ಯಾರಿಗೆ ಹೇಳಲಿ ನಮ್ಮ ಪ್ರಾಬ್ಲಂ.. ವೆನ್ಲಾಕ್ ಆಸ್ಪತ್ರೆಯಲ್ಲಿ ಕೈ ಕೊಟ್ಟ ಡಯಾಲಿಸಿಸ್ ಯಂತ್ರಗಳು.!

ಕರಾವಳಿ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರಗಳು ಕೆಟ್ಟು ಹೋಗಿ ಬರೋಬ್ಬರಿ ಆರು ತಿಂಗಳಾದರೂ ಇನ್ನೂ ಕೂಡ ಸರಿ ಮಾಡದೇ ಇರುವುದರಿಂದ ಡಯಾಲಿಸಿಸ್ ಗೆ ಬರುವ ರೋಗಿಗಳು ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯದ 8 ಜಿಲ್ಲೆಯ ರೋಗಿಗಳು ಡಯಾಲಿಸಿಸ್ ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯೆ ಆಸರೆ. ಲೆಕ್ಕಕ್ಕೆ 23 ಡಯಾಲಿಸಿಸ್ ಯಂತ್ರಗಳಿವೆ. ಅದರಲ್ಲಿ 10 ಯಂತ್ರಗಳು ಕೈ ಕೊಟ್ಟಿದೆ. ಉಳಿದ 13 ಯಂತ್ರಗಳು ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಸಾಕಾಗುತ್ತಿಲ್ಲ. ಉಡುಪಿ ಜಿಲ್ಲೆಯ ಚಿತ್ರಣ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಇನ್ನು ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ ತಾಲೂಕಿನ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಯಂತ್ರಗಳ ಕಥೆ ಹೇಳಿ ಪ್ರಯೋಜನವಿಲ್ಲ. ಇರುವ ಹದಿಮೂರು ಯಂತ್ರಗಳಲ್ಲಿ ದಿನನಿತ್ಯ ನೂರಾರು ರೋಗಿಗಳಿಗೆ ಡಯಾಲಿಸಿಸ್ ಮಾಡಬೇಕಾಗಿದೆ. ಇಲ್ಲಿನ ರೋಗಿಗಳು ಯಾರಿಗೆ ಹೇಳಲಿ ನಮ್ಮ ಪ್ರಾಬ್ಲಂ ಅನ್ನುವಂತಾಗಿದೆ. ಜಿಲ್ಲೆಗೆ ಭೇಟಿ ನೀಡುವ ಸಚಿವರುಗಳು ವೆನ್ಲಾಕ್ ಆಸ್ಪತ್ರೆಗೆ ಭೇಟಿ ಅನ್ನುವ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆಯೇ ಹೊರತು ಇಲ್ಲಿಗೆ ಮೂಲ ಸೌಕರ್ಯ ಒದಗಿಸಲು ವಿಫಲರಾಗಿದ್ದಾರೆ.

ದುಡ್ಡಿದ್ದವರು ಖಾಸಗಿ ಆಸ್ಪತ್ರೆಯ ಕಡೆಗೆ ಮುಖ ಮಾಡಿದರೆ ಬಡ ರೋಗಿಗಳು ಈಗಲೂ ಸರಕಾರಿ ಆಸ್ಪತ್ರೆಗಳನ್ನೆ ನೆಚ್ಚಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್, ಉಡುಪಿ ಜಿಲ್ಲೆಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗಳ ಒಟ್ಟಾರೆ ಕಥೆ ಇದು. ಎಲ್ಲರಿಗೂ ಆರೋಗ್ಯ ಭಾಗ್ಯ ಅನ್ನುವ ಸರಕಾರ ಸರಿಯಾಗಿ ಸರಕಾರೀ ಆಸ್ಪತ್ರೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಅನ್ನುವುದು ದೌರ್ಭಾಗ್ಯ ಎಂದೇ ಹೇಳಬೇಕು.