ಬಿ.ಸಿ.ರೋಡ್ ತಲಪಾಡಿ ಬಳಿ ನವದಂಪತಿಗಳು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ

ಕರಾವಳಿ

ಪತ್ನಿ ಸ್ಥಳದಲ್ಲೇ ಸಾವು, ಪತಿ ಸ್ಥಿತಿ ಚಿಂತಾಜನಕ.

ನವ ದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ ಸಂಭವಿಸಿ ನವವಿವಾಹಿತೆ ಮೃತಪಟ್ಟು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿಯಲ್ಲಿ ಸೆ.7ರ ಶನಿವಾರ ನಡೆದಿದೆ.

ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಸಾವನ್ನಪ್ಪಿದ ನವವಿವಾಹಿತೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇದೇ ತಿಂಗಳ 5ರಂದು ಪೆರ್ನೆ ಸಮೀಪದ ದೇಂತಡ್ಕ ದೇವಸ್ಥಾನದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನವದಂಪತಿಗಳು. ಬಿಸಿರೋಡಿನ ಕಡೆಯಿಂದ ‌ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ನವದಂಪತಿಗಳ ಆಲ್ಟೋ ಕಾರು ನಿಯಂತ್ರಣ ಕಳೆದು ರಸ್ತೆಯಿಂದ ಡಿವೈಡರ್ ಮೇಲಿನಿಂದ ಇನ್ನೊಂದು ಬದಿಗೆ ಹಾರಿ ಮಂಗಳೂರು ಕಡೆಯಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್‌ಟಿ.ಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಮಾನಸಾ ಸ್ಥಳದಲ್ಲೇ ಮೃತಪಟ್ಟಿದ್ದು ಗಂಭೀರ ಸ್ಥಿತಿಯಲ್ಲಿದ್ದ ಚಾಲಕ ಅನೀಶ್ ಕೃಷ್ಣರನ್ನು ಸ್ಥಳೀಯರು ನುಜ್ಜುಗುಜ್ಜಾದ ಕಾರಿನಿಂದ ಹೊರತೆಗೆದು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮಾನಸ-ಅನೀಶ್ ಕೃಷ್ಣ ಇಬ್ಬರೂ ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.