ರಾಜ್ಯವೊಂದು ಉಪಮುಖ್ಯಮಂತ್ರಿಯನ್ನು ನೇಮಕ ಮಾಡುವುದು ಸಂವಿಧಾನ ಬಾಹಿರ ಕ್ರಮ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಡಿಸಿಎಂಗಳ ನೇಮಕವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠವು, ಉಪಮುಖ್ಯಮಂತ್ರಿ ಎಂಬುದು ಒಂದು ಹುದ್ದೆಯ ಹೆಸರು ಮಾತ್ರ. ಅವರನ್ನು ಇತರರಿಗಿಂತ ಹಿರಿಯರು ಎಂದು ಪರಿಗಣಿಸುವರೇ ಹೊರತು, ಅಧಿಕ ವೇತನವನ್ನೇನೂ ಪಡೆಯುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿದೆ.
‘ಉಪಮುಖ್ಯಮಂತ್ರಿಯು ಒಬ್ಬ ಶಾಸಕ ಮತ್ತು ಸಚಿವ ಆಗಿರುವರು. ಅದು ಸಂವಿಧಾನ ಬಾಹಿರ ಹುದ್ದೆ ಅಲ್ಲ. ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲ. ಆದ್ದರಿಂದ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಪೀಠ ಹೇಳಿತು.
