ಪತ್ರಕರ್ತರ ಅಂಕಣದಲ್ಲಿ ಬರೆಯಲಾದ ಸುಳ್ಳು ಮಾಹಿತಿ ಅಪರಾಧಕ್ಕೆ ಸಮಾನವಲ್ಲ. ಅದೊಂದು ತಪ್ಪಾದ ವರದಿಯಷ್ಟೆ: ಸುಪ್ರೀಂ ಕೋರ್ಟ್

ರಾಷ್ಟ್ರೀಯ

“ಮಣಿಪುರ ಹಿಂಸಾಚಾರ ಕುರಿತಂತೆ ಪತ್ರಕರ್ತರ ಅಂಕಣದಲ್ಲಿ ಬರೆಯಲಾದ ಸುಳ್ಳು ಮಾಹಿತಿ ಅಪರಾಧವಲ್ಲ. ಅದೊಂದು ತಪ್ಪಾದ ವರದಿಯಷ್ಟೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ ಪತ್ರಕರ್ತರ ಬಂಧನಕ್ಕೆ ನೀಡಿದ ಮಧ್ಯಂತರ ತಡೆಯನ್ನು ಎರಡು ವಾರಗಳ ಕಾಲ ಮುಂದುವರಿಸಿದೆ.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ನಾಲ್ವರು ಸದಸ್ಯರ ವಿರುದ್ಧ ಮಣಿಪುರ ಸರಕಾರ ಸಲ್ಲಿಸಿದ್ದ ಎಫ್ ಐ ಆರ್ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್, ನ್ಯಾ.ಪರ್ದಿವಾಲಾ, ನ್ಯಾ.ಮನೋಜ್ ಮಿಶ್ರಾ ಅವರ ತ್ರಿಸದಸ್ಯ ಪೀಠ “ಐಪಿಸಿ ಸೆಕ್ಷನ್ 153ಎ ಅಡಿ ಯಾವುದೇ ಘಟನೆ ಬಗ್ಗೆ ಪತ್ರಕರ್ತರು ಬರೆಯುವ ಅಂಕಣದಲ್ಲಿ ತಪ್ಪಾಗಿ ಬರೆದಂತಹ ಮಾಹಿತಿ ಅಪರಾಧಕ್ಕೆ ಸಮಾನವಲ್ಲ. ಅದೊಂದು ತಪ್ಪಾದ ವರದಿಯಷ್ಟೇ. ತಪ್ಪು ಮಾಹಿತಿ ವರದಿ ಮಾಡಿದ ಎಲ್ಲಾ ಪತ್ರಕರ್ತರನ್ನು ವಿಚಾರಣೆ ಮಾಡುತ್ತೀರಾ?” ಎಂದು ಪ್ರಶ್ನೆ ಮಾಡಿದೆ.

“ಮಣಿಪುರ ಸರ್ಕಾರ ಸಲ್ಲಿಸಿದ್ದ ಎಫ್ ಐ ಆರ್ ನಲ್ಲಿ ಪತ್ರಕರ್ತರ ವಿರುದ್ಧ ಯಾವುದೇ ಗುರುತರ ಆರೋಪ ಮಾಡಿಲ್ಲ. ಹೀಗಿರುವಾಗ ಏಕೆ ಎಫ್ ಐ ಆರ್ ರದ್ದು ಮಾಡಬಾರದು” ಎಂದು ಸಿಜೆಐ ಚಂದ್ರಚೂಡ್ ಸರಕಾರಿ ವಕೀಲರನ್ನು ಪ್ರಶ್ನಿಸಿದರು.