ಮಂಗಳೂರು ಮೀನುಗಾರಿಕಾ ಅಭಿವೃದ್ದಿ ನಿಗಮದ ದೊಡ್ಡ ಗಾತ್ರದ ತಿಮಿಂಗಿಲಗಳು ಸ್ವಚ್ಛಂದವಾಗಿ ಈಜಾಡುವ ಸಮೃದ್ಧ ಜಾಗ
‘ದುನಿಯಾ ಝಕತಾ ಹೈ, ಝಕಾನೇ ವಾಲಾ ಚಾಹಿಯೇ’ ಅಂತ ಹಿಂದಿಯಲ್ಲೊಂದು ಪಾಪ್ಯುಲರ್ ಡೈಲಾಗ್ ಇದೆ. ಅಂದರೆ ‘ಪ್ರಪಂಚ ಬಗ್ಗುತ್ತೆ ಬಗ್ಗಿಸೋನು ಬೇಕಷ್ಟೇ’ ಅನ್ನುವ ಹಾಗೆ ಯಾಮಾರಿಸುವ ಕಲೆಯಲ್ಲಿ, ಚಮಚಾಗಿರಿಯಲ್ಲಿ ನಿಪುಣರಾಗಿದ್ದರೆ ಎಷ್ಟೋ ದೊಡ್ಡವರನ್ನು ಮುಂಡಾಮೋಚಬಹುದು ಅನ್ನುವುದಕ್ಕೆ ನಾವು ಇವತ್ತು ಹೇಳುವ ವರದಿಯೇ ಪ್ರತ್ಯಕ್ಷ ಸಾಕ್ಷಿ.
ಪರಶುರಾಮನ ನಾಡಿನಲ್ಲಿ ಈಗ ತರಹೇವಾರಿ ಕಾನೂನು ಬಾಹಿರ ದಂಧೆಗಳದ್ದೇ ದೊಡ್ಡ ಸದ್ದು. ಭರ್ಜರಿ ಸುದ್ದಿ. ಬರೋಬ್ಬರಿ ರೊಕ್ಕ ಬಾಚಿಕೊಳ್ಳುವ ಸರಕಾರದ ಪ್ರಮುಖ ಇಲಾಖೆಗಳಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಇಲಾಖೆಯು ಒಂದು. ದೊಡ್ಡ ಗಾತ್ರದ ತಿಮಿಂಗಿಲಗಳು ಸ್ವಚ್ಛಂದವಾಗಿ ಈಜಾಡುವ ಸಮೃದ್ಧ ಜಾಗ ಈ ಮೀನುಗಾರಿಕಾ ಅಭಿವೃದ್ಧಿ ನಿಗಮ.

ವಿಷಯಕ್ಕೆ ಬರೋಣ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ಕೆಎಫ್ ಡಿಸಿ ) ಹೋಯಿಗೆ ಬಜಾರ್ ಮಂಗಳೂರು. ಈ ಇಲಾಖೆಯಲ್ಲಿ ಭರ್ಜರಿ ಗೋಲ್ ಮಾಲ್ ನಡೆದಿರುವುದು ಬಯಲಾಗಿದೆ. ರಣ ಹಸಿವಿನ ಭ್ರಷ್ಟ ಅಧಿಕಾರಿಯ ಭಕ್ಷಣೆ ಹಾರಿಬಲ್ ಸುದ್ದಿ ಜಗಜ್ಜಾಹೀರಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತವಿದ್ದಾಗ ‘ಸಜ್ಜನ’ ಲೇಬಲ್ ಅಂಟಿಸಿಕೊಂಡವರು ಮೀನುಗಾರಿಕಾ ಸಚಿವರಾಗಿದ್ದರು. ಅವರ ಆಪ್ತ ಸಹಾಯಕನೊಬ್ಬ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವ ಸಲುವಾಗಿ ಹೊರಗುತ್ತಿಗೆ ನೌಕರರಿಂದ ಲಕ್ಷ, ಲಕ್ಷ ರೂಪಾಯಿ ಹಣವನ್ನು ಪೀಕಿಸಿದ್ದಾನಂತೆ. ಈ ದಂಧೆಗೆ ಸಾಥ್ ಕೊಟ್ಟಿದ್ದು ಬೇರಾರೂ ಅಲ್ಲ, ಮಂಗಳೂರು ಮೀನುಗಾರಿಕಾ ಅಭಿವೃದ್ಧಿ ನಿಗಮದ ಉಪ-ಕಾರ್ಯ ನಿರ್ವಾಹಕ ಅಧಿಕಾರಿ ಬಲು ಚಾಲಾಕಿತನದ ಅಧಿಕಾರಿ ಎಂಬುದು ಇದೀಗ ಬಟಾ ಬಯಲಾಗಿರುವ ಸಂಗತಿ.
ಅಷ್ಟಕ್ಕೂ ಈ ಹೊರಗುತ್ತಿಗೆ ನೌಕರರನ್ನು ‘ಖಾಯಂ’ ಗೊಳಿಸಲು ಕೆಲವೊಂದು ನೀತಿ ನಿಯಮಗಳು ಇವೆ. ಆದರೆ ಈ ರಣ ಹಸಿವಿನ ಭ್ರಷ್ಟ ಅಧಿಕಾರಿ ಇದನ್ನೆಲ್ಲ ಗಾಳಿಗೆ ತೂರಿದ್ದ. ದುಡ್ಡು ಕೊಟ್ಟರೆ ಎಲ್ಲವೂ ನಡೆಯುತ್ತೆ. ಆ ಮಿನಿಸ್ಟರ್, ಈ ಮಿನಿಸ್ಟರ್ ಎಲ್ಲರೂ ನನಗೆ ಪರಿಚಿತರು. ದುಡ್ಡು ಕೊಡಿ ನಿಮ್ಮನ್ನೆಲ್ಲ ಖಾಯಂ ಮಾಡುತ್ತೇನೆ ಎಂದು ಹೊರಗುತ್ತಿಗೆ ನೌಕರರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದನಂತೆ. ಮೇಲಾಧಿಕಾರಿಯೇ ಇಷ್ಟು ಸಲೀಸಾಗಿ ಕೆಲಸ ಮಾಡಿಕೊಡುವುದಾಗಿ ಹೇಳಿದ ಮೇಲೆ ನಂಬದೆ ಬಿಡುತ್ತಾರ.? ಹೊರಗುತ್ತಿಗೆ ನೌಕರರಿಂದ ದುಡ್ಡು ಸ್ವಾಹಾ ಮಾಡಿ ಜೋಳಿಗೆ ತುಂಬಿಸಲು ಬೆಂಗಳೂರು ಹತ್ತಿ ‘ದೊಡ್ಡ’ವರನ್ನೆಲ್ಲಾ ಭೇಟಿ ಮಾಡಿ ಬಂದಿದ್ದನಂತೆ. ಆದರೆ ಅದೇ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಉರುಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಮೀನುಗಾರಿಕಾ ಸಚಿವರಾಗಿ ‘ವೈದ್ಯ’ ನೆನ್ನುವ ಸಂಭಾವಿತರ ಹೆಗಲಿಗೂ ಬಿತ್ತು. ಆದರೆ ಈ ಅಧಿಕಾರಿ ಬಿಜೆಪಿ, ಕಾಂಗ್ರೆಸ್ ಯಾವುದೇ ಸರಕಾರ ಅಧಿಕಾರಕ್ಕೂ ಬಂದರೂ ತನ್ನ ಜಾಗವನ್ನು ಭದ್ರಪಡಿಸಿಕೊಂಡಿದ್ದ. ಎಲ್ಲರೊಂದಿಗೂ ಅಡ್ಜಸ್ಟ್ ಮೆಂಟ್ ಇಳಿದ ಪರಿಣಾಮ ಈತ ಎತ್ತಂಗಡಿಯಾಗದೇ ಅಲ್ಲಿಯೇ ಪರ್ಮನೆಂಟಾಗಿ ಉಳಿದ.

ಹೊರಗುತ್ತಿಗೆ ನೌಕರರನ್ನು’ಖಾಯಂ’ಗೊಳಿಸಲು ಕೆಲವೊಂದು ನಿಯಮಗಳಿವೆ. ಆದರೆ ಹೊರಗುತ್ತಿಗೆ ನೌಕರರ ಜೇಬಿಗೆ ಕನ್ನಹಾಕಿದ ಈತ ದುಡ್ಡು ಬಾಚಿಕೊಳ್ಳಲು ಐದು ವರ್ಷಗಳಿಂದ ಸೇವೆ ಸಲ್ಲಿಸುವವರು, ಹತ್ತು ವರ್ಷ, ಹದಿನೆಂಟು ವರ್ಷ ಹೀಗೆ ತಮಗೆ ಬೇಕಾದಂತೆ ಪಟ್ಟಿ ತಯಾರಿಸಿ ಹೊಸ ಮಂತ್ರಿಯ ಆಪ್ತರ ಸುತ್ತಾ ಗಿರಾಕಿ ಹೊಡೆಯಲು ಶುರುವಿಟ್ಟುಕೊಂಡಿದ್ದ. ವಿಶೇಷವೇನೆಂದರೆ ಈತ ತಯಾರಿಸಿದ ಪಟ್ಟಿಯಲ್ಲಿ 120 ಮಂದಿ ಹೊರ ಗುತ್ತಿಗೆ ನೌಕರರ ಹೆಸರು ಇತ್ತು. ಅದರಲ್ಲಿ ಇದ್ದ ಪೂರ್ತಿ ಹೆಸರು ಪರಿವಾರದ ಹಿನ್ನಲೆಯುಳ್ಳ ಮಂದಿಯೇ ಆಗಿತ್ತು. ಈ ಪಟ್ಟಿಯೊಂದಿಗೆ ಭಟ್ಕಳ, ಕಾರಾವಾರ ಬೆಂಗಳೂರು ಎಂದೆಲ್ಲಾ ಅಡ್ಡಾಡಿಕೊಂಡು ಬಂದಿದ್ದ. ಈಗಿನ ಮೀನುಗಾರಿಕಾ ಸಚಿವರು, ನಿಗಮದ ವ್ಯವಸ್ಥಾಪಕರು, ಈತನ ಚಮಚಗಿರಿಗೆ, ಲಾಬಿಗೆ ಕಿಂಚಿತ್ತೂ ಮಣಿಯಲಿಲ್ಲ ಅನ್ನುವ ಸುದ್ದಿ ಇದೀಗ ಹೊರಬಂದಿದೆ. ಈತನ ನಂಬಿ ದುಡ್ಡು ಕೊಟ್ಟವರ, ಇನ್ನು ಕೊಡುವ ಹೊರಗುತ್ತಿಗೆ ನೌಕರರ ಪರಿಸ್ಥಿತಿ ಅಧೋಗತಿ. ಅತ್ತ ದುಡ್ಡು ಇಲ್ಲ, ಇತ್ತ ಖಾಯಂ ನೌಕರಿ ಇಲ್ಲ. ದುಡ್ಡು ಕೊಟ್ಟವರಿಗೆ ದೊಡ್ಡ ಮೂರು ನಾಮ ಬಿದ್ದಂತಾಗಿದೆ.
ಪೊಲೀಸ್ ಇಲಾಖೆ ಇರಲಿ ಅಥವಾ ಇನ್ನಿತರ ಯಾವುದೇ ರೀತಿಯ ಸರಕಾರಿ ನೌಕರರಿಗೆ ಶಾಶ್ವತವಾಗಿ ಒಂದೇ ಕಡೆಯಲ್ಲಿ ಕೆಲಸ ಮಾಡುವ ಅವಕಾಶ ಸಿಗುವುದಿಲ್ಲ. ಕನಿಷ್ಠ ಎರಡು ವರ್ಷ, ಹೆಚ್ಚೆಂದರೆ ಐದು ವರ್ಷ ಆನಂತರ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವುದು ರೂಢಿ. ಆದರೆ ಮಂಗಳೂರು ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರು ಈ ವರೆಗೂ ಬೇರೆ ಕಡೆಗೆ ವರ್ಗಾವಣೆ ಆದ ಇತಿಹಾಸವೇ ಇಲ್ಲ. ಐದು ವರ್ಷಗಳಿಂದ, ಹತ್ತು ವರ್ಷಗಳಿಂದ, ಹದಿನೆಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದವರು ಈಗ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ವರ್ಗಾವಣೆ ಆದದ್ದೇ ಇಲ್ಲ. ಏನಿದರ ಮರ್ಮ.? ವಿಚಿತ್ರ ಎಂದರೆ ಇಲ್ಲಿ ಕೆಲಸಕ್ಕೆ ಸೇರಿದ ಓರ್ವ ಭೃಷ್ಟ ಆಯಿಲ್ ಸೇವಕ ಇನ್ನು ಎರಡು ವರ್ಷ ಕಳೆದರೆ ನಿವೃತ್ತಿ ಪಡೆಯಲಿದ್ದಾರೆ. ಕೆಲಸಕ್ಕೆ ಸೇರಿದ ಅಂದಿನಿಂದ ಇಂದಿನವರೆಗೂ ವರ್ಗಾವಣೆಯಾಗದೆ ಮಂಗಳೂರಿನ ಮೀನುಗಾರಿಕಾ ಇಲಾಖೆಯಲ್ಲಿಯೇ ಖಾಯಂ ಗಿರಾಕಿಯಾಗಿ ಇಲ್ಲಿಂದ ಕೊನಗೆ ನಿವೃತ್ತಿ ಪಡೆಯಲಿದ್ದಾನೆನಂತೆ. ಇದು ಮೀನುಗಾರಿಕಾ ಆಡಳಿತಕ್ಕೆ ತುಕ್ಕು ಹಿಡಿದಕ್ಕೆ ನಿದರ್ಶನವೇ.. ಅಥವಾ ಕುರುಡು ಕಾಂಚಣದ ಮಹಿಮೆಯೋ.? ಶಿವನೇ ಶಂಭುಲಿಂಗ.
