ಜೈನ್ ಚೇಸಿಂಗ್ ಗೆ ಸಿಂಗಂ ಹಾಕಿದರು ಬ್ರೇಕ್.!
ಮಂಗಳೂರು -ಮೂಡಬಿದ್ರೆ-ಕಾರ್ಕಳ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ಸಿನ ಧಾವಂತಕ್ಕೆ ಕಡಿವಾಣ ಹಾಕುವವರೇ ಇಲ್ಲ. ಈ ರೂಟಿನಲ್ಲಿ ಖಾಸಗಿಯವರದ್ದೇ ದರ್ಬಾರ್. ಟೈಮಿಂಗ್ ವಿಚಾರದಲ್ಲಿ ಬಸ್ ಗಳ ನಡುವೆ ಗಲಾಟೆ ಇಲ್ಲಿ ಸರ್ವೇ ಸಾಮಾನ್ಯ. ಇನ್ನು ಈ ಖಾಸಗಿ ಬಸ್ ಗಳ ಭಯಾನಕ ಚಾಲನೆಗೆ ಹಲವಾರು ಮಂದಿ ಪ್ರಾಣ ಕಳೆದುಕೊಂಡವರು ಇದ್ದಾರೆ. ಈ ಬಗ್ಗೆ ಆರ್ ಟಿ ಓ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡ ಉದಾಹರಣೆ ಇಲ್ಲ. ಖಾಸಗಿ ಪ್ರಭಾವಕ್ಕೆ ಆರ್ ಟಿ ಓ ಅಧಿಕಾರಿಗಳು ಕೂಡ ಮಣಿದಿದ್ದಾರೆ.

ಮಂಗಳೂರು -ಮೂಡಬಿದ್ರೆ ಮಾರ್ಗವಾಗಿ ಸಂಚರಿಸುವ ಯಮಸ್ವರೂಪಿ ಖಾಸಗಿ ಬಸ್ ನ ವಿಡಿಯೋ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. KA 19 AB 1339 ಸಂಖ್ಯೆಯ ಜೈನ್ ಬಸ್ ಚಾಲಕನ ಚೇಸಿಂಗ್ ಚಾಲನೆಯ ಎದೆ ಝಲ್ಲೆನಿಸುವ ವಿಡಿಯೋ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ತೋಡಾರು ಯೆನೆಪೋಯ ಮೆಡಿಕಲ್ ಕಾಲೇಜು ಬಳಿಯ ಏಕರೂಪದ ರಸ್ತೆಯಲ್ಲಿ ಇನ್ನೊಂದು ಬಸ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಅಪಾಯಕಾರಿ ಚಾಲನೆ ಎದೆ ಢವ ಢವ ಉಂಟು ಮಾಡುವಂತಿತ್ತು. ಈ ವಿಡಿಯೋ ನೋಡಿ ಪೋಷಕರು ತಮ್ಮ ಮಕ್ಕಳನ್ನು ಹೇಗೆ ಬಸ್ ನಲ್ಲಿ ಕಳುಹಿಸುವುದು ಎಂದು ಹೆದರಿದ್ದರು.

ಈ ಜೈನ್ ಬಸ್ ಚಾಲಕನ ಯದ್ವಾತದ್ವಾ ಬಸ್ ಚಾಲನೆಗೆ ಈ ಹಿಂದೆಯೂ ಅನೇಕ ದುರಂತಗಳು ನಡೆದಿದ್ದು, ಬುದ್ಧಿ ಬಂದಿಲ್ಲ ಅನ್ನುವ ಆರೋಪ ಕೇಳಿ ಬಂದಿತ್ತು. ಈ ಬಸ್ ಚಾಲಕನ ಚೇಸಿಂಗ್ ಟ್ರೆಂಡ್ ಗೆ ಮೂಡಬಿದ್ರೆಯ ಗಾಂಧಿನಗರದ ಬಳಿ ನಿಲ್ಲಿಸಿದ್ದ ಶಾಲಾ ಮಕ್ಕಳ ರಿಕ್ಷಾಕ್ಕೆ ಗುದ್ದಿ ಅಪಘಾತ ಮಾಡಿದ್ದ ಆರೋಪಗಳಿವೆ. ಜೈನ್ ಪೇಟೆಯ ಕಿರಿದಾದ ರಸ್ತೆಯಲ್ಲಿ ಭಯಾನಕ ರೀತಿಯಲ್ಲಿ ಚಾಲನೆ ಮಾಡಿ ಮನೆಯೊಂದಕ್ಕೆ ಹಾನಿ ಮಾಡಿದ್ದ. ಗಂಜಿಮಠದಲ್ಲಿ ಬೈಕ್ ಗೂ ಡಿಕ್ಕಿ ಹೊಡೆಸಿ ಗಂಭೀರ ಗಾಯಗೊಳಿಸಿದ್ದನಂತೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿ ಬಂದಿತ್ತು.
ಈ ಬಗ್ಗೆ ಆರ್ ಟಿ ಓ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತರೆ ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ ದಿಟ್ಟ ಕ್ರಮ ಕೈಗೊಂಡು ಚೇಸಿಂಗ್ ಮಾಡಿದ ಯಮಸ್ವರೂಪಿ ಜೈನ್ ಬಸ್ ಅನ್ನು ವಶಕ್ಕೆ ಪಡೆದು ಪೊಲೀಸ್ ಠಾಣಾ ಆವರಣದಲ್ಲಿ ಇರಿಸಿದ್ದಾರೆ. ಖಾಸಗಿ ಬಸ್ಸಿನವರಿಗೆ ಬಿಸಿಯನ್ನು ಮುಟ್ಟಿಸಿದ್ದಾರೆ. ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದ ಬಸ್ಸು ಚಲಾಯಿಸಿದ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ. ತನ್ನ ಡೇರಿಂಗ್ ಕ್ರಮದಿಂದಾಗಿ ಸಾರ್ವಜನಿಕ ವಲಯದಲ್ಲಿ ಸಿಂಗಂ ಎಂದೇ ಗುರುತಿಸಿಕೊಂಡಿರುವ ಸಂದೇಶ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಸ್ ಅನ್ನೇ ಸೀಜ್ ಮಾಡಿ ದಿಟ್ಟತನ ತೋರಿದ್ದಾರೆ. ಸಂದೇಶ್ ಕಾರ್ಯವೈಖರಿ ಸಾರ್ವತ್ರಿಕ ಪ್ರಶಂಸೆಗೆ ಕಾರಣವಾಗಿದೆ.
