ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಭರ್ಜರಿ ಸರ್ಜರಿ ಸಾಧ್ಯತೆ..ಆರು ಸಚಿವರಿಗೆ ಕೊಕ್..

ರಾಜ್ಯ

ಖಾದರ್ ‘ಮಿನಿಸ್ಟರ್’.. ‘ಸ್ಪೀಕರ್’ ಹುದ್ದೆಗೆ ಗುಂಡೂರಾವ್.!

ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ಸುದ್ದಿಯೊಂದು ಹೊರಬರುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಗಸ್ಟ್ ತಿಂಗಳಾಂತ್ಯಕ್ಕೆ ಭರ್ಜರಿ ಸರ್ಜರಿ ನಡೆಯುವ ಸಾಧ್ಯತೆ ಕೇಳಿ ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿರುವ ಬೆನ್ನಲ್ಲೇ ರಾಜ್ಯದ ಕೆಲವು ಹಿರಿಯ ನಾಯಕರಿಗೂ ಹೈಕಮಾಂಡ್ ನಿಂದ ಬುಲಾವ್ ಬಂದಿದೆ.

ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಹಾಗೂ ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ ಹಗರಣಗಳ ಸುದ್ದಿ ಹೈಕಮಾಂಡ್ ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆ ಯಾಗುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ವಿರುದ್ಧ ನಿರಂತರವಾಗಿ ಬುಸುಗುಟ್ಟುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ದೆಹಲಿ ಭೇಟಿ ಪಕ್ಕಾ ಆಗಿದ್ದು, ತನ್ವೀರ್ ಸೇಠ್, ಎಸ್ ಆರ್ ಪಾಟೀಲ್ ಗೂ ಬುಲಾವ್ ಬಂದಿದೆ ಎಂಬ ಸುದ್ಧಿ ಇದೆ.

ಸಂಪುಟ ಪುನಾರಚನೆ ನಡೆದರೆ ಕನಿಷ್ಠ ಆರು ಸಚಿವರ ತಲೆದಂಡ ಪಕ್ಕಾ ಎನ್ನಲಾಗಿದೆ. ಬಲ್ಲ ಮೂಲಗಳ ಪ್ರಕಾರ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಹಿಂದುಳಿದ ವರ್ಗಗಳ ಮತ್ತು ಎಸ್ ಟಿ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಚಿವ ಎಂ.ಸಿ ಸುಧಾಕರ್ ಮಂತ್ರಿ ಪದವಿ ಕಳೆದುಕೊಳ್ಳಲಿದ್ದು. ಸ್ಪೀಕರ್ ಯು ಟಿ ಖಾದರ್ ಅವರಿಗೆ ಮಂತ್ರಿ ಸ್ಥಾನ ದೊರೆಯುವ ಮಾತುಗಳು ಕೇಳಿ ಬರುತ್ತಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರನ್ನು ಸ್ಪೀಕರ್ ಹುದ್ದೆಗೆ ತಂದು, ಖಾದರ್ ಅವರಿಗೆ ಆರೋಗ್ಯ ಇಲಾಖೆ ಮಂತ್ರಿ ಮಾಡುವ ಸಾಧ್ಯತೆ ದಟ್ಟವಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಪಕ್ಕಾ ಎಂದೇ ಹೇಳಲಾಗುತ್ತಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಪ್ತರಾದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಇಲ್ಲವೇ ಶರಣ ಪ್ರಕಾಶ್ ಪಾಟೀಲ್ ಇಬ್ಬರಲ್ಲಿ ಒಬ್ಬರು ಕೆಪಿಸಿಸಿ ಅಧ್ಯಕ್ಷರಾಗಬಹುದು ಎನ್ನಲಾಗುತ್ತಿದೆ.