ಜಿಲ್ಲಾ ಕಾಂಗ್ರೆಸ್ ನ್ನು ಲಗಾಡಿ ತೆಗೆದುಬಿಟ್ರಾ ಡಿಸಿಸಿ ಅಧ್ಯಕ್ಷರು.!

ಕರಾವಳಿ

ಡಿಸಿಸಿ ಅಧ್ಯಕ್ಷರ ಅಂಧಾ ದರ್ಭಾರ್ ಗೆ ಬೀಳುತ್ತಾ ಬ್ರೇಕ್.!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಫೀನಿಕ್ಸ್ ನಂತೆ ಎದ್ದು ಬಂದಿದ್ದ ರಾಜ್ಯ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ಡಬಲ್ ಡಿಜಿಟ್ ತಲುಪಲಾಗದಿದ್ದರೂ ಸಮಾಧಾನಕರ ರೀತಿಯ ಪ್ರದರ್ಶನವಂತೂ ತೋರಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರವರ ಕೆಲವೊಂದು ಚಾಣಾಕ್ಷ ರೀತಿಯ ತಂತ್ರಗಳು, ಕೆಪಿಸಿಸಿ ಪದಾಧಿಕಾರಿಗಳ ಸಂಘಟನಾತ್ಮಕ ತಂಡಗಳ ಕಾರ್ಯ ನಿರ್ವಹಣೆ ಕಾಂಗ್ರೆಸ್ ಪಕ್ಷ ಪುಟಿದೇಳಲು ತಮ್ಮದೇ ಆದ ಕೊಡುಗೆಯನ್ನು ನೀಡಿರುವುದನ್ನು ಅಲ್ಲಗಳೆಯಲಾಗದು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಇನ್ನೂ ಕೂಡ ಸಮಾಧಿಯಿಂದ ಎದ್ದೇಳದಿರುವುದು, ಸತ್ತು ಮಲಗಿರುವ ಪಕ್ಷವನ್ನು ಚೈತನ್ಯಕ್ಕೆ ತರಲು ಕೆಪಿಸಿಸಿ ಮುಂದಾಗದಿರುವುದು ಆಶ್ಚರ್ಯ ತಂದಿರುವುದಂತೂ ಸುಳ್ಳಲ್ಲ.

ಎರಡು ಬಾರಿಯ ವಿಧಾನಸಭೆ, ಎರಡು ಬಾರಿಯ ಲೋಕಸಭೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಹೀನಾಯ ಪ್ರದರ್ಶನ ತೋರುತ್ತಿದ್ದರೂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿ ವಹಿಸಿಕೊಂಡಿರುವ ಹರೀಶ್ ಕುಮಾರ್ ಬದಲಾವಣೆಗೆ ಕೆಪಿಸಿಸಿ ಮುಂದಾಗದಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲೇ ಬೇಸರ ಮೂಡಿಸಿದ್ದು, ನೈತಿಕ ಹೊಣೆ ಹೊತ್ತು ಡಿಸಿಸಿ ಅಧ್ಯಕ್ಷರು ರಾಜೀನಾಮೆಗೆ ಮುಂದಾಗದಿರುವುದು ಕಾರ್ಯಕರ್ತರನ್ನು ಕೆರಳಿಸಿದೆ. ಈ ಬಗ್ಗೆ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಅಧ್ಯಕ್ಷ ಬದಲಾವಣೆಗೆ ಸೋಷಿಯಲ್ ಮೀಡಿಯಾಗಳ ಮೊರೆ ಹೋಗಿರುವುದು, ಅಧ್ಯಕ್ಷ ಬದಲಾವಣೆಗೆ ಸ್ವತಃ ಡಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರು ಹಕ್ಕೊತ್ತಾಯ ಸಭೆಗೆ ಮುಂದಾಗಿರುವುದು ಹಾಲಿ ಅಧ್ಯಕ್ಷರು ಪಕ್ಷವನ್ನು ಯಾವ ರೀತಿ ಲಗಾಡಿ ತೆಗೆದುಬಿಟ್ಟಿದ್ದಾರೆ ಅನ್ನುವುದಕ್ಕೆ ಸಾಕ್ಷಿ.

ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ, ಹಿಂದುತ್ವದ ಭದ್ರಕೋಟೆ ಎಂದು ಸ್ವತಃ ಬಿಜೆಪಿಗರಿಂದ ಹೆಚ್ಚಾಗಿ ಕಾಂಗ್ರೆಸ್ಸಿಗರು ಪ್ರಚಾರ ಪಡಿಸುತ್ತಿದ್ದು, ತಮ್ಮ ಸೋಲಿನ ಹೊಣೆಗಾರಿಕೆಯನ್ನು ಹಿಂದುತ್ವದ ತಲೆಗೆ ಕಟ್ಟಿ ಬಚಾವಾಗುವ ಪ್ರಯತ್ನವನ್ನು ಮಾಡುತ್ತಿದ್ದಾರೆ. 2013 ರ ವಿಧಾನಸಭಾ ಚುನಾವಣೆಯ ಸಂದರ್ಭ ಜಿಲ್ಲಾ ಕಾಂಗ್ರೆಸ್ ಗೆ ಪೂರ್ಣಾವಧಿ ಅಧ್ಯಕ್ಷ ಇಲ್ಲದಿದ್ದರೂ ಹಂಗಾಮಿ ಅಧ್ಯಕ್ಷರಾಗಿ ಇಬ್ರಾಹಿಂ ಕೋಡಿಜಾಲ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 8 ರಲ್ಲಿ 7 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿತ್ತು. ಆದರೆ ತರುವಾಯ ಹರೀಶ್ ಕುಮಾರ್ ಅಧ್ಯಕ್ಷರಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ಎರಗಿದ್ದು ಸೋಲಿನ ರುಚಿ. 2013 ರಲ್ಲಿ ಹಿಂದುತ್ವದ ಅಲೆ ಇರಲಿಲ್ಲವೇ? ಪಕ್ಷವನ್ನು ಸಮರ್ಥವಾಗಿ ಮುನ್ನೆಡೆಸುವ ಚಾಕಚಕ್ಯತೆ, ಎಲ್ಲರನ್ನೂ ಒಗ್ಗೂಡಿಸುವ ತಂತ್ರಗಾರಿಕೆ ಅಳವಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಂಗ್ರೆಸ್ ತೃಪ್ತಿದಾಯಕ ಪ್ರದರ್ಶನ ತೋರುವುದರಲ್ಲಿ ಸಂಶಯವಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿಯಲ್ಲಿ ತಮ್ಮದೇ ಜಾತಿ ಬಾಂಧವರಿಗೆ ಟಿಕೆಟ್ ನೀಡಿದರೂ, ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲಾಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆಂಬ ಗುಸು ಗುಸು ಇದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿಸಿಸಿ ಅಧ್ಯಕ್ಷರ ಸ್ವಯಂ ಬೂತಾದ ನಡ ದಲ್ಲಿ ಬಿಜೆಪಿ ಲೀಡ್ ಪಡೆದುಕೊಂಡಿದ್ದು, ಗ್ರಾಮ ಪಂಚಾಯತ್ ಗೆಲ್ಲುವ ಸಾಮರ್ಥ್ಯ ಇಲ್ಲದವರನ್ನೂ ಅಧ್ಯಕ್ಷ ಗಾದಿಯಲ್ಲಿ ಕೂರಿಸಿದರೆ ಲಗಾಡಿ ಅಲ್ಲದೇ ಬೇರೇನೂ ಮಾಡಿಯಾರು ಎಂದು ಕಾಂಗ್ರೆಸ್ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ. ಅಪ್ಪ ಡಿಸಿಸಿ ಅಧ್ಯಕ್ಷ ಕಂ ವಿಧಾನ ಪರಿಷತ್ ಸ್ಥಾನ, ಮಗನಿಗೆ ಲೋಕಸಭಾ ಸ್ಥಾನ ಪಡೆದುಕೊಳ್ಳಲು ಹೈಕಮಾಂಡ್ ಮಟ್ಟದಲ್ಲೂ ಲಾಬಿ ನಡೆಸಿದ್ದರು ಅನ್ನುವ ಮಾಹಿತಿಯೂ ಇದೆ. ಕೊನೆಗೆ ಯು.ಟಿ ಖಾದರ್, ಜನಾರ್ದನ ಪೂಜಾರಿ ಪ್ರಭಾವ ಮೇಳೈಸಿ ಪದ್ಮರಾಜ್ ಪೂಜಾರಿ ಗೆ ಟಿಕೆಟ್ ಲಭಿಸಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತವಾಗಿ ಕಾಂಗ್ರೆಸ್ ಸೋಲುತ್ತಿದ್ದರೂ, ಅಧ್ಯಕ್ಷರ ತಲೆದಂಡ ಬಿಡಿ ವಿಧಾನಸಭಾ ಪರಿಷತ್ ಸ್ಥಾನ ನೀಡಿ ಸಮ್ಮಾನಿಸಿತ್ತು ಹೈಕಮಾಂಡ್. ಇಂತಹ ಗತಿಗೇಡಿಗೆ ಕಾಂಗ್ರೆಸ್ ಬರಬಾರದಿತ್ತು ಅನ್ನುವುದು ಕಾರ್ಯಕರ್ತರ ಅಳಲು. ಜಿಲ್ಲೆಯ ಬಂಟ, ಬಿಲ್ಲವ ಇಬ್ಬರು ಮುಖಂಡರು ಆಯಕಟ್ಟಿನ ಜಾಗದಲ್ಲಿ ಕುಳಿತು ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸುತ್ತಿದ್ದು, ಉಳಿದವರು ಮೇಲೆ ಬರದಂತೆ ತಡೆಯುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಕಾಂಗ್ರೆಸ್ ಈ ಹಂತಕ್ಕೆ ಬಂದು ತಲುಪಿದೆ ಎನ್ನಲಾಗುತ್ತಿದೆ. ಸ್ವತಃ ತಮ್ಮದೇ ಸಮುದಾಯದ ಮತ ಕಾಂಗ್ರೆಸ್ ಪಕ್ಷದತ್ತ ತಿರುಗಿಸಲು ಸಾಧ್ಯವಿಲ್ಲದ ಇವರು ಅಲ್ಪಸಂಖ್ಯಾತ ಮತಗಳನ್ನೇ ನಂಬಿ ತಮ್ಮ ಸ್ಥಾನವನ್ನು ಭದ್ರಪಡಿಸುತ್ತಿದ್ದಾರೆ.

ಮುಸಲ್ಮಾನರ ಮತ ಬೇಕು, ಆದರೆ ಅಧಿಕಾರದಿಂದ ದೂರ ಉಳಿಸುವ ಷಡ್ಯಂತ್ರ ಜಿಲ್ಲೆಯ ಇಬ್ಬರು ಬಂಟ-ಬಿಲ್ಲವ ನಾಯಕರಿಂದ ನಡೆಯುತ್ತಿದೆ. ಡಿಸಿಸಿ ಪದಾಧಿಕಾರಿಗಳಲ್ಲಿ ಒಂದೋ ಎರಡೋ ಸಣ್ಣ ಸ್ಥಾನ ಮುಸಲ್ಮಾನರಿಗೆ ಮೀಸಲು. ಉಳಿದೆಲ್ಲ ಸ್ಥಾನಗಳಲ್ಲಿ ಇತರ ಸಮುದಾಯದ ಜನ ವಿರಾಜಮಾನರು. ವಿಧಾನಪರಿಷತ್ ಉಪ ಚುನಾವಣೆಯ ಆಯ್ಕೆ ಸಮಿತಿಯಲ್ಲೂ ಮುಸ್ಲಿಂ ನಾಯಕರಿಗೆ ಚೊಂಬು. ಒಂದು ವೇಳೆ ಮುಸ್ಲಿಂ ಸಮುದಾಯ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಇಡುಗಂಟು ಇಲ್ಲದ ಸ್ಥಿತಿ ಬರಬಹುದು. ಆದರೆ ಮುಸ್ಲಿಮರು ಕಣ್ಣು ಮುಚ್ಚಿ ಕಾಂಗ್ರೆಸ್ ಗೆ ಮತ ಹಾಕುತ್ತಾರೆ ಅನ್ನುವ ಅಂದಾಜಿನಿಂದ ಆಯಕಟ್ಟಿನ ಜಾಗಗಳಲ್ಲಿ ತಾವು ನಾಯಕರಾಗಿ ವಿಜೃಂಭಿಸುತ್ತಿದ್ದಾರೆ. ಕಾಂಗ್ರೆಸ್ ಇನ್ನಾದರೂ ಇಂತಹ ದುರ್ಬುದ್ಧಿ ಬಿಡುವುದು ಲೇಸು. ಇಲ್ಲವಾದರೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗಬಹುದು.

ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ. ಬಿಜೆಪಿ ವಿರುದ್ಧ ತೊಡೆ ತಟ್ಟುವ ಸಮರ್ಥ ಕಾರ್ಯಕರ್ತರಿದ್ದಾರೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥ ನಾಯಕನಿಗೆ ಕಾಂಗ್ರೆಸ್ ಮಣೆ ಹಾಕಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಫೀನಿಕ್ಸ್ ನಂತೆ ಎದ್ದೇಳಬಹುದು. ಕಾರ್ಯಕರ್ತರ ಅಹವಾಲಿಗೆ ಮಣಿಯದೆ ಹರೀಶ್ ಕುಮಾರ್ ರನ್ನೆ ಮತ್ತೆ ಮುಂದುವರಿಸಿದರೆ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಮ್ಯೂಸಿಯಂ ನಲ್ಲಿ ನೋಡಬೇಕಾದ ಸ್ಥಿತಿ ತಲುಪಿಸುತ್ತಾರೆ ಅನ್ನುವುದಂತೂ ಸತ್ಯ.