ಭಾರತಕ್ಕೆ ಆಪತ್ತು..! ಮಿಷನ್ 360

ರಾಷ್ಟ್ರೀಯ

ವಿಶೇಷ ಬಹುಮತದ ಮತ್ತು ಶೇಕಡ 50% ರಷ್ಟು ಬೆಂಬಲದ ಸರಕಾರವನ್ನು ಬಿ.ಜೆ.ಪಿ ಕೇಂದ್ರದಲ್ಲಿ ರಚಿಸಿದರೆ ಏನಾಗಬಹುದು.?

✍️. ಶಿವಾನಿ

ಒಂದು ವೇಳೆ ಬಿ.ಜೆ.ಪಿ ಈ ಬಾರಿ 3 ರ 2 ಭಾಗದ ಸರ್ಕಾರ ರಚಿಸಿದರೆ ನೇರವಾಗಿ ಇದು ಸಂವಿಧಾನದ ಪ್ರಬಲ ಕಾನೂನುಗಳನ್ನು ಬದಲಾಯಿಸಬಹುದು. ಅವು ದೇಶದ ಒಕ್ಕೂಟ ವ್ಯವಸ್ಥೆಯನ್ನು ಏರುಪೇರು ಮಾಡಬಹುದು. ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಫೆೋಷಿಸಬಹುದು. ರಾಷ್ಟ್ರಪತಿಗಳನ್ನು ವಜಾ ಮಾಡಬಹುದು. ಯಾವುದೇ ರಾಜ್ಯದ ವಿಧಾನಸಭೆ, ವಿಧಾನ ಪರಿಷತ್ತನ್ನು ರದ್ದುಮಾಡಿ ಹೊಸ ಶಾಸನ ಸಭೆಯನ್ನು ರಚಿಸಬಹುದು. ಉದಾಹರಣೆಗೆ GST ಜಾರಿ ಮಾಡಿದ ಹಾಗೆ. ಸಂವಿಧಾನದಲ್ಲಿ ಅವಕಾಶವಿಲ್ಲದಿದ್ದರೂ ಶೇಕಡ 3% ರಷ್ಟಾಗುವ ಮೇಲ್ವರ್ಗದ ಜನರಿಗೆ ಬಡತನದ ಹೆಸರಿನಲ್ಲಿ ಶೇಕಡ 10% ರಷ್ಟು ಮೀಸಲಾತಿ ತಂದಿರುವ ಹಾಗೆ.
ಇದೆಲ್ಲದಕ್ಕಿಂತಲೂ ಬಹು ಮುಖ್ಯ ಮತ್ತು ಅಪಾಯದ ವಿಷಯವೇನೆಂದರೆ, ಸಂವಿಧಾನದ ಮೂಲ ಆಶಯವಾದ ಸ್ವಾತಂತ್ರ, ಸಮಾನತೆ, ಸಹೋದರತ್ವ, ಸಾಮಾಜಿಕ ನ್ಯಾಯವನ್ನು ಪರಮಾರ್ಶಿಸಲು ಅಧಿಕಾರ ಸಿಕ್ಕಂತಾಗುತ್ತದೆ. ಜಾತ್ಯಾತೀತ ರಾಷ್ಟ್ರವೆನ್ನುವುದನ್ನೇ ಹಿಂದೂ ರಾಷ್ಟ್ರವೆಂದು ಸೇರಿಸಲು ಸಹ ಅವಕಾಶವಿದೆ. ಅಂದರೆ ಸಂವಿಧಾನದ ಬೇರುಗಳನ್ನೇ ಅಲುಗಿಸುವ ಶಕ್ತಿ ಬಿ.ಜೆ.ಪಿ. ಗೆ ಬಂದು ಬಿಡುತ್ತದೆ.
ಈ ಕಾರಣದಿಂದಲೇ ಕೇಂದ್ರದ ಬಿ.ಜೆ.ಪಿ ಸರಕಾರದಲ್ಲಿ ಸಚಿವರಾಗಿದ್ದಾಗ ಅನಂತಕುಮಾರ್ ಹೆಗಡೆ ‘ನಾವು ಬಂದಿರುವುದೇ ಸಂವಿಧಾನವನ್ನೂ ಬದಲಾಯಿಸಲಿಕ್ಕೆ’ ಎಂದು ಹೇಳಿಕೆಕೊಟ್ಟಿದ್ದು, ಮತ್ತು R.S.S ಮುಖಂಡರು ಪದೇಪದೇ ಮೀಸಲಾತಿ ರದ್ದಾಗಬೇಕು. ಸಂವಿಧಾನ ಬದಲಾಗಬೇಕೆಂದು ಹೇಳಿಕೆ ನೀಡುತ್ತಿರುವುದು. ಅಷ್ಟೇ ಅಲ್ಲ, ಭಾರತದ ಸಂವಿಧಾನವನ್ನು ಬದಲಾಯಿಸಬೇಕು, ಸುಡಬೇಕು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಪ್ರತಿಮೆಯನ್ನು ನೆಲಸಮ ಮಾಡಬೇಕೆಂದು ದೇಶದ್ರೊಹದ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ತೇಜಸ್ವಿ ಸೂರ್ಯ. ಸಂವಿಧಾನ ಬದಲಾಯಿಸಬೇಕೆಂಬುದು ಮೇಲ್ನೋಟಕ್ಕೆ ಅನಂತ ಕುಮಾರ್ ಹೆಗಡೆ, ತೇಜಸ್ವಿ ಸೂರ್ಯರವರ ಹೇಳಿಕೆಯಾದರೂ ಇದು R.S.S ಮತ್ತು ಬಿಜೆಪಿಯ ಮನ:ಸ್ಥಿತಿಯ ಮಾತುಗಳು. ಈ ಸಂಬಂಧ ಪಾರ್ಲಿಮೆಂಟ್ ನಲ್ಲಿ ಅನಂತಕುಮಾರ್ ಹೆಗಡೆ ಸೃಷ್ಟೀಕರಣ ನೀಡಿರಬಹುದು. ಆದರೆ ಇದೆಲ್ಲವೂ ಒತ್ತಡಕ್ಕೆ ಮತ್ತು ಕಾನೂನಿನ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಕೊಟ್ಟಿರುವ ಸ್ವಷ್ಟನೆಗಳೇ ಹೊರತು ಮನ:ಪೂರ್ವಕವಾಗಿ ಬಂದಂತಹ ಮಾತುಗಳಲ್ಲ.

ಈಗ ಅವರು ಆಡುತ್ತಿರುವ ಮಾತುಗಳು ಒಬ್ಬ ವ್ಯಕ್ತಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೊದಲು ಜಸ್ಟ್ ಡೋಸ್ ಕೊಡುತ್ತಾರಲ್ಲ ಹಾಗೆ. ಯಾವುದೇ ಸೈಡ್ ಎಪೆಕ್ಟ್ ಇಲ್ಲಾಂದ್ರೆ ಆರೋಗ್ಯವಂತ ಸಂವಿಧಾನವನ್ನೇ ಕೊಲ್ಲುವುದಂತು ಗ್ಯಾರಂಟಿ. ಇದರಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎಂದು ಕೇಳುವುದಾದರೆ ಬಹಳಷ್ಟು ಮಂದಿ ಸಂವಿಧಾನವನ್ನು ಬದಲಾಯಿಸಿದರೆ ಅದು ದಲಿತರಿಗೆ ಮಾತ್ರ ಅನ್ವಯಿಸುತ್ತದೆ ಅಥವಾ ದಲಿತರಿಗೆ ಮಾತ್ರ ನಷ್ಟವಾಗುತ್ತದೆ ಎಂದು ಭಾವಿಸಿದ್ದಾರೆ.ಇದು ಅಕ್ಷರಸ: ಸುಳ್ಳು. ಬಿಜೆಪಿಯ ಇಂತಹ ಚಿಂತನೆಗಳಲ್ಲಿ ಮತ್ತು ಕರ್ನಾಟಕದ ಮಟ್ಟಿಗೆ ಮಾತನಾಡುವುದಾದರೆ ಇದು ದಲಿತರು, ಮುಸ್ಲಿಮರು, ಕ್ರಿಸ್ತರು, ಇತರ ಹಿಂದುಳಿದ ವರ್ಗಗಳು, ಲಿಂಗಾಯತರು, ಒಕ್ಕಲಿಗರು, ಕುರುಬರ ಬದುಕು ಮತ್ತು ಅವರ ಮಕ್ಕಳ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಈ ದೇಶದ ದುರಾದೃಷ್ಟವೆಂದರೆ ಯಾವ ಒಬ್ಬ ನರೇಂದ್ರ ಮೋದಿಯಂತಹ ಸಾಮಾನ್ಯ ವ್ಯಕ್ತಿಯನ್ನು ಪ್ರಧಾನಮಂತ್ರಿ ಸ್ಥಾನದವರೆಗೆ ಕೊಂಡೊಯ್ದ ಭಾರತದ ಸಂವಿಧಾನವನ್ನು ಅದೇ ವ್ಯಕ್ತಿಗಳು ಬುಡಮೇಲು ಮಾಡಲು ಹೊರಟಿರುವುದು.

ಏಕೆಂದರೆ ಇವರಿಗೆ ಸಂವಿಧಾನ ಎಲ್ಲಾ ಜಾತಿ ಧರ್ಮ, ಪಂಗಡ ವರ್ಗದವರಿಗೆ ಸಮಾನತೆಯನ್ನು ನೀಡಿದೆ. ಮನುಸ್ಮೃತಿಯನ್ನು ಒಪ್ಪುವ ಬಿಜೆಪಿ ಎಂದಿಗೂ ಮಾನವೀಯತೆ, ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯವನ್ನು ಒಪ್ಪಲು ಸಾಧ್ಯವೇ ಇಲ್ಲ. ಇನ್ನು ಹೇಳಿ ಕೇಳಿ ಬಿಜೆಪಿ ಪಕ್ಷದ ಮೂಲ ಆಶಯವೇ ಹಿಂದುತ್ವವಾದ ಅಲ್ಲವೇ. ಆದರೆ ಭಾರತವನ್ನು “ಹಿಂದೂ ರಾಷ್ಟ್ರ” ಮಾಡಬೇಕೆಂಬ R.S.S ನ ದಶಕಗಳ ಅಜೆಂಡಾವನ್ನು ಸಾಕಾರಗೊಳಿಸಲು ಬಿಜೆಪಿ ನಿನ್ನೆ ಮೊನ್ನೆ ಮಾಡಿದ ತಂತ್ರವಲ್ಲ.
ಇಂದು ದೇಶವ್ಯಾಪ್ತಿ ಬಿಜೆಪಿ ಬೆಳೆಯಲು ಅಥವಾ ಬಿಜೆಪಿ ಬಲವೃದ್ದಿ ಪಡಿಸಲು ಯಾವ ಮೇಲ್ಜಾತಿಯವರೂ ಕಾರಣವಲ್ಲ. ಬದಲಿಗೆ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಅಥವಾ ಪ್ರಬಲ ಪ್ರಾದೇಶಿಕ ಪಕ್ಷದ 2ನೇ ಹಂತದ ಮುಖಂಡರನ್ನು ಐಟಿ, ಇಡಿ ಹೆಸರಲ್ಲಿ ಬಿಜೆಪಿ ತನ್ನೆಡೆಗೆ ಸೆಳೆದು ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಕುಗ್ಗಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಸಾವಿರ ಸಾವಿರ ಉದಾಹರಣೆಗಳನ್ನು ಕೊಡಬಹುದು. ಒಂದು ಮೈಸೂರಿನ ಚಾಮರಾಜನಗರ ಕ್ಷೇತ್ರ. ಇನ್ನೊಂದು ಹಾಸನ ಕ್ಷೇತ್ರ. ಕಾಂಗ್ರೆಸ್‍ನಲ್ಲಿದ್ದ ಬಿ.ಶ್ರೀನಿವಾಸ್ ಪ್ರಸಾದ್‍ರವರನ್ನು ಬಿಜೆಪಿಗೆ ಸೆಳೆದಿದ್ದರಿಂದ ಬಿಜೆಪಿಗೆ ಮೈಸೂರು ಭಾಗದಲ್ಲಿ ಸ್ವಲ್ಪ ಶಕ್ತಿ ಬಂದಿದೆ. ಹಾಗೆಯೇ ಹಾಸನದಲ್ಲಿ ಕಾಂಗ್ರೆಸ್‍ನಲ್ಲಿದ್ದ ಎ.ಮಂಜುರವರಿಗೆ ಬಿಜೆಪಿ ಟಿಕೇಟು ನೀಡಿದ್ದರಿಂದಲೇ ಹಾಸನದಲ್ಲಿ ಜೆಡಿಎಸ್ ಜೊತೆ ನೇರ ಸಮರವಿತ್ತು.(ಇದೀಗ ಜೆಡಿಎಸ್ ಬಿಜೆಪಿಯನ್ನು ಅಪ್ಪಿಕೊಂಡಿದೆ) ಈ ಫಾರ್ಮೂಲವನ್ನೇ ದೇಶದ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಅನುಸರಿಸಿ ಯಶಸ್ವಿಯಾಗಿರುತ್ತದೆ. ಆದರೆ ಬಿಜೆಪಿಯ ಗುಪ್ತಕಾರ್ಯ, ಅವಕಾಶವಾದತನಕ್ಕೆ ಇಡೀ ದೇಶದ ಮತ್ತು ಜನತೆಯ ಹಿತವನ್ನು ಬಲಿ ಕೊಡುತ್ತಿದ್ದಾರೆ ಈ ಶೂನ್ಯ ನಾಯಕರು. ಇಂಥಹವರಿಗೆ ಇತಿಹಾಸ ಎಂದೂ ಕ್ಷಮಿಸುವುದಿಲ್ಲ.

ಅದೇನೇ ಆಗಿರಲಿ ಬಿಜೆಪಿಯ ಮಿಷನ್ 360 ರ ಷಡ್ಯಂತರವನ್ನು ಹೊಡೆದುರುಳಿಸುವ ಶಕ್ತಿಯನ್ನು ನಮ್ಮ ದೇಶದ ಸಂವಿಧಾನವು ನಮಗೆ ನೀಡಿದೆ, ಅದು ಮತದಾನದ ಮೂಲಕ. ಬಿಜೆಪಿಯ ಮಿಷನ್ 360 ವಿಫಲಗೊಂಡರೆ ಜಾತ್ಯಾತೀತ ಭಾರತ ಮತ್ತು ಸಂವಿಧಾನ ಉಳಿದಂತೆ. ಇಲ್ಲವಾದರೆ ಬಿಜೆಪಿಯ ಮಿಷನ್ 360 ದೇಶಕ್ಕೆ ಆಪತ್ತು ಮತ್ತು ಗಂಡಾಂತರ ತರುವುದಂತು ನಿಶ್ಚಿತ..!

ಬಿಜೆಪಿ ಮತ್ತು R.S.S ಹೊಸ ತಲೆಮಾರಿನವರಲ್ಲಿ ಅಸತ್ಯಗಳನ್ನು, ಅರ್ಧ ಸತ್ಯಗಳನ್ನು ಪ್ರಚಾರ ಪಡಿಸುತ್ತಿರುವ, ಸಂಸ್ಕೃತಿಯ ಹೆಸರಿನಲ್ಲಿ ಜನ ವಿರೋಧಿ ಮೌಲ್ಯಗಳನ್ನು ಬಿತ್ತುತ್ತಾ, ಸಮಾಜವನ್ನು ಮತೀಯವಾಗಿ ದ್ರುವೀಕರಿಸುತ್ತಿರುವ ಪ್ರಯತ್ನವನ್ನು ಮಾಡುತ್ತಿದೆ. ಇದು ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಗೆ ಮತ್ತು ಜಾತ್ಯಾತೀತೆಯಂತಹ ಸಂವಿಧಾನದ ಮೌಲ್ಯಗಳಿಗೆ ಗಂಡಾಂತರವಾಗಿದೆ.
ಭಾರತದ ಸೌಹಾರ್ದಯುತ ಸಾಮಾಜಿಕ ಬದುಕನ್ನು ಹಾಳುಗೆಡವಿ, ಭಾರತವನ್ನು “ಹಿಂದು ರಾಷ್ಟ್ರ” ವಾಗಿಸಿ ದಲಿತ, ಅಲ್ಪಸಂಖ್ಯಾತರನ್ನು ಎರಡನೇ ಮತ್ತು 3ನೇ ದರ್ಜೆಯ ಸೇವಕರನ್ನಾಗಿಸುವ ರಹಸ್ಯ ಕಾರ್ಯಾಚರಣೆಯ ಹುನ್ನಾರವಾಗಿದೆ ಮಿಷನ್ 360.