ಗೂಗಲ್, ಫೋನ್ ಪೇ ಬೇಡ.. ಕ್ಯಾಶ್ ಕೊಡಿ..ಮತ್ತೆ ಹಳೆಯ ಸಾಂಪ್ರದಾಯಿಕ ನೇರ-ನಗದು ವ್ಯವಹಾರಕ್ಕೆ ಮರಳುತ್ತಿರುವ ವ್ಯಾಪಾರಿಗಳು..ಯುಪಿಐ ಸ್ಕ್ಯಾನರ್ ಕಿತ್ತುಹಾಕುತ್ತಿರುವ ಸಣ್ಣ ಪುಟ್ಟ ವ್ಯಾಪಾರಿಗಳು
ಹತ್ತು ರೂಪಾಯಿಯ ಚಹಾ ಕುಡಿದರೂ ಫೋನ್ ಪೇ, ಐದು ರೂಪಾಯಿಯ ಚಾಕಲೇಟ್ ಖರೀದಿಸಿದರೂ ಗೂಗಲ್ ಪೇ, ಡಿಜಿಟಲ್ ತಂತ್ರಜ್ಞಾನಕ್ಕೆ ಅಡಿಕ್ಟ್ ಆಗಿದ್ದ ವ್ಯಾಪಾರಿಗಳು, ಗ್ರಾಹಕರು ಇದೀಗ ತೆರಿಗೆ ಇಲಾಖೆಯ ನೋಟಿಸ್ ಗದಾಪ್ರಹಾರಕ್ಕೆ ಬೆಚ್ಚಿಬಿದ್ದು ಗೂಗಲ್ ಪೇ ಬೇಡ, ಫೋನ್ ಪೇ ಬೇಡ ಕ್ಯಾಶ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ತಂದಿದ್ದ ಕೇಂದ್ರ ಸರಕಾರದ ಕ್ಯಾಶ್ ಲೆಸ್ ಅಸಲಿಯತ್ತು ಬಯಲಾಗಿದೆ. ಸಣ್ಣ ಸಣ್ಣ ವ್ಯಾಪಾರಿಗಳು, ಕಾಫಿ, ಟೀ ಅಂಗಡಿ, ಮಳಿಗೆಗಳು, ಬೇಕರಿಗಳು, ಹೋಟೆಲ್ ಗಳು ತಮ್ಮ ಅಂಗಡಿ ಮುಂಭಾಗದಲ್ಲಿ ಅಂಟಿಸಿದ್ದ ಯುಪಿಐ ಸ್ಕ್ಯಾನರ್ ಗಳನ್ನು ತೆಗೆದುಹಾಕುತ್ತಿದ್ದಾರೆ. ಅಚ್ಛೇದಿನ್ ಕನಸು ತೋರಿಸಿ ಇದೀಗ ಬಡ ವ್ಯಾಪಾರಿಗಳನ್ನು ದೋಚಲು ಮುಂದಾಗಿದ್ದಾರೆ ಎಂದು ಸಣ್ಣ ವರ್ತಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಹೋಟೆಲ್, ದಿನಸಿ ಅಂಗಡಿ , ಬೇಕರಿ ಸೇರಿದಂತೆ ಎಲ್ಲೆಡೆ ಮಳಿಗೆಗಳಲ್ಲಿ ಅಂಟಿಸಿದ್ದ ಯುಪಿಐ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸುವ ವ್ಯವಸ್ಥೆ ಇತ್ತು. ಆದರೆ ಇದೀಗ ಡಿಜಿಟಲ್ ಮೂಲಕ ಹಣ ಸ್ವೀಕರಿಸಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಜೇಬಿನಲ್ಲಿ ಹಣ ಇಲ್ಲದಿದ್ದರೂ ಫೋನ್ ಇದೆಯಲ್ಲ. ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಸಂದಾಯ ಮಾಡಬಹುದು ಎಂಬ ಯೋಚನೆಯಿಂದ ಮನೆಯಿಂದ ಹೊರಬೀಳುವವರು ಇನ್ನು ಮುಂದೆ ಎಚ್ಚರಿಕೆಯಿಂದ ಇರಬೇಕು. ವಾಣಿಜ್ಯ ತೆರಿಗೆ ಇಲಾಖೆ ಇತ್ತೀಚೆಗೆ ಅನೇಕ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್ ಗಳನ್ನು ನೀಡಿದ್ದು , ಇದೀಗ ಸಣ್ಣ ವ್ಯಾಪಾರಿಗಳು ಈ ಯುಪಿಐ ಪೇಮೆಂಟ್ ಸಹವಾಸವೇ ಬೇಡ ಎಂದು ಗ್ರಾಹಕರಿಂದ ಕ್ಯಾಶ್ ಮೊರೆ ಹೋಗಿದ್ದಾರೆ.

2021 ರಿಂದಲೂ ಸಾಕಷ್ಟು ತೆರಿಗೆ ಪಾವತಿಸದ ಟೀ- ಕಾಫಿ ಸ್ಟಾಲ್ ಗಳು, ಬೇಕರಿಗಳು, ಬೀಡಾ -ಸಿಗರೇಟು ಮಳಿಗೆಗಳು, ದಿನಸಿ ಅಂಗಡಿಗಳು ಹಾಗೂ ಇತರ ಸಣ್ಣಪುಟ್ಟ ವ್ಯಾಪಾರಿಗಳು ಇದೀಗ ತೆರಿಗೆ ಇಲಾಖೆಯ ದಾಳಿಗೆ ಗುರಿಯಾಗಿದ್ದಾರೆ. ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಮೂಲಕ ಬಂದ ಹಣವನ್ನು ಅವರು ತಮ್ಮ ವ್ಯಾಪಾರದ ಆದಾಯದಲ್ಲಿ ಸರಿಯಾಗಿ ಘೋಷಿಸಿಲ್ಲ ಅನ್ನುವ ಕಾರಣಕ್ಕೆ ಲಕ್ಷಾಂತರ ತೆರಿಗೆ ಬಾಕಿಯಿದೆ ಎಂದು ನೋಟಿಸ್ ನೀಡಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯು ಸಣ್ಣ ಅಂಗಡಿ ಮಾಲೀಕರಿಗೆ ನೀಡಿರುವ ನೋಟೀಸ್ ನಲ್ಲಿ ಕೆಲವರಿಗೆ 45 ಸಾವಿರದಿಂದ 1.25 ಲಕ್ಷ ರೂ. ವರೆಗೆ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರನ್ನೂ ಜಿಎಸ್ ಟಿ ವ್ಯಾಪ್ತಿಗೆ ತರುವ ಉದ್ದೇಶದಿಂದ ಆದಾಯ ತೆರಿಗೆ , ಮಾರಾಟ ತೆರಿಗೆ ವಿಭಾಗದ ಅಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಸಣ್ಣ ಪುಟ್ಟ ವ್ಯಾಪಾರಸ್ಥರನ್ನೂ ಜಿಎಸ್ ಟಿ ವ್ಯಾಪ್ತಿಗೆ ತರುವುದರಿಂದ ಜನರಿಗೂ ಹೊರೆ ಆಗುವುದರ ಜೊತೆಗೆ ಕೇಂದ್ರ ಸರಕಾರದ ಡಿಜಿಟಲೀಕರಣ ಕನಸಿಗೆ ನೀರೆರಚಿದಂತಾಗಿದೆ.
