ಕರ್ನಾಟಕ ಭಿಕ್ಷಾಟನೆ ನಿರ್ಮೂಲನಾ ಕಾಯ್ದೆ 1975 ಪ್ರಕಾರ ಭಿಕ್ಷಾಟನೆ ಮಾಡುವುದು ಹಾಗೂ ಭಿಕ್ಷೆ ಕೊಡುವುದು ಎರಡೂ ಅಪರಾಧ
ನಗರ ಮತ್ತು ಗ್ರಾಮಾಂತರಗಳಲ್ಲಿ ಭಿಕ್ಷಾಟನೆ ಮಾಡುವವರ ಹಾಗೂ ಮಾನಸಿಕ ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ನಿತ್ಯ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ರೈಲ್ವೆ ನಿಲ್ದಾಣ, ಕೇಂದ್ರ ಬಸ್‌ನಿಲ್ದಾಣ, ಸರ್ಕಲ್, ಸೂಪರ್ ಮಾರ್ಕೆಟ್, ಸಿಟಿ ಬಸ್ ನಿಲ್ದಾಣ, ಸಿಗ್ನಲ್ ಸೇರಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಭಿಕ್ಷಾಟನೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಮಂಗಳೂರಿನ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಿಗ್ನಲ್ ಗಳಲ್ಲಿ ಮಕ್ಕಳನ್ನು ಕಂಕುಳದಲ್ಲಿ ಎತ್ತಿಕೊಂಡು ಭಿಕ್ಷಾಟನೆ ಮಾಡುವ ನಿರಾಶ್ರಿತ ಮಹಿಳೆಯರು ಹೆಚ್ಚಾಗುತ್ತಿದ್ದಾರೆ. ಇವರು ಸಾರ್ವಜನಿಕರನ್ನು, ವಾಹನ ಸವಾರರನ್ನು ಬಿಡದೇ ಬೆನ್ನತ್ತಿ ಪೀಡಿಸುತ್ತಾ ಹಣ ಕೇಳುತ್ತಾರೆ. ಇನ್ನು ಬಸ್ ನಿಲ್ದಾಣದಲ್ಲಿ ಇವರ ಕಾಟ ಹೇಳತೀರದು. ಬಸ್‌ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಬೆನ್ನತ್ತುವ ಭಿಕ್ಷುಕರು, ಹಣ ನೀಡುವವರಿಗೂ ಬಿಡುವುದಿಲ್ಲ. ಕಾಡಿ ಬೇಡಿ, ಅತ್ತು ಕರೆದು ಹಣ ಪಡೆಯುತ್ತಾರೆ. ಅವರನ್ನು ನೋಡಿದರೆ, ವ್ಯಸನಕ್ಕೆ ದಾಸರಾಗಿರುವಂತೆ ಕಾಣುತ್ತದೆ. ಕೆಲವೊಮ್ಮೆ ಹಣ ಕೊಡದಿದ್ದರೆ ಜನರಿಗೆ ಅವಾಚ್ಯ ಶಬ್ದಗಳಿಂದಲೂ ಇವರು ನಿಂದಿಸುತ್ತಾರೆ.
ಮುಖ್ಯ ಸರ್ಕಲ್, ವೃತ್ತ, ಸಿಗ್ನಲ್ ಗಳಲ್ಲಿ ಭಿಕ್ಷಕರು ನಿಂತಿರುತ್ತಾರೆ. ಸಿಗ್ನಲ್ ಬೀಳುತ್ತಿದ್ದಂತೆ ವಾಹನಗಳಿಗೆ ಅಡ್ಡ ಬಂದು ನಿಂತು ಸವಾರರ ಬಳಿ ಕೈ ಒಡ್ಡುತ್ತಾರೆ. ಹಣ ಕೊಟ್ಟರೆ ತಕ್ಷಣ ಬೇರೆಯವರ ಬಳಿ ಹೋಗುತ್ತಾರೆ. ಇಲ್ಲದಿದ್ದರೆ ಕೊಡುವ ತನಕ ಅವರ ಬಳಿಯೇ ನಿಂತು ಕಿರಿಕಿರಿ ಉಂಟುಮಾಡುತ್ತಾರೆ. ಈ ಅವಧಿಯಲ್ಲಿ ಸಿಗ್ನಲ್ ತೆರೆದರೆ ವಾಹನ ಸವಾರರಿಗೆ ತುಂಬಾ ಕಷ್ಟ. ಭಿಕ್ಷಕರು ವಾಹನಗಳ ಮಧ್ಯೆಯೇ ನಿಂತಿರುತ್ತಾರೆ. ಅವರು ರಸ್ತೆ ಬದಿಗೆ ಹೋಗುವ ತನಕ ವಾಹನಗಳು ಮಧ್ಯ ರಸ್ತೆಯಲ್ಲಿಯೇ ನಿಲ್ಲಬೇಕು. ಮೇಲಾಗಿ ವಾಹನದಡಿಗೆ ಬೀಳುವರು ಎಂಬ ಭಯವೂ ಚಾಲಕರನ್ನು ಕಾಡುತ್ತಿರುತ್ತದೆ.
ಅಸಹಾಯಕ ಭಿಕ್ಷುಕರ ಬಗ್ಗೆ ಎಲ್ಲರಿಗೂ ಕರುಣೆ ಬರುವುದು ಸಾಮಾನ್ಯ. ಆದರೆ, ಜಿಲ್ಲೆ ಸೇರಿ ರಾಜ್ಯಾದ್ಯಂತ ಭಿಕ್ಷಾಟನೆ ಎಂಬುದು ದಂಧೆಯಾಗಿ ಮಾರ್ಪಟ್ಟಿದೆ. ಭಿಕ್ಷಾಟನೆಯ ನೆಪದಲ್ಲಿ ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಿರುವ ದೂರುಗಳು ವ್ಯಾಪಕವಾಗಿದ್ದವು. ಜನರು ಕೂಡ ನಿಜವಾದ ಭಿಕ್ಷುಕರು ಯಾರು ಎಂಬ ಗೊಂದಲಕ್ಕೆ ಒಳಗಾಗುತ್ತಿದ್ದಾರೆ.
ಕರ್ನಾಟಕ ಭಿಕ್ಷಾಟನೆ ನಿರ್ಮೂಲನಾ ಕಾಯ್ದೆ 1975 ಪ್ರಕಾರ ಭಿಕ್ಷಾಟನೆ ಮಾಡುವುದು ಹಾಗೂ ಭಿಕ್ಷೆ ಕೊಡುವುದು ಎರಡೂ ಅಪರಾಧ. ಆದರೆ, ಈ ಕಾಯ್ದೆಯನ್ನು ಯಾರೂ ಪಾಲನೆ ಮಾಡುತ್ತಿಲ್ಲ. ಭಿಕ್ಷಾಟನೆ ತಡೆಯುವ ಜವಾಬ್ದಾರಿ ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲಿದೆ. ಆದರೆ, ಜನರ ಸಹಕಾರವೂ ತುಂಬಾ ಮುಖ್ಯ. ಸಾರ್ವಜನಿಕರದು ಸಾಮಾಜಿಕ ಹೊಣೆಗಾರಿಕೆ ಇರುತ್ತದೆ. ಭಿಕ್ಷೆ ಬೇಡಲು ಬರುವವರಿಗೆ ತಿಳಿವಳಿಕೆ ಹೇಳಿ, ಅವರಿಗೆ ಹಣ ಕೊಡದೇ ಕಳುಹಿಸಬೇಕು. ಆಗ ಮಾತ್ರ ಈ ಪಿಡುಗನ್ನು ನಿಯಂತ್ರಿಸಲು ಸಾಧ್ಯ.
ಬಿಕ್ಷುಕರ ಹೆಸರಲ್ಲಿ ಹಲವಾರು ವರ್ಷಗಳಿಂದ ಕರ ಸಂಗ್ರಹ ಮಾಡುತ್ತಿರುವ ರಾಜ್ಯ ಸರಕಾರ, ಪ್ರತೀ ಮನೆ ಮತ್ತು ಅಂಗಡಿಗಳ ವಾರ್ಷಿಕ ತೆರಿಗೆ ಸಂಗ್ರಹಿಸುವುದರ ಜೊತೆಗೆ, ಬಿಕ್ಷುಕರ ಕರ ಇಂತಿಷ್ಟು ರೂಪಾಯಿ ಎಂಬಂತೆ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತದೆ. ಅದರೆ ಬಿಕ್ಷುಕರು ಅಂಗಡಿ ಬಾಗಿಲು, ಮನೆ ಮನೆಗೆ ಮತ್ತು ಟ್ರಾಪಿಕ್ ಸಿಗ್ನಲ್ ಗಳಲ್ಲಿ, ಬಿಕ್ಷಾಟನೆ ನಡೆಸುವುದರಿಂದ ಸಾರ್ವಜನಿಕರಿಗೆ ಇವರ ಕಿರಿಕಿರಿ ತಪ್ಪಿದ್ದಲ್ಲ. ಪ್ರತೀ ವರ್ಷಕ್ಕೆ ಬಿಕ್ಷುಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಬಿಕ್ಷಾಟನೆಯ ಹೆಸರಿನಲ್ಲಿ ಒಂಟಿ ಹೆಂಗಸರಿರುವ ಮನೆ ಮತ್ತು ಹಿರಿಯ ಜೀವಗಳೇ ಅಧಿಕ ಇರುವ ಮನೆಗಳಿಗೆ ಬಿಕ್ಷಾಟನೆಗೆ ತೆರಳಿ ರಾತ್ರಿ ಹೊತ್ತಲ್ಲಿ ಇಂತವರನ್ನು ಟಾರ್ಗೇಟ್ ಮಾಡುವ ಅಪರಾದ ಪ್ರಕರಣಗಳು ಇತ್ತೀಚೆಗೆ ಅಧಿಕವಾಗುತ್ತಿದೆ. ಬಿಕ್ಷುಕರ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹ ಮಾಡುವ ರಾಜ್ಯಸರಕಾರ ಬಿಕ್ಷುಕರಿಗೆ ಬೇಕಾದ ಸವಲತ್ತುಗಳನ್ನು ಸರಕಾರವೇ ಒದಗಿಸಿಕೊಟ್ಟು, ಬಿಕ್ಷುಕರು ಬೀದಿ-ಬೀದಿಗಳಲ್ಲಿ ಕಂಡು ಬಂದರೆ ಅಂತ ಬಿಕ್ಷುಕರನ್ನು ತನಿಖೆ ನಡೆಸಿ, ಅವರನ್ನು ಸರಕಾರದ ಬಿಕ್ಷುಕರ ಕೇಂದ್ರಕ್ಕೆ ದಾಖಲು ಮಾಡಿದರೆ ಅಪರಾದ ಪ್ರಕರಣಗಳು ಕಡಿಮೆಯಾಗಿ ಬಿಕ್ಷೆ ಬೇಡುವವರ ಸಂಖ್ಯೆ ಕಡಿಮೆಯಾಗಬಹುದು. ಇತ್ತೀಚೆಗೆ ಉಳ್ಳಾಲ ನಗರಸಭೆಯ ಕಟ್ಟಡದ ಅಂಗಡಿಗಳ ಮುಂದೆ, ನಗರ ಸಭೆಯ ಮುಖ್ಯದ್ವಾರದ ಮುಂದೆ ರಾತ್ರಿ ಹೊತ್ತಲ್ಲಿ ಮಲಗಿ, ಬೆಳಿಗ್ಗೆ ಎದ್ದು ಹೋಗುವಾಗ ಅಂಗಡಿಗಳ ಮುಂದೆ ಗಲೀಜು ಮಾಡಿ ಹೋಗುವುದು ಇವರ ಅಭ್ಯಾಸವಾಗಿದೆ. ಆದರೂ ಸಂಬಂಧ ಪಟ್ಟವರು ಈ ಬಗ್ಗೆ ಮೌನವಾಗಿದ್ದಾರೆ.
