ಮಂಗಳೂರು: ಬೀದಿಬದಿ ವ್ಯಾಪಾರಿಗಳ ತೀವ್ರ ಹೋರಾಟದ ನಂತರ ಪೊಲೀಸ್ ಇಲಾಖೆಯ ಅಧಿಕಾರಿಗಳು, ಹೋರಾಟಗಾರರ ಸಂಧಾನ ಸಭೆಯ ಬಳಿಕ ಟೈಗರ್ ಕಾರ್ಯಾಚರಣೆ ಸ್ಥಗಿತಗೊಳಿಸುತ್ತೇವೆ ಎಂದು ಸಾರ್ವನಿಕವಾಗಿ ಹೇಳಿಕೆ ನೀಡಿ ದಿನ ಬೆಳಗಾಗುವಷ್ಟರಲ್ಲಿ ಮತ್ತೆ ಟೈಗರ್ ಕಾರ್ಯಾಚರಣೆ ನಡೆಸಿರುವುದು ಬಿಜೆಪಿ ಆಡಳಿತದ ದುರಹಂಕಾರಕ್ಕೆ ಮತ್ತೊಂದು ಸಾಕ್ಷಿ ಬೇಕಾಗಿಲ್ಲ. ಬಡವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವ ನಗರಪಾಲಿಕೆಗೆ ಶ್ರೀಮಂತರ ಅಕ್ರಮ ಕಟ್ಟಡಗಳನ್ನು ಮುಟ್ಟುವ ಧೈರ್ಯ ಇದೆಯಾ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಬಿಕೆ ಇಮ್ತಿಯಾಜ್ ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶ ಮಾಡಿ ಟೈಗರ್ ಕಾರ್ಯಾಚರಣೆ ನಿಲ್ಲಿಸಲು ಕ್ರಮ ವಹಿಸಬೇಕು ಬಡವರ ಮೇಲೆ ಧಾಳಿ ಮುಂದುವರಿಸಿದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಬಿ.ಕೆ ಇಮ್ತಿಯಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ