ಅಮೆರಿಕಾ ಮೂಲದ ಮಹಿಳೆಯೊಬ್ಬರ ಮೇಲೆ ಹೋಮ್‌ಸ್ಟೇ ಕೆಲಸಗಾರ ಅತ್ಯಾಚಾರ ಎಸಗಿದ್ದು, ಬಳಿಕ ಮಾಲೀಕ ಸೇರಿ ಆಕೆಯನ್ನು ಮೂರು ದಿನಗಳ ಕಾಲ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಮೆರಿಕಾದಿಂದ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಇಲ್ಲಿನ ‘ದೇವಿ ವಿಲ್ಲಾ’ ಎಂಬ ಹೋಮ್‌ಸ್ಟೇನಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ, ಮಹಿಳೆಗೆ ಡ್ರಿಂಕ್ಸ್ ನೀಡಿ ಅಮಲೇರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದ ಕೂಡಲೇ ಮಹಿಳೆಯ ಸಹಾಯಕ್ಕೆ ಬರಬೇಕಿದ್ದ ಹೋಮ್‌ಸ್ಟೇ ಮಾಲೀಕ ವಿಶಾಲ್, ಬದಲಿಗೆ ಆರೋಪಿಯನ್ನು ರಕ್ಷಿಸಲು ಮುಂದಾಗಿದ್ದಾನೆ. ಘಟನೆ ಹೊರಜಗತ್ತಿಗೆ ತಿಳಿಯಬಾರದೆಂದು ಮಹಿಳೆಯ ಮೊಬೈಲ್ ಕಿತ್ತುಕೊಂಡು, ವೈ-ಫೈ ಸಂಪರ್ಕ ಕಡಿತಗೊಳಿಸಿ ಮೂರು ದಿನಗಳ ಕಾಲ ಅದೇ ರೂಮ್‌ನಲ್ಲಿ ಕೂಡಿಹಾಕಿದ್ದಾರೆ. ಪೊಲೀಸರ ಬಳಿ ಹೋದರೆ ಪ್ರಾಣಾಪಾಯ ಉಂಟುಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಮಾನಸಿಕ ಟಾರ್ಚರ್ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೂರು ದಿನಗಳ ನಂತರ ಮಾಲೀಕ ಮಹಿಳೆಯನ್ನು ಬಿಡುಗಡೆ ಮಾಡಿದ್ದು, ಅಲ್ಲಿಂದ ತಪ್ಪಿಸಿಕೊಂಡು ಮೈಸೂರಿಗೆ ಬಂದ ಮಹಿಳೆ ತಕ್ಷಣ ಅಮೆರಿಕದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ರಾಯಭಾರ ಕಚೇರಿಯ ಮಧ್ಯಸ್ಥಿಕೆಯ ನಂತರ ಕರ್ನಾಟಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಸದ್ಯ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವೃಜೇಶ್ ಮತ್ತು ಮಾಲೀಕ ವಿಶಾಲ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ದೇವಿ ವಿಲ್ಲಾ ಹೋಂಸ್ಟೇ ಹಾಗೂ ಸುತ್ತಮುತ್ತಲಿನ ಪರಿಸರ ಇಷ್ಟವಾದ ಹಿನ್ನಲೆಯಲ್ಲಿ ಏ.12ರಂದು ಮತ್ತೆ ಅ ಮಹಿಳೆ ಒಂಟಿಯಾಗಿ ಬಂದಿದ್ದ ವೇಳೆ ಈ ಕತ್ಯವೆಸಗಲಾಗಿದೆ. ಘಟನೆ ನಡೆದ ಮರು ದಿನವೇ ಮಾಧ್ಯಮದವರು ಈ ಸಂಬಂಧ ಮಾಹಿತಿ ಕೇಳಿದರೂ ಇಲ್ಲಿನ ಪೊಲೀಸ್ ಅಧಿಕಾರಿಗಳು ಪತ್ರಕರ್ತರಿಗೆ ಮಾಹಿತಿ ನೀಡದೆ ಮುಚ್ಚಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ.
