ಪ್ರಧಾನಿ, ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದ ಸೋನಿಯಾ. ರಾಜೀವ್ ಗಾಂಧಿ ವಿವಿ ಸಿಂಡಿಕೇಟ್ ಸದಸ್ಯರಾಗಲು ಲಕ್ಷಾಂತರ ರೂ ಲಂಚ .!
ಬೆಂಗಳೂರು (ನವದೆಹಲಿ): ಮೂಡಾ ಅಕ್ರಮ, ವಾಲ್ಮಿಕಿ ನಿಗಮದ ಕರ್ಮಕಾಂಡಗಳು ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವಾಗಲೇ ಇದೀಗ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ (RGUHS) ವ್ಯಾಪ್ತಿಯಲ್ಲೂ ಭಾರೀ ಅಕ್ರಮ ನಡೆದಿದೆಯೆಂದು ಪ್ರಭಾವಿಗಳ ಹೆಸರು ಉಲ್ಲೇಖಿಸಿ ದೂರು ನೀಡಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ಸದಸ್ಯರಾಗಲು ಲಕ್ಷಾಂತರ ರೂಪಾಯಿ ಡೀಲ್ ಕುದುರಿಸಬೇಕಿದ್ದು, ಆ ಹಣ ವಸೂಲಿಗಾಗಿ ಕಾಲೇಜುಗಳಿಗೆ ಅಕ್ರಮ ಲೈಸನ್ಸ್ ನೀಡುವ ದಂಧೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲ, ಗುಜರಾತ್, ಪಶ್ಚಿಮ ಬಂಗಾಳ, ತ್ರಿಪುರಾ, ರಾಜಸ್ಥಾನ ಸಹಿತ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಅಕ್ರಮ ಪರೀಕ್ಷೆ ನಡೆಯುತ್ತಿರುವ ಕರಾಳ ದಂಧೆ ಬೆಳಕಿಗೆ ಬಂದಿದೆ. ರಾಜ್ಯದ ಬಹುತೇಕ ನರ್ಸಿಂಗ್ ಕಾಲೇಜುಗಳು, ಮೆಡಿಕಲ್ ಕಾಲೇಜುಗಳು ಅಕ್ರಮಗಳ ಅಡ್ಡೆಯಾಗಿದ್ದು ಕೋಟಿ ಕೋಟಿ ಡೀಲ್ಗಳ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಪ್ರಧಾನಿ ಕಚೇರಿಯಲ್ಲಿ ದೂರು ದಾಖಲಾಗಿದೆ. ಸಿಂಡಿಕೇಟ್ ಸದಸ್ಯರ ನೇಮಕಾತಿಯೇ ಅಕ್ರಮ, ಅವರಿಂದ ಮತ್ತಷ್ಟು ಅಕ್ರಮಗಳು ನಡೆಯುತ್ತಿವೆ ಎಂಬ ಸಂಗತಿ ಈ ದೂರಿನಲ್ಲಿ ಪ್ರತಿಧ್ವನಿಸಿದೆ.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವೆಂಕಟಗಿರಿ ಎಂಬವರ ಪತ್ನಿ R.C.ಸೋನಿಯಾ ಅವರು ತನ್ನ ಪತಿ ಹಾಗೂ ಕೆಲವು ಪ್ರಭಾವಿಗಳ ವ್ಯಕ್ತಿಗಳ ಸಹಿತ ಹಲವರ ವಿರುದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಬಿಐ ನಿರ್ದೇಶಕರು ಹಾಗೂ ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ಬರೋಬ್ಬರಿ 10 ಪುಟಗಳ ದೂರು ಸಲ್ಲಿಸಿದ್ದಾರೆ. ಈ ದೂರಿನ ಬಗ್ಗೆ ರಾಜ್ಯಪಾಲರು, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸಹಿತ ರಾಜ್ಯ ಸರ್ಕಾರದ ಪ್ರಮುಖರಿಗೂ ದೂರು ಸಲ್ಲಿಸಿ RGUHS ಕರ್ಮಕಾಂಡವನ್ನು ಅನಾವರಣ ಮಾಡಲು ಕೋರಿಕೊಂಡಿದ್ದಾರೆ.

ದೂರಿನ ಹೈಲೈಟ್ಸ್ ಹೀಗಿದೆ;
UrRGUHS ಸಿಂಡಿಕೇಟ್ ಸದಸ್ಯ ವೆಂಕಟಗಿರಿ ಅವರು ತಮ್ಮ ಟ್ರಸ್ಟ್ ಮೂಲಕ ಬೆಂಗಳೂರಿನ ಇಂದಿರಾನಗರ ಸಹಿತ ಹಲವೆಡೆ ನರ್ಸಿಂಗ್ ಕಾಲೇಜುಗಳನ್ನು ಹೊಂದಿದ್ದಾರೆ. ಕರ್ನಾಟಕ ನರ್ಸಿಂಗ್ ಕೌನ್ಸಿಲ್ (KNC) ಸದಸ್ಯರಾಗಲು ತಮ್ಮ ಟ್ರಸ್ಟ್ ನಿಂದ 50 ಲಕ್ಷ ರೂಪಾಯಿಗಳನ್ನು ಲಂಚದ ರೂಪದಲ್ಲಿ ಪಾವತಿಸಿದ್ದಾರೆ. ದುರ್ಗದ ಶಾಸಕರೊಬ್ಬರ ಸಹೋದರಿ ಕೆಎನ್ಸಿ ರಿಜಿಸ್ಟ್ರಾರ್ ಆಗಿದ್ದು, ಅವರ ಪ್ರಸ್ತಾಪ ಆಧರಿಸಿ ಈ ಹಣ ನೀಡಲು ಮುಂದಾದಾಗ ಆ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ತಾನು ಹಾಗೂ ಇತರ ಸದಸ್ಯರು ಆಕ್ಷೇಪಿಸಿದ್ದು, ತಮ್ಮ ವಿರೋಧದ ನಡುವೆಯೇ ಡೀಲ್ ಕುದುರಿಸಿದ್ದಾರೆ ಎಂದು ಸೋನಿಯಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಲು ಕೂಡಾ ಲಕ್ಷಾಂತರ ರೂಪಾಯಿ ಲಂಚ ನೀಡಲು ನನ್ನ ಪತಿ ಮುಂದಾದಾಗಲೂ ತಾವು ಆಕ್ಷೇಪಿಸಿದ್ದು, ಆ ವೇಳೆ ಕೆಲವು ಪ್ರಭಾವಿ ವ್ಯಕ್ತಿಗಳು ನನ್ನ ಪತಿಯ ಆಪ್ತರಾಗಿದ್ದು, ರಾಜ್ಯಪಾಲರ ಕಚೇರಿ ಅಧಿಕಾರಿಗಳ ನಿಕಟ ಪರಿಚಯವಿದ್ದು ನಾಮನಿರ್ದೇಶನ ಮಾಡಸಿಕೊಳ್ಳುವುದಾಗಿ ನನ್ನ ಪತಿ ಹೇಳಿಕೊಂಡಿದ್ದಾರೆ. ಕೌನ್ಸಿಲ್ ಸದಸ್ಯರಾದ ನಂತರ ನಿಯಮ ಉಲ್ಲಂಘಿಸಿರುವ ನರ್ಸಿಂಗ್ ಕಾಲೇಜುಗಳಿಗೂ ಅನುಮತಿ ಕೊಡಿಸುತ್ತಿದ್ದರು. ನನ್ನ ಪತಿಯ ಆಪ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಅತ್ಯಂತ ಪ್ರಭಾವಿಗಳಾಗಿದ್ದಾರೆ. ಪ್ರಭಾವಿ ಎನಿಸಿಕೊಂಡಿರುವವರು ಈ ರೀತಿ ಅಕ್ರಮದ ಹಣದಿಂದಲೇ ಅಪಾರ ಆಸ್ತಿಗಳಿಸಿದ್ದಾರೆ ಎಂಬ ಸಂಗತಿಯೂ ದೂರಿನಲ್ಲಿ ಉಲ್ಲೇಖವಾಗಿದೆ.
ರಾಜ್ಯದ ಅನಧಿಕೃತ ಕಾಲೇಜುಗಳ ಮಾಲೀಕರೊಂದಿಗೆ ಸೇರಿಕೊಂಡು ಗುಜರಾತ್, ಪಶ್ಚಿಮ ಬಂಗಾಳ, ತ್ರಿಪುರಾ, ರಾಜಸ್ಥಾನ ಮತ್ತಿತರ ರಾಜ್ಯಗಳ ನರ್ಸಿಂಗ್ ವಿದ್ಯಾರ್ಥಿಗಳನ್ನು ಕರೆತಂದು ಅಕ್ರಮವಾಗಿ ಪರೀಕ್ಷೆ ಬರೆಸುವ ದಂಧೆಯನ್ನೂ ನಡೆಸುತ್ತಿದ್ದಾರೆ ಎಂಬ ಕಳವಳಕಾರಿ ಸಂಗತಿ ಬಗ್ಗೆಯೂ ದೂರಿನಲ್ಲಿ ಬೆಳಕು ಚೆಲ್ಲಲಾಗಿದೆ. ಇದಕ್ಕೆ ಆಕ್ಷೇಪಿಸಿದ ಕಾರಣಕ್ಕಾಗಿ ವೆಂಕಟಗಿರಿ ಅವರು ನನ್ನನ್ನೇ ಟ್ರಸ್ಟ್ ನಿಂದ ದೂರ ಇಟ್ಟಿದ್ದಾರೆ ಎಂದು ದೂರಿರುವ ಸೋನಿಯಾ, ತಮ್ಮ ಕಾಲೇಜು ವಿದ್ಯಾರ್ಥಿಗಳ ಮೂಲಕ ದಾಳಿ ಮಾಡಿ ದೌರ್ಜನ್ಯ ನಡೆಸುವುದಾಗಿಯೂ, ಕೊಲೆ ಮಾಡಿಸುವುದಾಗಿಯೂ ನನ್ನ ಪತಿ ಬೆದರಿಕೆಯೊಡ್ಡಿದ್ದಾರೆ. ಇದಕ್ಕೆ ಜಗ್ಗದಿದ್ದಾಗ ವಿಚ್ಚೇಧನ ಕೊಡಿಸಿದ್ದಾರೆ. ಜೊತೆಗೆ ಹಲವಾರು ಸುಳ್ಳು ದೂರುಗಳನ್ನೂ ದಾಖಲಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ. ಈ ಸಂಚಿಗೆ ಬ್ಲಾಕ್ ಮ್ಯಾಜಿಕ್ ತಜ್ಞರನ್ನು(ಹೆಸರು ಉಲ್ಲೇಖ) ಬಳಸಿಕೊಂಡಿರುವ ಕಹಿ ಸಂಗತಿಯನ್ನೂ ಬರೆದುಕೊಂಡಿದ್ದಾರೆ.
ಈ ವಿಚಾರದಲ್ಲಿ ಅನೇಕರು ನನಗೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪೂರಕ ಎಂಬಂತೆ ನರ್ಸಿಂಗ್ ಕಾಲೇಜಿನ ಹುಡುಗರು ತಮ್ಮೊಂದಿಗಿದ್ದು ಅವರಲ್ಲಿ ಪಿಸ್ತೂಲ್ ಇದ್ದು, ಅವರ ಮೂಲಕ ಪಾಠ ಕಲಿಸುವುದಾಗಿ ವೆಂಕಟಗಿರಿ ಹೆದರಿಸಿದ್ದಾರೆ ಎಂದು ಈ ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಪ್ರಭಾವಿಗಳು ಜೊತೆ ಸೇರಿಕೊಂಡು ವಿದೇಶಗಳಲ್ಲಿ ಆಸ್ತಿ ಹೊಂದಿದ್ದಾರೆ ಎಂದು ನನ್ನ ಪತಿ ಆಗಾಗ ಹೇಳಿಕೊಳ್ಳುತ್ತಿದ್ದರು. ಈ ವಿಷಯವನ್ನು ಬಹಿರಂಗಪಡಿಸಬಾರದು ಎಂದೂ ಎಚ್ಚರಿಕೆ ನೀಡುತ್ತಿದ್ದರು ಎಂದವರು ದೂರಿದ್ದಾರೆ.

14.06.2024ರಂದು ಪ್ರಭಾವಿ ಸಚಿವರನ್ನು ವಿಧಾಸಸೌಧದಲ್ಲಿರುವ ಅವರ ಕೊಠಡಿಯಲ್ಲಿ ಭೇಟಿಯಾಗಿ ನನ್ನ ಪತಿ ಹಾಗೂ ಸಿಂಡಿಕೇಟ್ ಸದಸ್ಯರ ಅಕ್ರಮಗಳ ಬಗ್ಗೆ ಹೇಳಿಕೊಂಡಿದ್ದೇನೆ. ಆ ವೇಳೆ ಸಚಿವರು ಸಿಂಡಿಕೇಟ್ ಸದಸ್ಯರನ್ನು ಸಮರ್ಥಿಸಿಕೊಂಡು ಮಾತನಾಡಿದ್ದಾರೆ. ನೀನು ಅವರಿಂದ ದೂರ ಇರದಿದ್ದಲ್ಲಿ ಕೊಲೆ ಮಾಡಲೂ ಹಿಂಜರಿಯಲ್ಲ ಎಂದು ಸಚಿವರೇ ಹೇಳಿದ್ದಾರೆ ಎಂದೂ ಈ ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಕರ್ಮಕಾಂಡದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸೋನಿಯಾ ಎಂಬ ಮಹಿಳೆ ಪ್ರಧಾನಿ ಕಚೇರಿ ಹಾಗೂ ಕೇಂದ್ರ ಸರ್ಕಾರದ ತನಿಖಾ ಏಜನ್ಸಿಗಳ ಮೊರೆಹೋಗಿದ್ದಾರೆ.
