ಜ್. ಅವರಿಗೆ ಇನ್ನೂ ಹಲವಾರು ಕಡೆಯ ಚಾರ್ಜ್ ನೋಡಿಕೊಳ್ಳಬೇಕು. ಹಾಗಾಗಿ ವಾರದಲ್ಲಿ ಒಂದು ದಿನ ಬಂದು ಹೋಗುತ್ತಾರೆ. ಹನ್ನೆರಡಕ್ಕೂ ಅಧಿಕ ಗ್ರಾಮಗಳನ್ನು ಹೊಂದಿರುವ ಈ ಆಸ್ಪತ್ರೆಗೆ ವಾರದಲ್ಲಿ ಒಂದು ದಿನ ವೈದ್ಯರು ಬಂದರೆ ಸಾಕಾ.? ನಮ್ಮ ಜಿಲ್ಲೆಯವರೇ ಆದ ಮಾನ್ಯ ಆರೋಗ್ಯ ಸಚಿವರೇ.. ಇತ್ತ ಗಮನ ಹರಿಸಿ.
ಇಲ್ಲಿ ದಿನಂಪ್ರತಿ ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಮಧ್ಯಾಹ್ನದ ವೇಳೆಗೆ ಕೆಲವೊಮ್ಮೆ ರೋಗಿಗಳ ಸಂಖ್ಯೆ ತೊಂಭತ್ತು ದಾಟುತ್ತದೆ. ಆದರೆ ಮಧ್ಯಾಹ್ನದ ಮೇಲೆ ಬಾಗಿಲು ಮುಚ್ಚುತ್ತದೆ. ಕಾರಣ ವೈದ್ಯರಿಲ್ಲ, ಸಿಬ್ಬಂದಿಗಳಿಲ್ಲ ಎನ್ನುವ ಸಮಸ್ಯೆಯನ್ನು ಎದುರಿಸುತ್ತಿರುವ ಶಿರ್ತಾಡಿಯ ಸರಕಾರಿ ಆಸ್ಪತ್ರೆಗೊಂದು ಒಳ್ಳೆಯ ಚಿಕಿತ್ಸೆ ನೀಡಬೇಕಾಗಿದೆ. ಈಗ ಆರೋಗ್ಯ ಸಚಿವರಾಗಿರುವ ಜಿಲ್ಲೆಯವರೇ ಆದ ಯು.ಟಿ.ಖಾದರ್ ಸಾಹೇಬರೇ.. ನಿಮಗೆ ಇಲ್ಲಿನ ಸ್ಥಿತಿಗತಿ ಗೊತ್ತಿರಬಹುದು, ಆರ್ಥವಾಗಿರಬಹುದು. ಈ ಆಸ್ಪತ್ರೆಯ ಬಗ್ಗೆ ಸ್ವಲ್ಪ ಮುತುವರ್ಜಿವಹಿಸಿ ಖಾಯಂ ವೈದ್ಯರು, ಸಿಬ್ಬಂದಿಗಳನ್ನು ನೇಮಕಗೊಳಿಸಿ, ಮತ್ತೆ ಹಿಂದಿನಂತೆ 24×7 ಆಸ್ಪತ್ರೆಯನ್ನಾಗಿ ಮಾಡಲು ಇದು ಸಕಾಲ. ತಾವು ಬೆಂಗಳೂರು ನಗರದ ಕೆಲವು ಆಸ್ಪತ್ರೆಗಳಿಗೆ ರಾತ್ರೋರಾತ್ರಿ ದಿಢೀರ್ ಬೇಟಿ ಕೊಟ್ಟ ಹಾಗೆ ಇಲ್ಲಿಯು ಹಗಲು ಭೇಟಿ ಕೊಟ್ಟು, ನಾಗರಿಕರ ಸಮಸ್ಯೆಯನ್ನು ಪರಿಹರಿಸುವ ಪ್ರಮಾಣಿಕ ಪ್ರಯತ್ನವ ಮಾಡುವಿರೆಂಭ ಭರವಸೆಯಲ್ಲಿದ್ದಾರೆ ಇಲ್ಲಿನ ನಾಗರಿಕರು.
