ಸೆಪ್ಟಂಬರ್ 27 ರಂದು ಪಾದಯಾತ್ರೆ ನಡೆಸಿ, ಮಿನಿ ವಿಧಾನ ಸೌಧದ ಎದುರು ಸಾರ್ವಜನಿಕ ಸಭೆ: ಕೆಥೋಲಿಕ್ ಸಭಾ
ಹರೇಕಳ ಸಮೀಪದ ಪಾವೂರು ಉಳಿಯ ದ್ವೀಪ ಪ್ರದೇಶದಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಅಕ್ರಮ ಗಣಿಗಾರಿಕೆ ಮತ್ತೆ ಆರಂಭವಾಗಿರುವುದನ್ನು ವಿರೋಧಿಸಿ ಇತ್ತೀಚೆಗೆ ನೀರಿನಲ್ಲಿ ಮುಳುಗಿ ಅ ಪ್ರದೇಶದ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ಮರಳು ದಂಧೆಯಿಂದಾಗಿ ಇಡೀ ದ್ವೀಪವೇ ನಾಶವಾಗುವ ರೀತಿ ಆಗಿತ್ತು.

ಎರಡು ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಗಮನಕ್ಕೆ ಈ ಪ್ರಕರಣವನ್ನು ತಂದಿದ್ದ ವೇಳೆ ಮರಳು ದಂಧೆಗೆ ಕಡಿವಾಣ ಹಾಕುವಂತೆ ಸಚಿವರು ಸೂಚನೆ ನೀಡಿದ್ದರು. ಸ್ಥಳಕ್ಕೆ ಅಧಿಕಾರಿಗಳ ಭೇಟಿ ಬಳಿಕ ಸ್ಥಗಿತಗೊಂಡಿದ್ದ ಮರಳುಗಾರಿಕೆ ಕೆಲವು ದಿನಗಳಿಂದ ಮತ್ತೆ ಅಕ್ರಮವಾಗಿ ಆರಂಭವಾಗಿದೆ ಎಂದು ಆರೋಪಿಸಲಾಗಿದೆ.

ಹರೇಕಳ ಪಾವೂರಿನ ಈ ದ್ವೀಪ ಪ್ರದೇಶದಲ್ಲಿ ಸುಮಾರು 50 ಕ್ಕೂ ಅಧಿಕ ಕುಟುಂಬಗಳು ವಾಸವಿದ್ದು, ಅಕ್ರಮ ಮರಳುಗಾರಿಕೆಯಿಂದ ದ್ವೀಪದ ಅರ್ಧದಷ್ಟು ಭೂಮಿ ನೀರು ಪಾಲಾಗಿದೆ ಎನ್ನಲಾಗಿದೆ.
ಇದೀಗ ಈ ಪ್ರದೇಶದಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆಯಿಂದ ಅಲ್ಲಿನ ನಿವಾಸಿಗಳಿಗೆ ಜೀವನ ನಡೆಸಲು ಅಸಾದ್ಯವಾಗಿದ್ದು, ಇದನ್ನು ಖಂಡಿಸಿ ಸೆಫ್ಟಂಬರ್ 27 ರಂದು ಸಂಜೆ 3:00 ಗಂಟೆ ಸಮಯಕ್ಕೆ ಬಲ್ಮಠ ವೃತ್ತದಿಂದ ಮಿಲಾಗ್ರಿಸ್ ಮೂಲಕ ಪಾದಯಾತ್ರೆ ನಡೆಸಿ, ಮಿನಿ ವಿಧಾನ ಸೌಧದ ಎದುರು ಸಾರ್ವಜನಿಕ ಸಭೆ ನಡೆಸಲು ಕೆಥೋಲಿಕ್ ಸಭಾ ತೀರ್ಮಾನಿಸಿರುತ್ತದೆ. ಸ್ಥಳಿಯ ನಿವಾಸಿಗಳ ಪರವಾಗಿ ಅವರಿಗೆ ನ್ಯಾಯ ಒದಗಿಸಿ ಕೊಡುವ ಉದ್ದೇಶದಿಂದ ಪಾದಯಾತ್ರೆ ನಡೆಸಲಿದ್ದೇವೆ ಎಂದಿದ್ದಾರೆ.
