ರಾಜ್ಯದಲ್ಲಿ ಮತದಾನ ಪ್ರಮಾಣದಲ್ಲಿ ಹೆಚ್ಚಳ ಯಾರಿಗೆ ಲಾಭ.?

ರಾಜ್ಯ

ಮತದಾನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ ಎಂದರೆ ಅದು ಸರ್ಕಾರದ ವಿರುದ್ಧ ರೋಸಿಹೋಗಿ ಜನರು ಹಕ್ಕು ಚಲಾವಣೆ ಮಾಡಿದ್ದಾರೆ ಎಂದರ್ಥ

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡೂ ಹಂತಗಳು ಮುಕ್ತಾಯಗೊಂಡಿವೆ. ಮೊದಲ ಹಂತ ಏಪ್ರಿಲ್​ 26, ಎರಡನೇ ಹಂತ ಮೇ 7ರಂದು ಚುನಾವಣೆ ನಡೆದಿದ್ದು, ಎರಡೂ ಹಂತದ ಚುನಾವಣೆಯಲ್ಲೂ ಉತ್ತಮ ಮತದಾನ ಆಗಿದೆ. ಮಂಡ್ಯ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ ನಡೆದರೆ, ಬೆಂಗಳೂರು ಸೆಂಟ್ರಲ್​ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನ ನಡೆದಿದೆ. ಆದರೆ ಲೆಕ್ಕಾಚಾರ ಪ್ರಕಾರ ರಾಜ್ಯದಲ್ಲಿ ಮೊದಲ ಹಂತದಲ್ಲಿ ಶೇ. 69.56, ಎರಡನೇ ಹಂತದಲ್ಲಿ ಶೇ. 70.41ರಷ್ಟು ಮತದಾನ ಆಗಿದೆ. ರಾಜ್ಯದಲ್ಲಿ ಒಟ್ಟು ಸರಾಸರಿ ಶೇ. 69.96 ರಷ್ಟು ಮತದಾನ ಆಗಿದೆ ಎಂದು ಚುನಾವಣಾ ಆಯೋಗದ ಅಧಿಕೃತ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಶೇ 70ರಷ್ಟು ಜನರು ಮತದಾನದಲ್ಲಿ ಭಾಗಿಯಾಗಿದ್ದಾರೆ. ಕಳೆದ ಮೂರು ಬಾರಿಯ ಸರಾಸರಿ ಅಂಕಿ-ಅಂಶವನ್ನು ನೋಡಿದಾಗ ಈ ಬಾರಿಯ ಮತದಾನದಲ್ಲಿ ಹೆಚ್ಚಳ ಆಗಿರುವುದು ನಿಚ್ಚಳವಾಗಿದೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಶೇ. 67.20 ರಷ್ಟು ಮತದಾನ ನಡೆದಿದೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಅಲ್ಪ ಪ್ರಮಾಣದಲ್ಲಿ ಮತದಾನ ಏರಿಕೆಯಾಗಿ ಶೇ. 68.81ರಷ್ಟು ಮತದಾನ ನಡೆದಿತ್ತು. ಇದೀಗ 2024ರ ಚುನಾವಣೆಯಲ್ಲಿ ಶೇ 69.96 ರಷ್ಟು ಮತದಾನ ಆಗಿದೆ. ಕಳೆದ ಮೂರು ಬಾರಿಯ ಅಂಕಿ ಅಂಶಗಳನ್ನು ಗಮನಿಸಿದಾಗ ಈ ಬಾರಿ ಮತದಾರರು ಜಾಗೃತರಾಗಿದ್ದಾರೆ ಎಂದು ಅನಿಸುತ್ತದೆ.

ಯಾವುದೇ ಒಂದು ಸರ್ಕಾರ ಅಧಿಕಾರದಲ್ಲಿ ಇದ್ದಾಗ ಮತದಾನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ ಎಂದರೆ ಅದು ಸರ್ಕಾರದ ವಿರುದ್ಧ ರೋಸಿಹೋಗಿ ಜನರು ಹಕ್ಕು ಚಲಾವಣೆ ಮಾಡಿದ್ದಾರೆ ಎಂದರ್ಥ. ಆದರೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಯಾವ ಸರ್ಕಾರದ ವಿರುದ್ಧ ಮತದಾರನ ಕಿಚ್ಚು ಕಾಣಿಸಿದೆ ಎನ್ನುವುದನ್ನು ಮತ ಎಣಿಕೆ ದಿನ ಫಲಿತಾಂಶ ಪ್ರಕಟ ಆದಾಗ ಗೊತ್ತಾಗುತ್ತದೆ. ಆದರೆ ಈ ಬಾರಿ ಲೆಕ್ಕಾಚಾರ ಕಾಂಗ್ರೆಸ್​ಗೆ ಸಹಾಯ ಆಗಿರಬಹುದು.