ವಕೀಲ ನಾರಿಮನ್ ಮಾಡಿದ ತಪ್ಪುಗಳಿಂದ ಕಾವೇರಿ ವಿವಾದ ಜೀವಂತ: ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನ ಕುಮಾರ್

ರಾಜ್ಯ

ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ವಕೀಲ ಎಫ್.ಎಸ್ ನಾರಿಮನ್ ಅವರು ಮಾಡಿದ ತಪ್ಪುಗಳಿಂದ ಕಾವೇರಿ ನೀರಿನ ವಿವಾದ ಉಂಟಾದಾಗ ರಾಜ್ಯದ ಜನತೆ ಸಮಸ್ಯೆ ಎದುರಿಸುವಂತಾಗಿದೆ ಎಂದು ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ. ಸಂವಿಧಾನದ 262ನೇ ಪರಿಚ್ಛೇದದ ಪ್ರಕಾರ ನ್ಯಾಯಾಲಯಕ್ಕೆ ನದಿಗಳ ವಿವಾದ ಸಂಬಂಧ ತೀರ್ಪು ಕೊಡುವ ಅಧಿಕಾರ ಇಲ್ಲ. ಅದರಂತೆ 1971 ರಲ್ಲಿ ತಮಿಳು ನಾಡಿನ ಕೃಷಿಕರು ಹಾಕಿದ ಅರ್ಜಿ, 1974 ರಲ್ಲಿ ಕರ್ನಾಟಕ ಸರ್ಕಾರ ಕೃಷ್ಣ ನದಿ ವಿವಾದದಲ್ಲಿ ಅನ್ಯಾಯವಾಗಿದೆ ಎಂದು ಸಲ್ಲಿಸಿದ ಅರ್ಜಿ, 2004 ರ ಮಧ್ಯಪ್ರದೇಶದ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲವೆಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತು.

ಆದರೆ ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ 1980 ರ ದಶಕದಲ್ಲಿ ತಮಿಳು ರೈತರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತು. 1990 ರಲ್ಲಿ ಕಾವೇರಿ ನ್ಯಾಯಮಂಡಳಿ ಸ್ಥಾಪಿಸುವಂತೆ ಆದೇಶ ನೀಡಿದ್ದು, ಸಂವಿಧಾನ ಬಾಹಿರ. ಇದನ್ನು ವಕೀಲರಾದ ಎಫ್.ಎಸ್. ನಾರಿಮನ್ ಯಾಕೆ ಪ್ರಶ್ನಿಸಲಿಲ್ಲ.? 1991 ರಲ್ಲಿ ಜನ, ಜಾನುವಾರು ಸಂಖ್ಯೆಯನ್ನು ನೀಡಲಾಯಿತು. 2001ರಲ್ಲಿ ಕರ್ನಾಟಕ ಜನ, ಜಾನುವಾರು ಸಂಖ್ಯೆ ನೀಡಲಿಲ್ಲ. ನ್ಯಾಯಾಧೀಶರು ಅಂದಾಜಿನ ಮೇಲೆ ಸಂಖ್ಯೆ ಬರೆದುಕೊಂಡರು. ಮಳೆ ಎಷ್ಟು ಬಂತು.? ಎಷ್ಟು ನೀರಿದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ರಾಜಕಾರಣಿಗಳು, ಕಾನೂನು ಸಲಹೆಗಾರರ ಸ್ವಯಂಕೃತ ಅಪರಾಧದಿಂದ ಜನರು ತೊಂದರೆ ಅನುಭವಿಸುವಂತಾಗಿದೆ” ಎಂದು ದೂರಿದರು.

“ಕಾವೇರಿ ವಿಚಾರದಲ್ಲಿ ನಾಡಿನ ಮೂರು ಪಕ್ಷಗಳು ಅಪರಾಧಿ ಸ್ಥಾನದಲ್ಲಿವೆ. ವಕೀಲರು ಏನು ವಾದ ಮಾಡುತ್ತಿದ್ದಾರೆ ಪರಿಶೀಲಿಸಲಿಲ್ಲ” ಎಂದು ಅಸಮಾಧಾನ ಹೊರ ಹಾಕಿದರು.ಕಾವೇರಿ ವಿವಾದವನ್ನು ಬಗೆಹರಿಸುವುದು ಸುಲಭವಲ್ಲ. ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿದರೂ ಸಾಧ್ಯವಾಗುವುದಿಲ್ಲ. ಪಾರ್ಲಿಮೆಂಟ್ ನಿಂದಲೂ ವಿವಾದ ಪರಿಹಾರ ಕಷ್ಟ. ರಾಷ್ಟ್ರೀಯ ಜಲ ನೀತಿ ಇಲ್ಲದಿರುವ ಕಾರಣ ಕಾವೇರಿ ವಿವಾದ ಜೀವಂತವಾಗಿದೆ. ಅಂತರಾಜ್ಯಗಳ ನದಿ ವಿವಾದಗಳನ್ನು ಬಗೆ ಹರಿಸಲು ಮುಖ್ಯ ನ್ಯಾಯಮೂರ್ತಿಗಳು ನಿರಾಕರಿಸಿದರೆ, ಸಂವಿಧಾನದ 263 ನೇ ಪರಿಚ್ಛೇದದದ ಪ್ರಕಾರ ರಾಷ್ಟ್ರಪತಿಗೆ ಮನವಿ ಸಲ್ಲಿಸಬಹುದು. ಅವರು ಯಾವುದೇ ಪ್ರದೇಶಕ್ಕೆ ಅನ್ಯಾಯವಾಗಿದ್ದರೆ ಸಮಿತಿ ನಿಯೋಜಿಸಿ ವರದಿ ತರಿಸಿಕೊಂಡು ಪರಿಹಾರ ನೀಡಬಹುದು. ಬೀದಿ ಹೋರಾಟ, ಗಲಾಟೆ, ಬಂದ್ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಹೇಳಿದರು.