ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಅಳಿಯೂರು ಎಂಬಲ್ಲಿ ದಿನಾಂಕ 14-05-2026 ರಂದು ಬೆಳಗ್ಗಿನ ಜಾವ 7:00ರ ಸಮಯಕ್ಕೆ ಮೂಡಬಿದ್ರೆ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಪ್ಪ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಮಾರುತಿ ಬ್ರೀಜಾ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟದ ಬಗ್ಗೆ ಬಾತ್ಮೀದಾರರಿಂದ ಬಂದ ಮಾಹಿತಿಯಂತೆ, ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿರುವಾಗ ಬೆಳುವಾಯಿ ಕಡೆಯಿಂದ KA19 MK4265 ನಂಬರಿನ ಮಾರುತಿ ಬ್ರೀಜಾ ಕಾರು ಅತೀ ವೇಗವಾಗಿ ಬಂದಿದ್ದು, ನಿಲ್ಲಿಸಲು ಸೂಚನ ನೀಡಿದರೂ ಕಾರನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿರುತ್ತಾರೆ.
ಪೊಲೀಸರು ಬ್ರೀಜಾ ವಾಹನವನ್ನು ಬೆನ್ನಟ್ಟಿದಾಗ ಗುಂಡುಕಲ್ಲಿನ ಬಳಿ ಐದು ಸೈಂಟ್ ರಸ್ತೆಗೆ ತಿರುಗಿ ಸಾಹುಲ್ ಹಮೀದ್ ಎಂಬುವರ ಮನೆಯ ಕಂಪೌಂಡ್ ಒಳಭಾಗದಲ್ಲಿ ಬ್ರೀಜಾ ಕಾರನ್ನು ನಿಲ್ಲಿಸಿ ವಾಹನದಲ್ಲಿದ್ದ ಚಾಲಕ ಹಂಡೇಲಿನ ಮಹಮ್ಮದ್ ಆರೀಪ್ ಮತ್ತು ಆತನ ಸಹಚರ ಗಂಟಾಲಕಟ್ಟೆಯ ಇಮ್ರಾನ್ @ ಇಬ್ರಾಹಿಂ ಎಂಬವರು ಕಾರಿನಿಂದ ಇಳಿದು ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಬೆನ್ನಟ್ಟಿ ಅವರನ್ನು ಹಿಡಿದು, ವಿಚಾರಣೆಗೆ ಒಳಪಡಿಸಿ, ನಂತರ ಮಾರುತಿ ಬ್ರೀಜಾ ಕಾರನ್ನು ಪರಿಶೀಲಿಸಿದಾಗ ಕಾರಿನ ಹಿಂಬದಿ ಸೀಟಿನ ಆಡಿ ಭಾಗದಲ್ಲಿ ನೀಲಿ ಬಣ್ಣದ ಪ್ಲಾಸ್ಟಿಕ್ ನ್ನು ಹಾಕಿ ಅದರ ಮೇಲೆ ಒಂದು ಗಂಡು ಕರುವನ್ನು ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಟಿ ತುಂಬಿಸಿರುವುದು ಕಂಡು ಬಂದಿರುತ್ತದೆ.
ಆರೋಪಿಗಳು ಒಂದು ವಾರದಿಂದ ಬೇರೆ ಬೇರೆ ಕಡೆಗಳಿಂದ ದನಗಳನ್ನು ಕಳ್ಳತನ ಮಾಡಿಕೊಂಡು ಬಂದು ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ನಿವಾಸಿ ಸಾಹುಲ್ ಹಮೀದ್ ರವರ ಮನೆಯ ಬಳಿ ಕಡಿದು, ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಅಥವಾ ದನಗಳನ್ನು ಕಡಿಯಲೆಂದು ಇತರರಿಗೆ ಮಾರಾಟ ಮಾಡುವ ಸಲುವಾಗಿ ಸಂಗ್ರಹಣೆ ಮಾಡಿರುವುದಾಗಿ ತಿಳಿಸಿರುತ್ತಾರೆ. ಆರೋಪಿಗಳು ದನವನ್ನು ಕಳ್ಳತನ ಮಾಡಿಕೊಂಡು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದರಿಂದ ದನವನ್ನು, KA19 MK4265 ನೇ ಮಾರುತಿ ಬ್ರೀಜಾ ಕಾರನ್ನು ಮತ್ತು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳಾದ ಮೊಹಮ್ಮದ್ ಆರಿಫ್ ಮತ್ತು ಇಮ್ರಾನ್ ಎಂಬವರ ಮೇಲೆ ಜಿಲ್ಲೆಯ ವಿವಿದ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿ ವಿಚಾರಣಾ ಹಂತದಲ್ಲಿದೆ.
