ಗಂಜಿಮಠ: ರಾಷ್ಟ್ರೀಯ ಹೆದ್ದಾರಿಯಲ್ಲೇ ಹರಿಯುತ್ತಿದೆ ಡ್ರೈನೇಜ್ ನೀರು; ರೋಗದ ಭೀತಿಯಲ್ಲಿ ನಾಗರಿಕರು. ಗಂಜಿಮಠ ಪಿಡಿಓ, ಜನ ಪ್ರತಿನಿಧಿಗಳು ಮೌನ

ಕರಾವಳಿ

ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೂಂಜಾ ಪೆಟ್ರೊಲ್ ಪಂಪ್ ಎದುರುಗಡೆ ಇರುವ ಡಿ’ಕುನ್ಹಾ ಕ್ರಸ್ಟ್ ವಸತಿ ಸಮುಚ್ಚಾಯದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನ ತೊಂದರೆ ಪಡುತ್ತಿದ್ದಾರೆ. ಮಾತ್ರವಲ್ಲದೆ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ. ವಸತಿ ಸಮುಚ್ಚಾಯದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ತ್ಯಾಜ್ಯದಿಂದ ತುಂಬಿದ ಕೊಳಚೆ ನೀರು ಸರಾಗವಾಗಿ ರಸ್ತೆಯ ಮೇಲೆ ಹರಿಯುತ್ತಿದೆ. ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಆದರೆ ಗಂಜಿಮಠ ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಇತ್ತ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ.

ಡಿ’ಕುನ್ಹಾ ಕ್ರಸ್ಟ್ ಮತ್ತು ಕೈಕಂಬ ಹೃದಯ ಭಾಗದ ಬಿ.ಎಸ್ ಟವರ್ ವಸತಿ ಸಮುಚ್ಚಾಯದಲ್ಲಿರುವ ಡ್ರೈನೇಜ್ ಮತ್ತು ತಂಡಾಸಿನ ನೀರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ರಸ್ತೆಗೆ ಬಿಡುತ್ತಿದ್ದು,ಇದರ ತ್ಯಾಜ್ಯದಿಂದ ಕೂಡಿದ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದರಿಂದ ಕಿರಿಕಿರಿಯಾಗುತ್ತಿದ್ದು,ವಾಹನ ಸವಾರರು ಬೇರೆ ಮಾರ್ಗವಿಲ್ಲದೇ ಕೊಳಚೆ ನೀರಿನ ಮೇಲೆಯೇ ಓಡಾಡುವಂತಾಗಿದೆ.ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಇನ್ನಷ್ಟು ಆರೋಗ್ಯದ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಗಳ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ.

ಗಂಜಿಮಠ ಗ್ರಾ.ಪಂ ವ್ಯಾಪ್ತಿಯ ಕೆಲವು ಸಮುಚ್ಚಾಯಗಳು ಅಕ್ರಮ ಕಟ್ಟಡವಾಗಿದ್ದು, ಅದರಲ್ಲಿ ಇದು ಒಂದು.ಈ ಕಟ್ಟಡದಲ್ಲಿ ಕೇವಲ 23 ರೂಮುಗಳಿಗೆ ಮಾತ್ರ ಡೋರ್ ನಂಬ್ರ ನೀಡಲಾಗಿದೆ. ಆದರೆ ಇಲ್ಲಿ 36 ಕ್ಕೂ ಮಿಕ್ಕ ರೂಂ ಗಳಿವೆ. ಬಿಗ್ ಬ್ಯಾಗ್ ನಲ್ಲಿರುವ ಹೊರ ರಾಜ್ಯದ ಕಾರ್ಮಿಕರಿಗೆ ಒಬ್ಬೊಬ್ಬರಿಗೆ ತಲಾ 2,300 ರೂಪಾಯಿಯಂತೆ ಬಾಡಿಗೆಗೆ ನೀಡಲಾಗಿದೆ.ಒಂದು ರೂಮಿನಲ್ಲಿ 5-6 ಮಂದಿ ವಾಸವಿದ್ದು, ದನದ ಕೊಟ್ಟಿಗೆಯಂತಿದೆ. ಈ ಕಟ್ಟಡದಲ್ಲಿ ಸರಿ-ಸುಮಾರು 180 ಕ್ಕೂ ಮಿಕ್ಕ ಮಂದಿ ಕಾರ್ಮಿಕರು,ಗಂಡು-ಹೆಣ್ಣು ಒಟ್ಟಾಗಿ ವಾಸ ಮಾಡುತ್ತಿದ್ದಾರೆ. ಮುಂದಕ್ಕೆ ಇದೊಂದು ಅಕ್ರಮ ಚಟುವಟಿಕೆಯ ತಾಣವಾಗಬಹುದು ಎಂದು ಸಾರ್ವಜನಿಕರು ದೂರಿದ್ದಾರೆ. ಇವರು ಉಪಯೋಗಿಸಿದ ಶೌಚಾಲಯದ ಗಲೀಜು ನೀರನ್ನು ಸಾರ್ವಜನಿಕ ರಸ್ತೆಗೆ ಹರಿದು ಬಿಡುತ್ತಿದ್ದು, ರಸ್ತೆ ಪಕ್ಕದಲ್ಲಿರುವ ಗುಂಡಿಗಳಲ್ಲಿ ಈ ತ್ಯಾಜ್ಯದ ನೀರು ತುಂಬಿ ಸೊಳ್ಳೆ ಉತ್ಪತ್ತಿಯಾಗಿ ಪರಿಸರದಲ್ಲಿ ಮಲೇರಿಯಾ, ಡೆಂಗ್ಯೂಗಳಂತಹ ಮಾರಕ ರೋಗ ಬರುವ ಸಾಧ್ಯತೆ ಹೆಚ್ಚಿದೆ.ಈ ಮಾಲಿನ್ಯವಾದ ಗಲೀಜು ನೀರು ಹರಿದು ಹೋಗಿ ಪಕ್ಕದಲ್ಲೆ ಇರುವ ಪಂಚಾಯತ್ ಗೆ ಸಂಬಂಧ ಪಟ್ಟ ಸಾರ್ವಜನಿಕರು ಉಪಯೋಗಿಸುವ ಕೊಳವೆ ಬಾವಿಗೆ ಸೇರುವ ಸಾಧ್ಯತೆ ಬಹಳ ಇದೆ. ಪರಿಸರದ ನಿವಾಸಿಗಳು ಸೊಳ್ಳೆಕಾಟದಿಂದ ಕಂಗಾಲಾಗಿದ್ದಾರೆ. ಪರಿಸರದ ತೋಡುಗಳಲ್ಲಿ, ಹೊಂಡಗಳಲ್ಲಿ ನೀರು ನಿಂತು ಪಾಚಿ ಕಟ್ಟಿರುತ್ತದೆ. ಸದ್ರಿ ಸಮುಚಾಯಕ್ಕೆ stp ವ್ಯವಸ್ಥೆ ಇರುವುದಿಲ್ಲ. ಇಲ್ಲಿನ ಅವ್ಯವಸ್ಥೆಯಿಂದ ಪರಿಸರದ ನಿವಾಸಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಇದು ಅಕ್ರಮ ಸಮುಚ್ಚಾಯವಾಗಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂದ ಪಟ್ಟ ಇಲಾಖೆಗೆ, ಪಂಚಾಯತ್ ಅಭಿವೃದ್ದಿ ಅಧಿಕಾರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಎಂದು ನಾಗರಿಕರು ತಮ್ಮ ಅಹವಾಲು ಹೇಳಿ ಕೊಂಡಿದ್ದಾರೆ. ಇಲ್ಲಿನ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಾತ್ರ ತನ್ನ ಜೇಬು ತುಂಬಿಸಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ..ಈತ ಕಣ್ಣು,ಮೂಗು ಮುಚ್ಚಿ ಕಾಂಚಣದ ಬೆನ್ನ ಹತ್ತಿದ್ದ ಪರಿಣಾಮ ಇಂತಹ ಪರಿಸ್ಥಿತಿ ಬಂದೊದಗಿದೆ ಎಂಬ ಅಭಿಪ್ರಾಯ ನಾಗರಿಕರದ್ದು.!

ಶೌಚಾಲಯದ ಕಲುಷಿತ ನೀರು ಚರಂಡಿಗಳಿಗೆ ಬಿಡಲಾಗುತ್ತಿದೆ.ಆ ನೀರು ಭೂಮಿಗೆ ಹೀರಿ ಅದು ಅಲ್ಲಿರುವ ಬಾವಿ,ಕೊಳವೆ ಬಾವಿಯ ನೀರಿನೊಂದಿಗೆ ಮಿಶ್ರಣವಾಗಿ ಮಾರಕ ರೋಗಗಳಿಗೆ ಕಾರಣವಾಗುತ್ತಿದೆ. ಇಂತಹ ನೀರು ಉಪಯೋಗಿಸಿದಲ್ಲಿ ಒಬ್ಬ ಮನುಷ್ಯನ ಅವಸ್ಥೆ ಏನಾಗಬಹುದು ಎಂಬುದು ಊಹಿಸಲೂ ಅಸಾಧ್ಯ.ಈ ಸಮಸ್ಯೆಗೆ ಮೂಲ ಕಾರಣ ಶೌಚಾಲಯದ ನೀರನ್ನು ಡ್ರೈನೇಜ್ ಗೆ ಕೊಡದೆ ಹೊರಗೆ ಬಿಟ್ಟಿದ್ದೇ ಆಗಿದೆ. ಇಷ್ಟೊಂದು ದಿನ ಹಾಗೆಯೇ ಬಿಟ್ಟು ನಿರ್ಲಕ್ಷ್ಯ ತೋರಿದ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಅದನ್ನು ಪ್ರಶ್ನಿಸದ ನಾವೇ ಅದಕ್ಕೆ ಕಾರಣಕರ್ತರಾಗಿದ್ದೇವೆ.”ನಮ್ಮ ಹಕ್ಕು, ನಮ್ಮ ಆರೋಗ್ಯವನ್ನು ರಕ್ಷಿಸಲು ಮೌನವಾಗಿರದೆ ಅದನ್ನು ಪ್ರಶ್ನಿಸುವಲ್ಲಿ,ಪ್ರಶ್ನಿಸದೇ ಇದ್ದಲ್ಲಿ,ಇದು ಹಲವು ಜೀವಗಳು ಬಲಿಯಾಗಲು ಕಾರಣವಾಗಬಹುದು.”ಇಲ್ಲಿನ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಲೇ ಸ್ಪಂಧಿಸಬೇಕಾಗಿದೆ. ಇಲ್ಲದಿದ್ದಲ್ಲಿ ಜನರ ಜೀವನದ ಮೇಲೆ ಚೆಲ್ಲಾಟವಾಡಲು ಹೋಗಿ, ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾದೀತು.

ಗಂಜಿಮಠ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಮೂಲಭೂತ ಸೌಕರ್ಯದ ಬಗ್ಗೆಯಾಗಲಿ,ಶುಚಿತ್ವದ ಬಗ್ಗೆಯಾಗಲಿ ಗಮನ ಕೊಡದೆ ಇರುವುದು ವಿಪರ್ಯಾಸ ಎಂದೇ ಹೇಳಬೇಕು. ಹೊರ ರಾಜ್ಯದಿಂದ ಕೆಲಸಕ್ಕಾಗಿ ಬರುವ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಸಂಗ್ರಹಿಸದೆ,ಅವರ ಪೂರ್ವಪರ ಅರಿಯದೆ,ಸಂಬಂಧ ಪಟ್ಟ ಇಲಾಖೆಯ ಗಮನಕ್ಕೂ ತರದೆ ಈ ಪರಿಸರದಲ್ಲಿ ಅವರಿಗೆ ಬೇಕಾಬಿಟ್ಟಿಯಾಗಿ ಹಣದ ಆಸೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಈ ಪರಿಸರದಲ್ಲಿ ಅಮಲು ಪದಾರ್ಥದ ಘಾಟಿನ ವಾಸನೆ ಮೂಗಿಗೆ ಬಡಿಯುತ್ತಿದೆ. ಇಲ್ಲಿನ ಕಾನೂನು ಪಾಲಕರು ಇದೆಲ್ಲವನ್ನು ಬಿಟ್ಟು ಕಲೆಕ್ಷನ್ ವ್ಯವಹಾರದಲ್ಲಿ ಬ್ಯುಸೀ ಆಗಿದ್ದಾರೆ.ಆದುದರಿಂದ ಸಂಬಂಧ ಪಟ್ಟವರು ಕೂಡಲೇ ಸಾರ್ವಜನಿಕರ ಆರೋಗ್ಯದ ಹಾಗೂ ಭದ್ರತೆಯ ಹಿತದೃಷ್ಠಿಯಿಂದ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕಾಗಿದೆ.