ಮಂಗಳೂರು: ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯೊಡ್ಡಿದ ಪ್ರಕರಣ; ಉರ್ವ ಠಾಣೆಯಲ್ಲಿ ಪ್ರಕರಣ ದಾಖಲು

ಕರಾವಳಿ

ಉರ್ವ ಠಾಣೆಯ ಕಾನ್‌ಸ್ಟೆಬಲ್‌ ವೆಂಕಟೇಶ್‌ ಎಂಬವರನ್ನು ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯೊಡ್ಡಿದ ಪ್ರಕರಣದ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಂಕಟೇಶ್‌ ಎಂಬವರು ಉರ್ವ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ರಾತ್ರಿ ಸುಮಾರು 10.30ರ ವೇಳೆ ಹೆಡ್‌ ಕಾನ್‌ಸ್ಟೆಬಲ್‌ ಪುಷ್ಪರಾಜ್‌ ಅವರು ಕೊಟ್ಟಾರ ಚೌಕಿಯ ಬಳಿಯ ಪಿಜಿ ಒಂದರಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವೆಂಕಟೇಶ್‌ ಅವರು ಬೀಟ್‌ ಕರ್ತವ್ಯ ಸಿಬಂದಿಯವರಾದ ಬಾಳೆಗೌಡ ಮೊಕಾಶಿ ಮತ್ತು ಎಚ್‌.ಜಿ ರೋಹಿದಾಸ್‌ ಅವರಿಗೆ ಈ ವಿಚಾರ ತಿಳಿಸಿ, ತಾನು ಬೈಕ್‌ನಲ್ಲಿ ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ. 10.40ರ ವೇಳೆಗೆ ಸ್ಥಳಕ್ಕೆ ತಲುಪಿದಾಗ ಪಿಜಿಯ ಎದುರುಗಡೆ ಏಳೆಂಟು ಮಂದಿ ಯುವಕರು ಬೈದಾಡುತ್ತಾ ಪಿಜಿಯ ಕಿಟಕಿಯ ಗಾಜಿಗೆ ಕಲ್ಲು ಹೊಡೆಯುತ್ತಿದ್ದರು. ಸಮವಸ್ತ್ರದಲ್ಲಿದ್ದ ವೆಂಕಟೇಶ್‌ ಅವರು ಅಲ್ಲಿಗೆ ತಲುಪುತ್ತಿದ್ದಂತೆ ಆ ಯುವಕರ ಗುಂಪು ಅವರನ್ನು ನೋಡಿ ಅವಾಚ್ಯ ಶಬ್ಧಗಳಿಂದ ಬೈದು ಜೀವಂತ ವಾಪಸ್‌ ಹೋಗಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ.

ವೆಂಕಟೇಶ್‌ ಅವರಿಗೆ ನೋಡಿ ಪರಿಚಯವಿದ್ದ ಯುವಕರ ಗುಂಪಿನಲ್ಲಿದ್ದ ಅವಿನಾಶ್‌ ಎಂಬಾತ ಕಲ್ಲೊಂದನ್ನು ಬಲವಾಗಿ ಬಿಸಾಡಿದ್ದು, ಅವರು ತಲೆಯನ್ನು ಹಿಂದಕ್ಕೆ ಸರಿಸಿದ ಪರಿಣಾಮ ಕಲ್ಲು ವೆಂಕಟೇಶ್‌ ಅವರ ಬಲಗಣ್ಣಿನ ಹಣೆಯ ಬಳಿ ಬಿದ್ದು ಗಾಯವಾಗಿದೆ. ಅಲ್ಲಿದ್ದ ಇನ್ನಿಬ್ಬರು ಸುಮನ್‌ ಮತ್ತು ರೋಹನ್‌ ಕೂಡಾ ಕಲ್ಲು ಹೊಡೆದಿದ್ದು, ವೆಂಕಟೇಶ್‌ ಅವರು ಒಮ್ಮೆಲೆ ನೆಲಕ್ಕೆ ಬಗ್ಗಿದ ಪರಿಣಾಮ ಕಲ್ಲುಗಳು ಅವರ ತಲೆಯ ಮೇಲಿಂದ ಹಾದುಹೋಗಿದೆ. ಅಲ್ಲಿದ್ದ ಇತರ ಯುವಕರು ಕೂಡಾ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅದೇ ವೇಳೆ ಸ್ಥಳಕ್ಕೆ ಬಂದ ಬಾಳೆಗೌಡ ಮೊಕಾಶಿ ಮತ್ತು ಎಚ್‌.ಜಿ. ರೋಹಿದಾಸ್‌ ಹಾಗೂ ಸ್ಥಳೀಯರಾದ ಚಂದ್ರು ಅವರನ್ನು ಕಂಡು ಆರೋಪಿಗಳು ಸ್ಥಳದಿಂದ ಓಡಿಹೋಗಿದ್ದಾರೆ.

ಘಟನೆಗೆ ಸಂಬಂಧಿಸಿ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.