ಮಂಗಳೂರು ಸಿಸಿಬಿ ಎಸಿಪಿ ಆಗಿದ್ದ ಪಿ.ಎ ಹೆಗ್ಡೆ ಮುಂಬಡ್ತಿ ಪಡೆದುಕೊಂಡು ಉಡುಪಿಗೆ ವರ್ಗಾವಣೆಯಾಗಿದ್ದೆ ತಡ ಪ್ರಮುಖ ಅಧಿಕಾರಿಗಳು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ತಮ್ಮ ಪ್ರಭಾವ ಬಳಸಿ ಈ ಹುದ್ದೆಗೇರುವ ಪ್ರಯತ್ನವನ್ನು ತೆರೆಮರೆಯಲ್ಲಿ ನಡೆಸುತ್ತಿದ್ದರು. ಆದರೆ ಇದೀಗ ಚೆಲುವರಾಜು ಮಂಗಳೂರು ಸಿಸಿಬಿ ಎಸಿಪಿ ಆಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಬಹುತೇಕ ಪಕ್ಕಾ ಆಗಿದೆ.
ಡಿವೈಎಸ್ಪಿ ಚೆಲುವರಾಜುರವರು ಅವಿಭಜಿತ ದ.ಕ ಜಿಲ್ಲೆಯ ಪಡುಬಿದ್ರೆ, ಬಜ್ಪೆ, ಜಿಲ್ಲಾ ಅಪರಾಧ ಪತ್ತೆ ದಳ, ಪಣಂಬೂರು, ಬಂದರು ಠಾಣೆ, ಐಜಿಪಿ ಕಚೇರಿ, ಲೋಕಾಯುಕ್ತ ಮಂಗಳೂರು ಮೊದಲಾದೆಡೆ ಕರ್ತವ್ಯ ನಿರ್ವಹಿಸಿ, ಮುಂಬಡ್ತಿ ಪಡೆದು ಬಂಟ್ವಾಳ ಡಿವೈಎಸ್ಪಿಯಾಗಿ, ಇದೀಗ ಪ್ರಸ್ತುತ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಗಳೂರಿನ ಬಗ್ಗೆ ಬಹುತೇಕ ಅರಿವಿರುವ ಚೆಲುವರಾಜು ಪಣಂಬೂರು, ಬಜಪೆ, ಸುರತ್ಕಲ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನ ಸುರತ್ಕಲ್ ಠಾಣೆಯಲ್ಲಿ ಸೇವೆ ಸಲ್ಲಿಸಿದವರು ಜಿಲ್ಲೆಯ ಯಾವುದೇ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಬಹುದು ಎಂಬ ಪ್ರತೀತಿ ಪೊಲೀಸ್ ಇಲಾಖೆಯಲ್ಲಿದೆ. ಏಕೆಂದರೆ ಸುರತ್ಕಲ್ ಠಾಣೆ ಅಪರಾಧ, ರೌಡಿಸಂ, ಕೋಮು ಸೂಕ್ಷ್ಮ ಕ್ಕೆ ದೊಡ್ಡ ಹೆಸರು ಪಡೆದಿದೆ. ಎಂಆರ್ ಪಿ ಎಲ್ ಸೇರಿದಂತೆ ಹಲವು ಉದ್ದಿಮೆಗಳ, ಕೈಗಾರಿಕೆಗಳ ತವರೂರಾಗಿರುವ ಸುರತ್ಕಲ್ ನಲ್ಲಿ ಹೊರ ರಾಜ್ಯ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕೆಲಸ ಅರಸಿ ವಾಸ್ತವ್ಯ ಹೂಡುತ್ತಾರೆ. ಅಪರಾಧ ಪ್ರಕರಣಗಳು ಬೇರೆ ಎಲ್ಲಾ ಠಾಣೆಗಳಿಗೆ ಹೋಲಿಸಿದರೆ ಇಲ್ಲಿ ಹೆಚ್ಚು. ಆದುದರಿಂದ ಇಲ್ಲಿ ಸೇವೆ ಸಲ್ಲಿಸಿದವರು ಸಮರ್ಥವಾಗಿ ನಿಭಾಯಿಸಿದರೆ ಯಾವುದೇ ಹುದ್ದೆ ಪಡೆಯಲು ಸಮರ್ಥರು. ಚೆಲುವರಾಜು ಇಲ್ಲಿ ಸಮರ್ಥವಾಗಿ, ಪ್ರಾಮಾಣಿಕವಾಗಿ ನಿಭಾಯಿಸಿದ್ದರು. ಬಂಟ್ವಾಳದಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸಿದ್ದರು. ಲೋಕಾಯುಕ್ತ ಡಿವೈಎಸ್ಪಿ ಆಗಿ ಚೆಲುವರಾಜು ಕಾರ್ಯ ಶ್ಲಾಘನಿಯವಾದುದು. ಇದೀಗ ಸಿಸಿಬಿ ಎಸಿಪಿ ಆಗಿ ಕರ್ತವ್ಯ ನಿರ್ವಹಿಸುವ ಸಾಧ್ಯತೆ ಬಹುತೇಕ ಪಕ್ಕಾ ಆಗಿದ್ದು, ಈ ವಾರದಲ್ಲೇ ಆದೇಶ ಹೊರ ಬೀಳುವ ಸಾಧ್ಯತೆ ಇದೆ.