ಪುಚ್ಚಮೊಗರು ಶಾಂತಿನಗರ ಕಾಲೋನಿಯ ರಸ್ತೆ ಬದಿಯ ಕಟ್ಟೆಯಲ್ಲಿ ಈದ್ ಮಿಲಾದ್ ಸಂದರ್ಭ ಹಾಕಲಾದ ಹಸಿರು ಧ್ವಜವನ್ನು ಪೊಲೀಸರು ತೆರವು ಮಾಡಿರುವುದು ಸರಿಯಾದ ಕ್ರಮವಾಗಿದ್ದು, ಸಮುದಾಯದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಹಾಗೂ ಕೆಲವು ಮಾಧ್ಯಮಗಳಲ್ಲಿ ವರದಿಯಾದಂತೆ ಆ ಕಟ್ಟೆ ಸರಕಾರಿ ಜಾಗದಲ್ಲಿರುವ ಮಾವಿನಕಟ್ಟೆಯೇ ಹೊರತು ಗಣಪತಿ ಕಟ್ಟೆ ಅಲ್ಲ ಎಂದು ಪುಚ್ಚಮೊಗರು ಜಮಾಅತ್ ಕಮಿಟಿ ಸ್ಪಷ್ಟಪಡಿಸಿದೆ.
ಕೆಲವು ದೃಶ್ಯ ಮಾಧ್ಯಮಗಳಲ್ಲಿ ಈ ಕಟ್ಟೆಯನ್ನು ಗಣಪತಿ ಕಟ್ಟೆ ಎಂದು ಹೇಳಿದೆ, ಇದು ಗಣಪತಿ ಕಟ್ಟೆ ಅಲ್ಲ, ಪುಚ್ಚಮೊಗರಿನಲ್ಲಿ ಗಣಪತಿ ಕಟ್ಟೆ ಬೇರೆನೇ ಇದೆ, ಇಲ್ಲೊಂದು ಮಾವಿನ ಮರ ಇದ್ದು ಈ ಪರಿಸರದ ಜನರು ಅದರ ಕೆಳಗೆ ನಿಂತು ನೆರಳಿನಾಶ್ರಯ ಪಡೆಯುತ್ತಿದ್ದರು, ಬಸ್ಸಿಗಾಗಿ ಕಾಯುತ್ತಿದ್ದರು, ಇದನ್ನು ಮನಗಂಡ ಮೂವತ್ತೈದು ವರ್ಷಗಳ ಹಿಂದೆ ಈ ಮಾವಿನ ಮರಕ್ಕೊಂದು ಕಟ್ಟೆ ಕಟ್ಟಿದ್ದರು, ಆ ಸಂದರ್ಭದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲಾ ಸೇರಿಯೇ ಕಟ್ಟೆ ಕಟ್ಟಿದ್ದು, ಇದಕ್ಕೆ ಮಾವಿನಕಟ್ಟೆ ಹೆಸರೇ ವಿನಹ ಗಣಪತಿ ಕಟ್ಟೆ ಅಂತ ಎಲ್ಲೂ ಇಲ್ಲ, ಅಲ್ಲದೆ ಈ ಮಾವಿನಕಟ್ಟೆ ಇರುವುದು ಸರಕಾರಿ ಜಾಗದಲ್ಲಿ ಎಂದವರು ಸ್ಪಷ್ಟಪಡಿಸಿದರು.

ಇದೇ ಮಾವಿನಕಟ್ಟೆಯಲ್ಲಿ ನಾವು ಈ ಹಿಂದೆಯೂ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್ ಗಳನ್ನು ಹಾಕಿದ್ದೆವು, ಆದರೆ ಯಾವತ್ತೂ ಕೂಡಾ ಯಾರಿಗೂ ಸಮಸ್ಯೆಯಾಗಿರಲಿಲ್ಲ, ಐದು ವರ್ಷಗಳ ಹಿಂದೆ ಈ ಕಟ್ಟೆಗೆ ಕೇಸರಿ ಬಣ್ಣ ಬಳಿದು ಕಟ್ಟೆಯಲ್ಲಿ ಗಣೇಶೋತ್ಸವ ಕೊಡುಗೆ ಎಂದು ಈ ಬಾರಿ ಹಾಕಲಾಗಿದೆ, ಈ ಬಗ್ಗೆ ನಾವು ಸಮಿತಿಯ ಅಧ್ಯಕ್ಷರಿಗೆ, ಪೊಲೀಸರಿಗೆ ದೂರು ನೀಡಿದ್ದೆವು, ಸರ್ವ ಧರ್ಮೀಯರ ಕಟ್ಟೆಯಾಗಿದ್ದ ಈ ಮಾವಿನಕಟ್ಟೆಗೆ ಕಳೆದ ಐದು ವರ್ಷಗಳಿಂದ ಬೇರೆಯೇ ಬಣ್ಣ ಬಂದಿದೆ, ಸಂಪೂರ್ಣ ಕೇಸರಿಮಯ ಮಾಡಲಾಗುತ್ತಿದೆ, ಈ ಬಗ್ಗೆಯೂ ನಾವು ಪೊಲೀಸರಿಗೆ ದೂರು ನೀಡಿದ್ದೆವು ಎಂದು ಹೇಳಿದ ಅವರು ಕಳೆದ ಬಾರಿಯೂ ಮಿಲಾದ್ ಸಂದರ್ಭ ಎಂದಿನಂತೆ ಹಾಕಲಾಗಿದ್ದ ಬ್ಯಾನರ್ ಬಗ್ಗೆ ದೂರು ಹೋಗಿ ಪೊಲೀಸರು ಬಂದಿದ್ದರು, ನಮ್ಮ ಹಿರಿಯರ ಸಲಹೆಯಂತೆ ಬ್ಯಾನರನ್ನು ತೆರವುಗೊಳಿಸಿ ಸೌಹಾರ್ದ ವಾತಾವರಣ ಮುಂದುವರಿಯಲು ಸಹಕರಿಸಿದ್ದೆವು ಎಂದರು.
ಬ್ಯಾನರ್, ಧ್ವಜ ಹಾಕುವುದರಿಂದ ಸಮಾಜದ ಅಶಾಂತಿಗೆ ಕಾರಣವಾಗುವುದು ಬೇಡ ಎನ್ನುವ ಹಿರಿಯರ ಸಲಹೆಯಂತೆ ನಾವು ಎರಡೂ ಮಸೀದಿಗಳಲ್ಲಿ ಲೈಟಿಂಗ್ಸ್ ಮಾತ್ರ ಹಾಕಿದ್ದೆವು, ಆದರೆ ಹಬ್ಬದ ಸಂದರ್ಭದಲ್ಲಿ ಊರಿಗೆ ಬರುವ ನಮ್ಮೂರ ಕೆಲವು ಯುವಕರು ಹಬ್ಬದ ಖುಶಿಯಲ್ಲಿ ಧ್ವಜ ಅಥವಾ ಬ್ಯಾನರ್ ಹಾಕುತ್ತಾರೆ, ಇದು ಶುಭ ಕೋರುವ ಉದ್ದೇಶವೇ ಹೊರತು ಬೇರಾವ ದುರುದ್ದೇಶ ಇರುವುದಿಲ್ಲ, ಈ ಬಾರಿಯೂ ಆ ಮಾವಿನಕಟ್ಟೆಯಲ್ಲಿ ಧ್ವಜ ಹಾಕಿದ್ದರು, ಅದನ್ನು ಇನ್ಸ್ಪೆಕ್ಟರ್ ಅವರು ತೆರವುಗೊಳಿಸಿದ್ದಾರೆ, ಅದು ಅಲ್ಲಿಗೇ ಮುಗಿದು ಹೋದ ವಿಷಯ, ಆದರೆ ಆ ಬಳಿಕ ಕೆಲವು ದೃಶ್ಯ ಮಾಧ್ಯಮಗಳು ವೈಭವೀಕರಿಸಿ ಊರಿನ ಸಾಮರಸ್ಯ ಬಾಳ್ವೆ ಕೆಡಿಸುವ ಕೆಲಸ ಮಾಡುತ್ತಿದ್ದಾರೆ.
ಸರಕಾರಿ ಜಾಗದಲ್ಲಿರುವ ಮಾವಿನಕಟ್ಟೆಯೇ ಹೊರತು ಗಣಪತಿ ಕಟ್ಟೆ ಅಲ್ಲ. ವಾಸ್ತವ ಸತ್ಯವನ್ನು ಸಮಾಜಕ್ಕೆ ತಿಳಿಸಬೇಕಾದ ಮಾಧ್ಯಮಗಳು ಈ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಕಟಿಸಿರುವುದು ತುಂಬಾ ನೋವು ತಂದಿದೆ. ಇಲ್ಲಿನ ಕಟ್ಟೆ ಮತ್ತು ಸೌಹಾರ್ದತೆ ಬಗ್ಗೆ ಇಲ್ಲಿನ ಎರಡೂ ಧರ್ಮಗಳ ಹಿರಿಯರಿಗೆ ಚೆನ್ನಾಗಿ ಗೊತ್ತಿದೆ. ಮಾವಿನಕಟ್ಟೆಗೆ ಗಣಪತಿ ಕಟ್ಟೆ ಎಂದು ನಾಮಕರಣ ಮಾಡಿರುವುದು ಮಾಧ್ಯಮಗಳೇ ಹೊರತು ಇಲ್ಲಿನ ನಾಗರಿಕರಲ್ಲ. ನಮ್ಮೂರ ಸೌಹಾರ್ದತೆ ಮುಂದುವರಿಯುತ್ತದೆ. ಆದರೆ ನಮ್ಮ ಮಾವಿನಕಟ್ಟೆ ಮಾವಿನ ಕಟ್ಟೆಯಾಗಿಯೇ ಮುಂದುವರಿಯ ಬೇಕೆಂದು ಜಮಾಅತ್ ಕಮಿಟಿಯವರು ಆಗ್ರಹಿಸಿದ್ದಾರೆ