ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಮಾತ್ರ ಹೈಲೇಟ್
ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ನಡೆಸುತ್ತಿರುವ ಪಾದಯಾತ್ರೆ ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಹಿನ್ನಡೆಯಿಂದ ಕುಗ್ಗಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾದರೆ, ಎರಡೂ ಪಕ್ಷಗಳ ಮುಖಂಡರಲ್ಲಿ ಒಳಗೊಳಗೇ ಕಚ್ಚಾಟ ಶುರುವಾಗಿದೆ. ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯವಿದೆ. ಈ ಭಾಗದಲ್ಲಿ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದ್ದರಿಂದ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಪಾದಯಾತ್ರೆ ಉದ್ಘಾಟನೆಯಲ್ಲಿ ಕಾಣಿಸಿಕೊಂಡರೂ ನಂತರ ಪಾದಯಾತ್ರೆಯಲ್ಲಿ ಕಾಣದೆ ನಾಪತ್ತೆಯಾಗಿದ್ದಾರೆ. ಜೆಡಿಎಸ್ ಮುಖಂಡರಾದ ಜಿ.ಟಿ ದೇವೇಗೌಡರಂತಹ ಹಲವು ಮುಖಂಡರು ಪಾದಯಾತ್ರೆ ವೇಳೆ ಮೂಲೆಗುಂಪಾದರೆ, ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಾತ್ರ ಪಾದಯಾತ್ರೆಯಲ್ಲಿ ಮಿಂಚುತ್ತಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಮಾತ್ರ ಹೈಲೇಟ್ ಆಗುತ್ತಿರುವುದರಿಂದ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಎರಡನೇ ದಿನ ಕಣ್ಮರೆಯಾಗಿ, ಕೊಪ್ಪಳದಲ್ಲಿ ಮೃತಪಟ್ಟ ಪಿಎಸ್ ಐ ಪರಮೇಶ್ವರ್ ಕುಟುಂಬ ಭೇಟಿ ನೆಪದಲ್ಲಿ ಪಾದಯಾತ್ರೆಯಿಂದ ನುಣುಚಿಕೊಂಡಿದ್ದಾರೆ. ಮತ್ತೊಂದೆಡೆ ವಿಧಾನಪರಿಷತ್ ಪ್ರತಿಪಕ್ಷ ನಾಯಕನಾಗಿರುವ ಛಲವಾದಿ ನಾರಾಯಣಸ್ವಾಮಿ, ಸಿಟಿ ರವಿ, ರವಿಕುಮಾರ್ ಸೇರಿದಂತೆ ಹಲವು ನಾಯಕರು ಎರಡನೇ ದಿನವೇ ನಾಪತ್ತೆಯಾಗಿದ್ದಾರೆ. ಸಂಸದ ಯಧುವೀರ್, ಪ್ರತಾಪ್ ಸಿಂಹ, ಮಾಜಿ ಸಚಿವ ನಾರಾಯಣಸ್ವಾಮಿ, ಸುಮಲತಾ ಅಂಬರೀಷ್ ಕಾಣಿಸಿಕೊಂಡಿಲ್ಲ. ಕೇಂದ್ರ ಸಚಿವ ಸೋಮಣ್ಣ, ಮಾಜಿ ಸಿಎಂ ಬೊಮ್ಮಾಯಿ ಮುಂತಾದವರು ಪಾಲ್ಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ಪಾದಯಾತ್ರೆ ನೆಪ ಮಾಡಿಕೊಂಡು ರಾಜ್ಯಪಾಲರ ಮೂಲಕ ಸರ್ಕಾರ ಪತನಗೊಳಿಸಿದರೆ ಜನರ ವಿಶ್ವಾಸ ಪಡೆಯುವುದು ಉದ್ದೇಶವಾಗಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಆದರೆ ಪಾದಯಾತ್ರೆಯು ವಿಜಯೇಂದ್ರ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮಾಡಿರುವ ಪ್ರಯತ್ನ, ಇದರಲ್ಲಿ ನಾವು ಯಾಕೆ ಪಾಲ್ಗೊಳ್ಳಬೇಕು ಎಂದು ಬಿಜೆಪಿಯ ಇತರೆ ಮುಖಂಡರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
