ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಮುಖ್ಯ ರಸ್ತೆಯು ಚತುಷ್ಪಥ ರಸ್ತೆಯ ನಕಾಶೆ ಸಿದ್ದವಾಗಿದ್ದರೂ ಅದನ್ನು ಸಮರ್ಪಕವಾಗಿ ಮುಂದುವರಿಸದೆ ಜನತೆಗೆ ವಂಚಿಸಿದ್ದು, ಮಾತ್ರವಲ್ಲ ನಿರ್ಮಾಣವಾಗಿರುವ ರಸ್ತೆ ಕಳಪೆ ಕಾಮಗಾರಿಕೆಯಿಂದ ಕೂಡಿರುವುದು ಸ್ಥಳೀಯ ನಾಗರೀಕರನ್ನು ಕೆರಳಿಸಿದೆ.
ಬಜಪೆ ಪಟ್ಟಣ ಪಂಚಾಯತ್ ಆಗಿ ಪರಿವರ್ತನೆ ಆದ ನಂತರ ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದೆ. ಈ ಸಮಸ್ಯೆಗಳ ಬಗ್ಗೆ ಹಲವಾರು ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಹಲವು ಬಾರಿ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನ ಪ್ರಶ್ನಿಸಿದರೆ ಅಧಿಕಾರಿಗಳು ಉದ್ದಟತನ ತೋರುತ್ತಿದ್ದಾರೆ.
ಅಧಿಕಾರಿಗಳ ನಡೆಯಿಂದ ಬೇಸತ್ತ ಬಜಪೆ ಪ್ರದೇಶದ ನಾಗರಿಕರು ಸೂಕ್ತ ಕ್ರಮಕ್ಕೆ ಹೋರಾಟ ನಡೆಸಲು ಮುಂದಾಗಿದ್ದಾರೆ. ಮಾತ್ರವಲ್ಲ ಇತ್ತೀಚೆಗೆ ಸಭೆ ಸೇರಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ.

ಬಜಪೆ ವ್ಯಾಪ್ತಿಯಲ್ಲಿ ಕಸದ ರಾಶಿ, ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಹಲವಾರು ಸಮಸ್ಯೆಗಳನ್ನು ಮನಗಂಡು ಬಜಪೆ ವ್ಯಾಪ್ತಿಯ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಒಂದೆಡೆ ಸೇರಿ ಬಜಪೆಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿದ್ದಾರೆ.
ಅದರ ಭಾಗವಾಗಿ ಬಜಪೆಯ ಎಲ್ಲಾ ನಾಗರಿಕರನ್ನು ಸೇರಿಸಿಕೊಂಡು ಬಜಪೆ ನಾಗರಿಕ ಹಿತರಕ್ಷಣಾ ವೇದಿಕೆ ಎಂಬ ವೇದಿಕೆ ಯನ್ನು ಸಿದ್ಧಪಡಿಸಿಕೊಂಡು ಬಜಪೆ ಪ್ರದೇಶದಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ವೇದಿಕೆ ಮೂಲಕ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿ,ನಾಗರಿಕ ಹಿತರಕ್ಷಣಾ ವೇದಿಕೆಗೆ ಚಾಲನೆ ನೀಡಿ ಮುಂದಿನ ದಿನಗಳಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯಡಿಯಲ್ಲಿ ಹೋರಾಟ ನಡೆಸಲು ತಿರ್ಮಾನಿಸಿರುವುದು ತಿಳಿದುಬಂದಿದೆ.