ನಾರಾಯಣ ಗುರು ಮತ್ತು ಮಹಾತ್ಮ ಗಾಂಧೀಜಿಯವರನ್ನು ಪೂಜಿಸಿ, ಅನುಸರಿಸಬೇಕಾದ ಮಂಗಳೂರಿನಲ್ಲಿ ಏನಾಗುತ್ತಿದೆ.?
✍️. ನವೀನ್ ಸೂರಿಂಜೆ, ಪತ್ರಕರ್ತರು
ಇಡೀ ದೇಶದಲ್ಲಿ ಗಾಂಧಿಗೆ ತ್ರಿಕಾಲ ಪೂಜೆ ನಡೆಯುತ್ತಿರುವ ಏಕೈಕ ದೇವಸ್ಥಾನವಿರುವುದು ಮಂಗಳೂರಿನಲ್ಲಿ. ಅದೂ ಬಿಲ್ಲವರ ಆಡಳಿತಕ್ಕೊಳಪಟ್ಟ ಗರೋಡಿಯಲ್ಲಿ ! ದುರಂತ ಎಂದರೆ ಬ್ರಹ್ಮಶ್ರಿ ನಾರಾಯಣ ಗುರುಗಳು ಮತ್ತು ಮಹಾತ್ಮ ಗಾಂಧೀಜಿಯ ಅನುಯಾಯಿಗಳಾಗಬೇಕಾದವರು ಇಂದು ಸಂಘಪರಿವಾರದ ಕಾಲಾಳುಗಳಾಗಿ ಕೊಲ್ಲುವವರೂ, ಕೊಲ್ಲಲ್ಪಡುವವರೂ ಆಗಿ ಹೋಗಿದ್ದಾರೆ.
ವಾಸ್ತವವಾಗಿ ಗಾಂಧಿಯ ಸಾವಿಗೆ ಕಾರಣವಾಗಿದ್ದು ಅವರ ಮುಸ್ಲಿಂ ಪ್ರೀತಿಯಲ್ಲ. ಬದಲಾಗಿ ಸಮಾನತೆ ಪರ, ಅಸ್ಪೃಶ್ಯತೆಯ ವಿರುದ್ದದ ಹೋರಾಟ ಎಂಬುದು ಸ್ಪಷ್ಟ. ತಾನು ಹಿಂದೂ ಮತ್ತು ರಾಮ ಭಕ್ತ ಎಂದು ಕರೆಸಿಕೊಂಡಿದ್ದ ಗಾಂಧೀಜಿಗೆ ಅಸ್ಪೃಶ್ಯತೆಯ ವಿರುದ್ಧದ ಹೋರಾಟ, ಸಮಾನತೆಗಾಗಿನ ಹೋರಾಟವನ್ನು ತಲೆಗೆ ತುಂಬಿಸಿದ್ದು ಬ್ರಹ್ಮಶ್ರಿ ನಾರಾಯಣ ಗುರುಗಳ ತತ್ವಗಳ ಸಾಂಗತ್ಯ.
ನಾರಾಯಣ ಗುರುಗಳು ಮತ್ತು ಮಹಾತ್ಮ ಗಾಂಧೀಜಿ ಪರಸ್ಪರ ಅನುಯಾಯಿಗಳು. ನಾರಾಯಣ ಗುರುಗಳನ್ನು ಮಹಾತ್ಮಾ ಗಾಂಧಿಯೂ, ಮಹಾತ್ಮ ಗಾಂಧಿಯು ನಾರಾಯಣಗುರುಗಳ ತತ್ವವನ್ನೂ ಅನುಸರಿಸುತ್ತಿದ್ದರು. ಈ ಇಬ್ಬರು ಮಹಾತ್ಮರ ಭೇಟಿ ಮತ್ತು ಮಾತುಕತೆಗಳು “ಸ್ವಾತಂತ್ರ್ಯ” ಎಂಬ ರಾಜಕೀಯ ಸ್ವಾತಂತ್ರ್ಯ ಹೋರಾಟದ ಜೊತೆಗೆ ಭಾರತದ ದಲಿತ, ಹಿಂದುಳಿದ ವರ್ಗದ ಸಾಮಾಜಿಕ – ಆರ್ಥಿಕ ಸ್ವಾತಂತ್ರ್ಯ ಹೋರಾಟವನ್ನೂ ರೂಪಿಸುತ್ತದೆ. ಕೇವಲ “ರಾಜಕೀಯ ಸ್ವಾತಂತ್ರ್ಯಕ್ಕಾಗಿನ ಹೋರಾಟ” ಕ್ಕೆ ಪುರೋಹಿತಶಾಹಿ ಹಿಂದುತ್ವವಾದಿಗಳು ತಲೆಕೆಡಿಸಿಕೊಂಡಿರಲಿಲ್ಲ. ಸಾಮಾಜಿಕ- ಆರ್ಥಿಕ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡುವುದು ಹಿಂದುತ್ವವಾದಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅದಕ್ಕಾಗಿಯೇ ಗಾಂಧಿ ಹತ್ಯೆಯಾಗಿತ್ತು.
ಗಾಂಧೀಜಿ ಹತ್ಯೆಯ ಬಳಿಕ ಮಂಗಳೂರಿನ ಬಿಲ್ಲವ ಸಮಾಜವು ಗಾಂಧೀಜಿಗೊಂದು ಗುಡಿ ನಿರ್ಮಿಸಿತು. ಮಂಗಳೂರಿನ ಕಂಕನಾಡಿ ಬೆರ್ಮೆರ್ ಬೈದರ್ಕಳ ಗರೋಡಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧೀಜಿಗೆ ಗುಡಿಯಿದೆ. ಇಬ್ಬರನ್ನೂ ಪೂಜಿಸಬೇಕಾದ, ಅನುಸರಿಸಬೇಕಾದ ಮಂಗಳೂರಿನಲ್ಲಿ ಏನಾಗುತ್ತಿದೆ ?
ಈವರೆಗೆ ಕೋಮುಗಲಭೆಗಳಲ್ಲಿ ಜೈಲು ಸೇರಿದವರು ಮತ್ತು ಸತ್ತವರು ಯಾರು ? ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್, ಪ್ರವೀಣ್ ಪೂಜಾರಿ ಯಿಂದ ಹಿಡಿದು ಪ್ರವೀಣ್ ನೆಟ್ಟಾರ್ ವರೆಗೆ ಸತ್ತವರ ಪಟ್ಟಿಯಲ್ಲಿ ಬಿಲ್ಲವ ಹೆಸರುಗಳೇ ಕಾಣಿಸುತ್ತದೆ.
ಪ್ರವೀಣ್ ನೆಟ್ಟಾರ್ ಸಾವಿನ ಬಳಿಕವಾದರೂ ಈ ಬಗೆಗಿನ ಒಂದು ಸಾಮಾಜಿಕ ವಿಮರ್ಶೆ ನಡೆಯಬೇಕಿತ್ತು. ನೆಟ್ಟಾರ್ ಸಾವಿನ ಎರಡು ಮೂರು ದಿನ ಇಂತದ್ದೊಂದು ಚರ್ಚೆ ಬಿಜೆಪಿ ವಲಯದಲ್ಲಿ ನಡೆದಿತ್ತು. ಬಿಜೆಪಿ-ಸಂಘಪರಿವಾರದ ವಿರುದ್ದ ಅವರದ್ದೇ ಯುವಕರು ಆಕ್ರೋಶಗೊಂಡು ಈ ಪ್ರಶ್ನೆ ಕೇಳಿದ್ದರು ಕೂಡಾ!.ವಿಪರ್ಯಾಸ ಎಂದರೆ ಆ ಬಳಿಕ ಆ ಪ್ರಶ್ನೆ ಮುಂದುವರೆಯಲಿಲ್ಲ. ಈಗ ಮತ್ತೆ ಈ ಹಿಂಸೆಯ ರಾಜಕೀಯವನ್ನು ಮುಂದುವರೆಸುವ ಕೆಲಸವನ್ನು ಸಂಘಪರಿವಾರ ಇನ್ನೂ ಮುಂದುವರೆಸುತ್ತಿದೆ. “ಪ್ರವೀಣ್ ನೆಟ್ಟಾರ್ ಕೊಲೆಗೆ ಪ್ರತಿಕಾರವಾಗಿ ಹಿಂದೂ ಹುಡುಗರು ಎಲ್ಲರ ಎದುರೇ ಮಾರ್ಕೆಟ್ ನಲ್ಲಿ ಶೌರ್ಯದಿಂದ ನುಗ್ಗಿ ಮಾಡಿದ ಕೊಲೆ” ಎಂದು ವಿಶ್ವ ಹಿಂದೂ ಪರಿಷತ್ತಿನ ಶರಣ್ ಪಂಪ್ ವೆಲ್ ಅಮಾಯಕ ಫಾಸಿಲ್ ಕೊಲೆಯನ್ನು ಹಿಂದೂ ಸಂಘಟನೆಯು ಪ್ರತಿಕಾರಕ್ಕಾಗಿ ಮಾಡಿದೆ ಎಂದು ಹೇಳುವುದಲ್ಲದೇ ಅದೊಂದು ಶೌರ್ಯದ ಕೆಲಸ ಎಂದಿದ್ದರು. ಫಾಸಿಲ್ ಕೊಲೆಯಲ್ಲಿ ಜೈಲು ಸೇರಿದವರು ಯಾರು ? ಮತ್ತದೇ…, ಯಾರಿಗಾಗಿ ಗಾಂಧೀಜಿ ಮತ್ತು ಬ್ರಹ್ಮಶ್ರಿ ನಾರಾಯಣ ಗುರುಗಳು ಹೋರಾಡಿದ್ದರೋ ಅದೇ ಹಿಂದುಳಿದ ಸಮುದಾಯದ ಹುಡುಗರು !
“ಪಾಪವನ್ನು ದ್ವೇಷಿಸಿ, ಆದರೆ ಪಾಪಿಯನ್ನು ಪ್ರೀತಿಸಿ” ಎಂದು ಮಹಾತ್ಮಾ ಗಾಂಧಿ ಹೇಳಿದಂತೆ, ಸಂಘಪರಿವಾರವನ್ನು ದ್ವೇಷಿಸುತ್ತಲೇ ಅಲ್ಲಿರುವ ನಮ್ಮ ಅಮಾಯಕ ಹಿಂದುಳಿದ ವರ್ಗದ ಹುಡುಗರನ್ನು ಪ್ರೀತಿಯಿಂದ ಮರಳಿ ಗಾಂಧಿ-ನಾರಾಯಣ ಗುರು ತತ್ವದೆಡೆಗೆ ಕರೆತರಬೇಕಿದೆ. ಆಗಲೇ ಕಂಕನಾಡಿ ಬೆರ್ಮೆರ್ ಬೈದರ್ಕಳ ಗರೋಡಿಯಲ್ಲಿ ನಡೆಯುವ ಗಾಂಧೀ ಪೂಜೆ ಸಾರ್ಥಕವಾಗುತ್ತದೆ.