ಸುಲಿಗೆ, ಭ್ರಷ್ಟಾಚಾರ ವಿರೋಧಿಸಿ ಮುಷ್ಕರಕ್ಕೆ ಮುಂದಾದ ಖಾಸಗಿ ಶಾಲೆಗಳು; ಸರಕಾರಕ್ಕೆ 15 ದಿನಗಳ ಗಡುವು

ರಾಜ್ಯ

ಶಾಲಾ ಶಿಕ್ಷಣ ಇಲಾಖೆಯ ಭ್ರಷ್ಟಾಚಾರ ಹಾಗೂ ಖಾಸಗಿ ಶಾಲೆಗಳ ಮೇಲಾಗುತ್ತಿರುವ ಅನ್ಯಾಯ ವಿರೋಧಿಸಿ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ (ರುಪ್ಸಾ) ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ.

ತಮ್ಮ ವಿವಿಧ ಬೇಡಿಕೆಗಳನ್ನು ಸರಕಾರ 15 ದಿನಗಳಲ್ಲಿ ಈಡೇರಿಸಬೇಕು. ಇಲ್ಲವಾದರೆ ಅಗಸ್ಟ್ 21 ರಿಂದ ಖಾಸಗಿ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟಿಸುವುದಾಗಿ ರುಪ್ಸಾ ಅಧ್ಯಕ್ಷ ಲೇಪಾಕ್ಷಿ ಹಾಲನೂರು ತಿಳಿಸಿದ್ದಾರೆ. ಶಾಲೆಗಳ ನವೀಕರಣಕ್ಕೆ ಇಲಾಖೆ 64 ಅಂಶಗಳನ್ನು ನಿಗಡಿಪಡಿಸಿ ದಾಖಲೆ ಪಡೆಯುತ್ತಿದೆ. ಇದರಿಂದ ಶಾಲೆಗಳಿಗೆ ನವೀಕರಣ ಪಡೆಯುವುದು ಕಷ್ಟಸಾಧ್ಯವಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ತೆರಿಗೆ ಬಾಕಿ ವಸೂಲಿ ಕೈ ಬಿಡಬೇಕು ಎಂದು ಆಗ್ರಹಿಸಿದೆ.

4 ವರ್ಷಗಳಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಶೈಕ್ಷಣಿಕ ಉದ್ದೇಶಕ್ಕೆ ಬಳಕೆ ಮಾಡುವ ನಿವೇಶನ ಅಥವಾ ಕಟ್ಟಡಗಳಿಗೆ ಕಾನೂನು ಬಾಹಿರವಾಗಿ ತೆರಿಗೆ ವಸೂಲಿ ಮಾಡುತ್ತಿದೆ. ಆರ್ ಆರ್ ವಿಚಾರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ಸುಲಿಗೆ ಸೇರಿ ಅನೇಕ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು ಈ ಪ್ರತಿಭಟನೆಗೆ ಸಾಥ್ ನೀಡಿವೆ.