ವಿಟ್ಲ: ಕೊಡಗು ಜಿಲ್ಲೆಯ ಸೋಮವಾರಪೇಟೆ ವ್ಯಾಪ್ತಿಯ ಕಿಬ್ಬೆಟ್ಟ ಗ್ರಾಮದಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಏಳು ಆರೋಪಿಗಳನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕುದುಮಾರು ಗ್ರಾಮದ ಕೆ.ರೋಷನ್(32), ಕನ್ಯಾನ ನಿವಾಸಿ ಸತೀಶ್ ರೈ(54), ವಿಟ್ಲ ಪಡ್ನೂರು ಗ್ರಾಮದ ಕೆ.ಗಣೇಶ(28), ವೀರಕಂಬ ಗ್ರಾಮದ ಕುಸುಮಾಧರ(39), ವಿರಾಜಪೇಟೆ ಶಿವಕೇರಿಯ ಸೂರ್ಯಪ್ರಸಾದ್ ಬಿ.ಎ(43), ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕ್ ನಿವಾಸಿ ವಿನೋದ್ ಕುಮಾರ್ ಹೆಚ್.ಪಿ(36) ಹಾಗೂ ಕುಶಾಲನಗರ ತಾಲ್ಲೂಕು ಹೆಬ್ಬಾಲೆ ಗ್ರಾಮದ ಬಿ.ಮೋಹನ್ ಕುಮಾರ್(45) ಬಂಧಿತ ಆರೋಪಿಗಳು.
ಆರೋಪಿಗಳ ಬಳಿಯಿಂದ 3.2 ಲಕ್ಷ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ್ದ 2 ಕಾರುಗಳು ಮತ್ತು 9 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿ ನಾಪತ್ತೆಯಾದ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರಪೇಟೆಯ ಖಾಸಗಿ ಬಸ್ ನಿಲ್ದಾಣ ಬಳಿಯ ಅನುಷಾ ಮಾರ್ಕೆಟಿಂಗ್ ಏಜೆನ್ಸಿ ಸಂಸ್ಥೆಯ ಮಾಲಿಕ ಕಿಬ್ಬೆಟ್ಟ ನಿವಾಸಿ ನೇಮರಾಜ್.ಕೆ.ಎಂ ಜುಲೈ 29ರಂದು ರಾತ್ರಿ 8.45ರ ಸುಮಾರಿಗೆ ತನ್ನ ಪತ್ನಿಯೊಂದಿಗೆ ಸ್ಕೂಟರ್ನಲ್ಲಿ ಮನೆಗೆ ಹೋಗುತ್ತಿದ್ದಾಗ ಆರೋಪಿಗಳು ದರೋಡೆ ನಡೆಸಿದ್ಜಾರೆ. ಕಿಬ್ಬೆಟ್ಟ ರಸ್ತೆಯ ತಿರುವಿನಲ್ಲಿ ಕಾರು ಮತ್ತು ಬೈಕ್ ನಲ್ಲಿ ಬಂದ ಆರೋಪಿಗಳು ಆಕ್ಟಿವಾ ಸ್ಕೂಟರನ್ನು ಅಡ್ಡಗಟ್ಟಿ ಮುಖಕ್ಕೆ ಖಾರದ ಪುಡಿ ಎರಚಿ ನೇಮರಾಜ್ ಅವರ ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆಂದು ಪೊಲೀಸರು ವಿವರಿಸಿದ್ದಾರೆ. ಬಳಿಕ 6.18 ಲಕ್ಷ ರೂಪಾಯಿ ನಗದು ಹಣ ಮತ್ತು 3 ಮೊಬೈಲ್ ಪೋನುಗಳಿದ್ದ ಬ್ಯಾಗನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಆರೋಪಿಗಳ ಪೈಕಿ ರೋಷನ್, ಸತೀಶ್ ರೈ ಪಿಲಿಂಗುರಿ, ಗಣೇಶ್ ಮತ್ತು ಕುಸುಮಾಧರ ಬಂಟ್ವಾಳ ತಾಲೂಕು ವಿಟ್ಲ ಠಾಣಾ ವ್ಯಾಪ್ತಿಯ ಅಂತರ್ ಜಿಲ್ಲಾ ದರೋಡೆಕೋರರೆಂದು ಕೊಡಗು ಎಸ್ಪಿ ಕೆ.ರಾಮರಾಜನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇವರ ವಿರುದ್ಧ ಈ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕೊಲೆ ಪ್ರಕರಣ, ಕೊಲೆಯತ್ನ, ಕಳ್ಳತನ, ಕಿಡ್ನಾಪ್ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಬಗ್ಗೆ ಎಸ್ಪಿ ಮಾಹಿತಿ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಹೆಚ್ಚುವರಿ ಎಸ್ಪಿ ಸುಂದರ್ ರಾಜ್, ಡಿವೈಎಸ್ಪಿ ಗಂಗಾಧರಪ್ಪ, ಸೋಮವಾರಪೇಟೆ ಇನ್ಸ್ಪೆಕ್ಟರುಗಳು, ಎಸೈಗಳು ಹಾಗೂ ಆರೋಪಿಗಳನ್ನು ಬಂಧಿಸಿದ ವಿಶೇಷ ತಂಡದ ಪೊಲೀಸರು ಹಾಜರಿದ್ದರು.