ಆರೋಪಿಯ ಅಪರಾಧದ ಬಗ್ಗೆ ನೋಟಿಸ್ ನಲ್ಲಿ ವಿವರ ಒದಗಿಸಲು ಹೈಕೋರ್ಟ್ ಆದೇಶ

ರಾಜ್ಯ

ಭಾ.ನ್ಯಾ.ಸು ಸಂಹಿತೆ-2023 ರ ಕಲಂ 35 ರ ಅನುಸಾರ ಚೆಕ್ ಲಿಸ್ಟ್ ನೀಡದಿದ್ದಲ್ಲಿ ಅಂತಹ ಆರೋಪಿಯು ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ.

ಯಾವುದೇ ಆರೋಪ, ಸಂಬಂಧ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆಸಿಕೊಳ್ಳಲು ನೀಡುವ ನೋಟಿಸ್ ನಲ್ಲಿ ಕ್ರೈಂ ಸಂಖ್ಯೆ, ಎಫ್ ಐ ಆರ್ ಪ್ರತಿ, ಅಪರಾಧದ ಬಗ್ಗೆ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ರೂಪವನ್ನು ಒಳಗೊಂಡ ಚೆಕ್ ಲಿಸ್ಟ್ ಅನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ ಈ ಕುರಿತು ಸಾರ್ವಜನಿಕರ ಅವಗಾಹನೆಗಾಗಿ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಆದೇಶಿಸಿದೆ.

ಅಮೃತಹಳ್ಳಿ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರು ವಾಟ್ಸಾಪ್ ಮೂಲಕ “ನೀವು ಠಾಣೆಗೆ ಹಾಜರಾಗಬೇಕೆಂದು” ಕಳುಹಿಸಿದ್ದ ಸಂದೇಶವನ್ನು ಪ್ರಶ್ನಿಸಿ ಪತ್ರಕರ್ತ ಟಿ.ಆರ್ ಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

“ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ-2023 ರ ಕಲಂ 35 ರ ಅನುಸಾರ ಆರೋಪಿಗೆ ಚೆಕ್ ಲಿಸ್ಟ್ ಒದಗಿಸದೆ ಹೋದಲ್ಲಿ ಅಂತಹ ಆರೋಪಿಯು ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ. ಅಂತೆಯೇ ಪೊಲೀಸರು ಇಂತಹ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತ್ತಿಲ್ಲ” ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಸಂಬಂಧ ಟಿವಿ ಚಾನಲ್ ಸಿಇಒ ವಿಜಯ್ ಟಾಟಾ ನೀಡಿದ ದೂರಿನ ಅನುಸಾರ ಅಮೃತಹಳ್ಳಿ ಠಾಣೆಯ ಪೊಲೀಸರು ಟಿ.ಆರ್ ಶಿವಪ್ರಸಾದ್ ಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಠಾಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು. ಅದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.