2 ನೇ ತರಗತಿ ಮದರಸಾ ವಿದ್ಯಾರ್ಥಿಯನ್ನು ಇರಿದು ಕೊಂದ 12 ವರ್ಷದ ವಿದ್ಯಾರ್ಥಿ

ರಾಜ್ಯ

ಕ್ರೈಂ ವಿಚಾರದಲ್ಲಿ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶದಲ್ಲಿ ಬೆಚ್ಚಿಬೀಳಿಸುವ ವರದಿಯೊಂದು ಹೊರಬಿದ್ದಿದೆ. ಬಲರಾಂಪುರ ಜಿಲ್ಲೆಯ ತುಳಸಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮದರಸದಲ್ಲಿ 2 ನೇ ತರಗತಿ ಕಲಿಯುತ್ತಿದ್ದ ವಿದ್ಯಾರ್ಥಿಯನ್ನು ಅದೇ ಮದರಸದಲ್ಲಿ ಕಲಿಯುತ್ತಿರುವ 12 ವರ್ಷ ಪ್ರಾಯದ ವಿದ್ಯಾರ್ಥಿ ಇರಿದು ಕೊಂದಿದ್ದಾನೆ.

ಬಲರಾಂಪುರ ಜಿಲ್ಲೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ತುಳಸಿಪುರ ಇಟ್ವಾ ರಸ್ತೆಯ ಜಾಮಿಯಾ ನೈಮಿಯಾನ್ ಇರ್ವಿಯಲ್ಲಿ ಘಟನೆ ನಡೆದಿದೆ. ಜಾಮಿಯಾ ನಿಮಿಯಾ ಅರೇಬಿಕ್ ಕಾಲೇಜು 2 ನೇ ತರಗತಿ ವಿದ್ಯಾರ್ಥಿ ಆಯಾನ್ ಹತ್ಯೆಯಾದ ದುರ್ದೈವಿ.

ಘಟನೆಗೆ ಸಂಬಂಧಿಸಿ ಅದೇ ಕಾಲೇಜಿನ ಮದರಸ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಚಾಕುವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಕುಮಾರ್ ಅವರು ವಶಪಡಿಸಿಕೊಂಡಿದ್ದಾರೆ.

ಇಬ್ಬರೂ ಮದರಸಾದಲ್ಲಿ ಒಂದೇ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ವಿಚಾರಣೆ ವೇಳೆ ಅಪ್ರಾಪ್ತ ಆರೋಪಿಯು ಮೃತ ವಿದ್ಯಾರ್ಥಿಯೊಂದಿಗೆ ಜಗಳವಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಈ ವೇಳೆ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದರು. ಹೀಗಾಗಿ ಆರೋಪಿ ವಿದ್ಯಾರ್ಥಿಯನ್ನು ಹತ್ಯೆ ಮಾಡಲು ಯೋಜಿಸಿದ್ದ. ಆಯಾನ್ ಮಲಗಿದ್ದ ಸಂದರ್ಭ ಚಾಕುವಿನಿಂದ ಕುತ್ತಿಗೆ ಇರಿದು ಕೊಂದಿದ್ದಾನೆ ಎಂದು ಹೆಚ್ಚುವರಿ ಎಸ್ಪಿ ಯೋಗೇಶ್ ಕುಮಾರ್ ತಿಳಿಸಿದ್ದಾರೆ.

ಘಟನೆ ನಡೆಯುವ ಕೆಲ ದಿನಗಳ ಹಿಂದೆ ಆರೋಪಿ ಮಾರುಕಟ್ಟೆಯಿಂದ ಚಾಕು ಖರೀದಿಸಿ ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟಿದ್ದ.

ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಯುವಕರು ಕೊಲೆ, ರೇಪ್ ನಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ನಾಗರಿಕ ಸಮಾಜದ ಆತಂಕಕ್ಕೆ ಕಾರಣವಾಗಿದೆ.