ನಿಜ್ಜರ್‌ ಹತ್ಯೆಯ ಬಗೆಗಿನ ಗುಪ್ತಚರ ಮಾಹಿತಿಯನ್ನು ಅಮೆರಿಕದ ಅಧಿಕಾರಿಗಳು, ಕೆನಡಾ ಜೊತೆ ಹಂಚಿಕೊಂಡರೇ.? ಅಥವಾ ಕೆನಡಾದ ಅಧಿಕಾರಿಗಳು ಕದ್ದಾಲಿಕೆಯ ಮೂಲಕ ಪಡಕೊಂಡರೇ.?

ಅಂತಾರಾಷ್ಟ್ರೀಯ

ವಾಷಿಂಗ್ಟನ್: ಸಿಖ್ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜರ್‌ ಹತ್ಯೆಯ ನಂತರ ಆತನ ಬಗೆಗಿನ ಗುಪ್ತಚರ ಮಾಹಿತಿಯನ್ನು ಅಮೆರಿಕದ ಅಧಿಕಾರಿಗಳು, ಕೆನಡಾ ಜೊತೆ ಹಂಚಿಕೊಂಡಿದ್ದರು. ಆದರೆ, ಕೆನಡಾದ ಅಧಿಕಾರಿಗಳು ಕದ್ದಾಲಿಕೆಯ ಮೂಲಕ ಪಡೆದ ಮಾಹಿತಿ ಹೆಚ್ಚು ನಿರ್ಣಾಯಕವಾಗಿತ್ತು. ಆ ಮಾಹಿತಿ ಆಧರಿಸಿ, ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಆರೋಪಿಸಿತು ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ತನ್ನ ಕೆಲವು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ಶನಿವಾರ ಈ ವರದಿ ಪ್ರಕಟಿಸಿದೆ

ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಕೆನಡಾ ನಡುವೆ ಗುಪ್ತಚರ ಮಾಹಿತಿ ವಿನಿಮಯ ನಡೆಯುತ್ತದೆ. ಈ ಮಾಹಿತಿಯು, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೂ ಅವರು ಖಾಲಿಸ್ತಾನಿ ಉಗ್ರವಾದಿ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂಬ ಆರೋಪ ಮಾಡಲು ಕಾರಣವಾಯಿತು ಎಂದು ಕೆನಡಾದಲ್ಲಿ ಅಮೆರಿಕದ ರಾಯಭಾರಿ ಆಗಿರುವ ಡೇವಿಡ್ ಕೊಹೆನ್ ಅವರು ಸಂದರ್ಶನವೊಂದರಲ್ಲಿ ಖಚಿತ‍ಪಡಿಸಿದ್ದಾರೆ.

ಭಾರತವು ನಿಜ್ಜರ್‌ನನ್ನು 2020ರಲ್ಲಿ ಭಯೋತ್ಪಾದಕ ಎಂದು ಘೋಷಿಸಿದೆ. ಈತನನ್ನು ಜೂನ್ 18ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಹತ್ಯೆ ಮಾಡಲಾಗಿದೆ. ಈತ ನಿಷೇಧಿತ ಖಾಲಿಸ್ತಾನ್ ಟೈಗರ್ ಫೋರ್ಸ್‌ನ ಮುಖ್ಯಸ್ಥನಾಗಿದ್ದ.
‘ಹತ್ಯೆಯ ನಂತರದಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಕೆನಡಾದ ಅಧಿಕಾರಿಗಳಿಗೆ ಕೆಲವು ವಿವರಗಳನ್ನು ಒದಗಿಸಿವೆ. ಆ ವಿವರಗಳನ್ನು ಆಧರಿಸಿ ಕೆನಡಾ, ಈ ಹತ್ಯೆಯ ಹಿಂದೆ ಭಾರತದ ಪಾತ್ರವಿದೆ ಎಂದು ತೀರ್ಮಾನಿಸಿದೆ’ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಆದರೆ ಮೂಲಗಳ ಹೆಸರು ಉಲ್ಲೇಖಿಸಿಲ್ಲ.

ನಿಜ್ಜರ್‌ ಹತ್ಯೆಯ ನಂತರದಲ್ಲಿ ಅಮೆರಿಕದ ಅಧಿಕಾರಿಗಳು, ಕೆನಡಾದ ಅಧಿಕಾರಿಗಳಿಗೆ ‘ಹತ್ಯೆಗೆ ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ನಮ್ಮಲ್ಲಿ ಇರಲಿಲ್ಲ. ಅಂತಹ ಮಾಹಿತಿ ಇದ್ದಿದ್ದರೆ ಅದರ ಬಗ್ಗೆ ಕೆನಡಾ ಅಧಿಕಾರಿಗಳಿಗೆ ತಕ್ಷಣವೇ ತಿಳಿಸಲಾಗುತ್ತಿತ್ತು’ ಎಂದು ಹೇಳಿದ್ದರು ಎಂಬ ವಿವರ ವರದಿಯಲ್ಲಿ ಇದೆ.
ನಿಜ್ಜರ್ ಹತ್ಯೆ ಕುರಿತು ಕೆನಡಾ ನಡೆಸುತ್ತಿರುವ ತನಿಖೆಗೆ ಸಹಕರಿಸುವಂತೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಭಾರತಕ್ಕೆ ಸಲಹೆ ಮಾಡಿದ್ದಾರೆ