ದಕ್ಷ ಅದಿಕಾರಿ ಶ್ರೀಧರ್ ಮಲ್ಲಡ್ ತನ್ನ ಕಛೇರಿಯಲ್ಲಿ ಇಷ್ಟೆಲ್ಲ ಲಂಚಾವತಾರ ನಡೆಯುತ್ತಿದ್ದರೂ ಯಾಕೆ ಮೌನಿಯಾಗಿದ್ದಾರೆ ಎಂಬುದೇ ಯಕ್ಷ ಪ್ರಶ್ನೆ.?
ಮಂಗಳೂರು RTO ಕಚೇರಿ ಲಂಚವತಾರದ ಮಹಾ ಕೊಂಪೆಯಾಗಿ ಬಿಟ್ಟಿದೆ. ಇಲ್ಲಿ ಕುರುಡು ಕಾಂಚಣ ಬಿಸಾಡಿದರೆ ಮಾತ್ರ ಕೆಲಸದ ಭಾಗ್ಯ. ದುಡ್ಡಿಲ್ಲದವನಿಗೆ ಅಲೆದಾಟದ ದೌರ್ಭಾಗ್ಯ. ಲಂಚ ಇಲ್ಲದೇ ಇಲ್ಲಿ ಕೆಲಸ ನಡೆಯಲ್ಲ. ರಾಜಾರೋಷವಾಗಿ, ಲಂಗು ಲಗಾಮಿಲ್ಲದೆ ನಿರಾಂತಕವಾಗಿ ಭ್ರಷ್ಟಾಚಾರ ಮೇಳೈಸುತ್ತಿದೆ. ಇಲ್ಲಿನ ಕೆಲವು ಸಿಬ್ಬಂದಿಗಳ ಕರ್ಮ ಕಥೆ ಹೇಳಿ ಪ್ರಯೋಜನವಿಲ್ಲ. ಕೆಲಸಕ್ಕೆಂದು ಬರುವ ಸಾರ್ವಜನಿಕರಲ್ಲಿ ಕನಿಕರವಿಲ್ಲದಂತೆ ವರ್ತಿಸುತ್ತಿದ್ದಾರೆ. ಕೊಟ್ಟ ಕೆಲಸವನ್ನಾದರೂ ನೀಟಾಗಿ ಮಾಡುತ್ತಾರಾ ಅಂದುಕೊಂಡರೂ ಅದೂ ಇಲ್ಲ. ಜನರನ್ನು ಅಲೆದಾಡಿಸುವಲ್ಲಿ ಇಲ್ಲಿನ ಸಿಬ್ಬಂದಿಗಳಿಗೆ ಎಂತಹ ಖುಷಿನೋ ಆ ಮರಮಾತ್ಮನೇ.. ಬಲ್ಲ.
ಇಲ್ಲಿನ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಲಂಚವಿಲ್ಲದೆ ಸಾರ್ವಜನಿಕರಿಗೆ ಕೆಲಸ ಮಾಡಿಕೊಡುವುದಿಲ್ಲ. ದುಡ್ಡು ಎಂದರೆ ಬಾಯಿ ಬಿಡುತ್ತಾರೆ. ಇದಲ್ಲದೆ ಕಂಟ್ರಿ ಹೊರಗಿನ ವ್ಯಕ್ತಿಯೊಬ್ಬ DL ವಿಭಾಗದಲ್ಲಿ ಕಾನೂನು ಬಾಹಿರವಾಗಿ ನುಸುಳಿಕೊಂಡು ಸರಕಾರಿ ಅಧಿಕಾರಿ ರೀತಿಯ ಪೋಸ್ ಕೊಟ್ಟು ದರ್ಪದಿಂದ ಮೆರೆಯುತ್ತಿದ್ದಾನೆ.
ಇನ್ನು ಕಚೇರಿಯ ಸಾರಿಗೇತರ ವಿಭಾಗವಂತೂ ಪೂರ್ತಿಯಾಗಿ ಲಂಚದಲ್ಲೇ ಮುಳುಗಿದೆ. ಇಲ್ಲಿನ ಅಧೀಕ್ಷಕಿಯ ಮೇಯುವ ಸ್ಪೀಡಂತೂ ಬಲು ಜೋರು. ಈಕೆ ತನ್ನ ಬಳಿ ಕೆಲಸಕ್ಕೆ ಬರುವವರೊಂದಿಗೆ ನೇರವಾಗಿ ಲಂಚ ಕೇಳುತ್ತಾಳಂತೆ. ಒಂದು ವೇಳೆ ನೀವು ಲಂಚ ಕೊಡದೆ ಇದ್ದರೆ ದಾಖಲೆಗಳೆಲ್ಲ ಸರಿ ಇದ್ದರೂ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಸುಮ್ಮನೆ ಸತಾಯಿಸುತ್ತಾಳೆ ಅನ್ನುವ ಆರೋಪ ಕೇಳಿ ಬರುತ್ತಿದೆ. ದಾಖಲೆ ಸರಿ ಇಲ್ಲವೆಂದು objection ಹಾಕಿ ಇಡುತ್ತಾಳಂತೆ. ಫೈಲ್ ಸರಿ ಇದೆ ಅಲ್ವಾ, ಯಾಕಮ್ಮ ಈ ರೀತಿ ಮಾಡುತ್ತಿ ಅಂತ ಕೇಳಿದರೆ ಮೇಲಾಧಿಕಾರಿಗಳಿಗೆ ಒಂದೊಂದು ಫೈಲಿಗೂ ದಕ್ಷಿಣೆ ಕೊಡಬೇಕು ಎಂದು ಯಾವುದೇ ಅಂಜಿಕೆ ಇಲ್ಲದೆ ಲಂಚ ಉಗುಳುತ್ತಾಳೆ.
ಇನ್ನು ಸಾರಿಗೇತರ ವಿಭಾಗದ ಗುಮಾಸ್ತನೊಬ್ಬನ ಇನ್ನೊಂದು ಕಥೆ. ಈತ ಲಂಚ ಪಡೆಯಲು ಖಾಸಗಿಯಾಗಿ ಓರ್ವ ಕಿಲಿ ಕಿಲಿ ಹೆಣ್ಣೊಬ್ಬಳನ್ನು ನೇಮಕ ಮಾಡಿಕೊಂಡಿದ್ದಾನಂತೆ. ಒಂದು ವೇಳೆ ಲಂಚ ಕೊಡದಿದ್ದರೆ ಸಾಕಷ್ಟು ಹೊತ್ತು ಕಾಯಿಸಿ ಈಗ ಅಗಲ್ಲ, ಇನ್ನೊಂದು ದಿನ ಬನ್ನಿ ಎಂದು ಸತಾಯಿಸುತ್ತಾನಂತೆ. ಹಿರಿಯರು ಕೆಲಸಕ್ಕೆ ಕಚೇರಿಗೆ ಬಂದರೆ ಅವರನ್ನು ತುಂಬಾ ಹೊತ್ತು ಕಾಯಿಸಿ ಸಂಜೆ ಕಚೇರಿ ಮುಗಿಯುವ ಹೊತ್ತಿಗೆ ಅವರ ದಾಖಲೆ ಪರಿಶೀಲಿಸಿ ಸರಿ ಇಲ್ಲವೆಂದು ವಾಪಾಸ್ ಕಳುಹಿಸುವ ಆರೋಪಗಳು ಈತನ ಮೇಲಿದೆ.
ಇನ್ನು RTO ಕಚೇರಿಯ ಅಟೆಂಡರ್ ನದ್ದು ಬೇರೆನೇ ಕಥೆ. RTO ಅಧಿಕಾರಿಯ ಪೇದೆ ನೇರವಾಗಿ RTO ಅಧಿಕಾರಿಯನ್ನು ಭೇಟಿ ಮಾಡಲು ಬರುವ ಸಾರ್ವಜನಿಕರಿಗೆ ಭೇಟಿಗೆ ಅವಕಾಶನೇ ನೀಡುವುದಿಲ್ಲ. ಭೇಟಿಗೆ ಅವಕಾಶ ನೀಡಬೇಕಾದರೆ ಈತನ ಕೈ ಬಿಸಿಮಾಡಬೇಕು. ಇಲ್ಲವಾದರೆ RTO ತುಂಬಾ ಬ್ಯುಸಿ ಎಂದು ಹೇಳಿ ಗದರಿಸುತ್ತಾನೆ. ಅವರು ಮೀಟಿಂಗ್ ನಲ್ಲಿ ಇದ್ದಾರೆ ಎಂದು ಹೇಳಿ ವಾಪಸ್ ಕಳುಹಿಸುತ್ತಾನೆ. ಲಂಚ ಕೊಟ್ಟರೆ ಮಾತ್ರ ಫೈಲಿಗೆ ಆರ್ಡರ್ ಮಾಡಿ ಕೊಡುತ್ತಾರೆ, ಇಲ್ಲವಾದರೆ ಫೈಲ್ ಆಫೀಸಿನಲ್ಲಿ ವಾರವಿಡೀ ಕೊಳೆಯುತ್ತಾ ಇರುತ್ತದೆ. ಪ್ರಿಂಟ್ ಮಾಡಿದ ಆರ್. ಸಿ ಪ್ರತಿ ಈತನ ಬಳಿ ಇರುತ್ತದೆ. ಅದನ್ನು ಪಡೆಯಬೇಕಾದರೆ ಕನಿಷ್ಠ ನೂರು ರೂಪಾಯಿಯಾದರೂ ಈತನ ಜೇಬು ತುರುಕಬೇಕು.
ಗುತ್ತಿಗೆ ಸಿಬ್ಬಂದಿಗಳು ಪ್ರತಿ ಕಾರ್ಡ್ ಪ್ರಿಂಟ್ ಮಾಡಲು ಇಂತಿಷ್ಟು ಫಿಕ್ಸ್ ಮಾಡಿರುತ್ತಾರೆ. ಕಾಸುಕೊಟ್ಟರೆ ಮಾತ್ರ ಕೈಗೆ ಕಾರ್ಡ್ ಸಿಗುತ್ತದೆ. ಇಲ್ಲವಾದರೆ ಕಾರ್ಡ್ ಮುಗಿದಿದೆ ಎಂದು ಸಾಗ ಹಾಕುತ್ತಾರೆ. ಇವರು ಎಷ್ಟು ಚತುರರು ಎಂದರೆ ಕಾರ್ಡ್ ಪ್ರಿಂಟ್ ಮಾಡಿ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ. ಹೆಚ್ಚು ಯಾರು ಹಣ ಕೊಡುತ್ತಾರೆ ಅವರಿಗೆ ಮಾತ್ರ ಕಾರ್ಡ್ ಕೊಡುವುದು. ಇನ್ನು ಡಿ.ಎಲ್ ವಿಭಾಗದ ಗುತ್ತಿಗೆ ನೌಕರನೊಬ್ಬ, ಡಿ.ಎಲ್ ಗೆ ಪೋಟೋ ತೆಗೆಯಬೇಕಾದರೆ ಈತನ ಜೇಬು ತುಂಬಿಸಬೇಕು. ಲಂಚ ಕೊಡದಿದ್ದರೆ ಸರ್ವರ್ ಸರಿ ಇಲ್ಲ ಎಂದು ಸುಖಾಸುಮ್ಮನೆ ಜನರನ್ನು ಮಂಗ ಮಾಡುವುದರಲ್ಲಿ ಈತ ಎತ್ತಿದ ಕೈ.
ಈ ಕಛೇರಿಯಲ್ಲಿ ವಕ್ಕರಿಸಿಕೊಂಡಿರುವ ಕಂಟ್ರಿಯೊಬ್ಬ ಯಾವುದೇ ಸರಕಾರಿ ಅಥವಾ ಗುತ್ತಿಗೆ ಆಧಾರದ ನೌಕರನಲ್ಲ. ತಾನು ಸರಕಾರಿ ನೌಕರ ಅನ್ನುವ ಪೋಸ್ ಕೊಟ್ಟು ARTO ಕಚೇರಿಯ ಕ್ಯಾಬಿನ್ ನಲ್ಲಿಯೇ ಝಂಢಾ ಹೂಡಿ ಕಂಪ್ಯೂಟರ್ ಆಪರೇಟಿವ್ ಮಾಡುತ್ತಿದ್ದಾನೆ. ಈತನ ಕೆಲಸ ಏನೆಂದರೆ ಲಂಚವನ್ನು ಕಲೆಕ್ಟ್ ಮಾಡಿ ನೀಡುವುದಂತೆ. ಇದಲ್ಲದೆ ಡಿ.ಎಲ್ ವಿಭಾಗದ ಕಂಪ್ಯೂಟರ್ ಆಪರೇಟರ್ಸ್ ನ ಎಲ್ಲಾ ಪಾಸ್ ವರ್ಡ್ ಆತನಿಗೆ ಗೊತ್ತಿದ್ದು, ಲಂಚ ಕೊಟ್ಟವರಿಗೆ, ತನಗೆ ಇಷ್ಟ ಬಂದವರಿಗೆ ಅಕ್ರಮದ ಮೂಲಕ ಡಿ.ಎಲ್ ತಿದ್ದುಪಡಿ ಮಾಡಿ ಕೊಡುತ್ತಾನಂತೆ.
ಸಾರಿಗೇತರ ವಿಬಾಗದ ಮಹಿಳಾ ಮಣಿಯೊಬ್ಬಳು ಹಣ ಎಂದರೆ ಜೀವ ಬಿಡುತ್ತಾಳೆ. ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ಬ್ರೋಕರ್ ಗಳು ಈಕೆಗೆ ಲಂಚ ಕೊಡಲೇಬೇಕು. ಲಂಚ ಕೊಟ್ಟಿಲ್ಲ ಅಂದರೆ ಪೈಲ್ ಮೂವೇ ಆಗಲ್ಲ. ಡಾಕಿಮೆಂಟ್ ಸರಿ ಇಲ್ಲ, ಸರ್ವರ್ ಇಲ್ಲ, ಸಹಿ ಮ್ಯಚ್ ಆಗ್ತಿಲ್ಲ ಅಂತ ಏನೇನೊ ಕಾರಣ ಹೇಳಿ ಒಂದು ವಾರ ಬಿಟ್ಟು ಬನ್ನಿ ಅಂತ ಹೇಳ್ತಾಳೆ. ಅದೆ ದುಡ್ಡು ಕೊಟ್ಟರೆ ಒಂದು ದಿನದಲ್ಲಿ ನಿಮ್ಮ ದಾಖಲೆ ರೆಡಿ. ಯಾಕಮ್ಮ ನಿನಗೆ ಲಂಚ ಕೊಡಬೇಕು, ನಿನಗೆ ಸರಕಾರ ಸಂಬಳ ಕೊಡ್ತಾ ಇಲ್ವ ಅಂತ ಸಾರ್ವಜನಿಕರು ಕೇಳಿದರೆ ನಿಮಗೇನು ನಮ್ಮ ಕಷ್ಟ ಗೊತ್ತು ಈ ಹಣ ನನಗೆ ಮಾತ್ರ ಅಲ್ಲ ಇದರಲ್ಲಿ ತಿಂಗಳಿಗೆ ಆರ್ ಟಿ.ಒ. ಆಪೀಸರಿಗೆ ಮಾಮೂಲ್ ಕೊಡಬೇಕು.ಇಲ್ಲಾಂದ್ರೆ ನನ್ನನ್ನು ಎತ್ತಂಗಡಿ ಮಾಡ್ತಾರೆ ಅಂತ ದರ್ಪದಿಂದ ಹೇಳ್ತಾಳೆ. ಲಂಚ ತಿಂದು ಚಂದ ವೈಟ್ವಾಸು ಮಾಡ್ಕೊಂಡು ಬರುತ್ತಾಳೆ.
ಈ ಹಿಂದೆ ದಾವಣಗೆರೆ ಯಲ್ಲಿ ಆರ್.ಟಿ.ಒ ಆಗಿ ಹೆಸರುಗಳಿಸಿದ್ದ ಶ್ರೀಧರ್ ಮಲ್ಲಡ್ ಮಂಗಳೂರುಗೆ ಬಂದು ಏಳು ತಿಂಗಳು ಆಗಿದೆ. ದಕ್ಷ ಅದಿಕಾರಿ ಎಂದು ಪ್ರಸಿದ್ಧವಾಗಿರುವ ಶ್ರೀಧರ್ ಮಲ್ಲಡ್ ರವರು ತನ್ನ ಕಛೇರಿಯಲ್ಲಿ ಇಷ್ಟೆಲ್ಲ ಲಂಚಾವತಾರ ನಡೆಯುತ್ತಿದ್ದರೂ ಯಾಕೆ ಮೌನಿಯಾಗಿದ್ದಾರೆ ಎಂಬುದೇ ಯಕ್ಷ ಪ್ರಶ್ನೆ.? ಆರ್ ಟಿ ಒ ಕಚೇರಿಯಲ್ಲಿ ಬೀಡುಬಿಟ್ಟಿರುವ ಭ್ರಷ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕಾಗಿದೆ.
ಇದು ಆರ್ ಟಿ ಓ ಕಚೇರಿಯ ಖರಾಬ್ ಕಥೆ. ಇಲ್ಲಿ ಅಧಿಕಾರಿಗಳು ಲಂಚ ಪಡೆಯುವ ವಿಡಿಯೋಗಳಿವೆ, ದಾಖಲೆಗಳು ಕೂಡಾ ಸಖತ್ತ್ ಇದೆ. ಲೋಕಾಯುಕ್ತರು ಈವರೆಗೂ ಇತ್ತ ತಲೆ ಹಾಕಲೇ ಇಲ್ಲ. ಮುಂದಿನ ದಿನಗಳಲ್ಲಿ ಅವೆಲ್ಲವನ್ನು ಸವಿವರವಾಗಿ, ದಾಖಲೆ ಸಮೇತ ಹೋರಬಿಡುವಾ.