ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗುತ್ತಾ.?
ಕ್ಷಣ ಕ್ಷಣಕ್ಕೂ ಮಹತ್ವದ ಬೆಳವಣಿಗೆಗಳಿಗೆ ಉಡುಪಿ ಜಿಲ್ಲಾ ಬಿಜೆಪಿ ಸಾಕ್ಷಿಯಾಗುತ್ತಿದೆ. ನಿನ್ನೆ ಸಂಜೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಠಾತ್ ರಾಜಕೀಯ ನಿವೃತ್ತಿ ಘೋಷಣೆ ಜಿಲ್ಲಾ ಬಿಜೆಪಿಯಲ್ಲಿ ಭಾರೀ ತಲ್ಲಣಕ್ಕೆ ಕಾರಣವಾಗಿದೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರದಿಂದ ಸತತ ಐದು ಬಾರಿ ಗೆದ್ದು ಅಜೇಯರಾಗಿ ಉಳಿದವರು. ಕ್ಷೇತ್ರದಲ್ಲಿ ಅಜಾತ ಶತ್ರು. ಕುಂದಾಪುರದ ವಾಜಪೇಯಿ ಬಿರುದಾಂಕಿತರು. ರಾಜಕೀಯ ವಿರೋಧಿಗಳು ಕೂಡ ಅವರನ್ನು ಗೌರವಿಸುತ್ತಿರುವುದು ಹಾಲಾಡಿ ಸಜ್ಜನಿಕೆಗೆ ಸಾಕ್ಷಿ. ಇಂತಹ ಹಾಲಾಡಿಯನ್ನು ಬಿಜೆಪಿ ಕೂಡ ನಿರ್ಲಕ್ಷ್ಯಿಸಿತ್ತು ಅನ್ನುವುದು ಸತ್ಯ. ಕಳೆದ ಬಾರಿ ಮಂತ್ರಿಯಾಗುವ ಅವಕಾಶ ಇತ್ತಾದರೂ ಬಿಜೆಪಿ ಮಂತ್ರಿ ಪಟ್ಟ ಕೊಡದೆ ವಂಚಿಸಿತ್ತು. ಹಾಲಾಡಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ಬಂದು ಇತಿಹಾಸ ಸೃಷ್ಟಿಸಿದವರು. ತದನಂತರ ಬಿಜೆಪಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿತ್ತು. ಹಾಲಾಡಿ ಪ್ರತಿ ಚುನಾವಣೆಗಳಲ್ಲೂ ಗೆಲುವಿನ ಅಂತರ ಹೆಚ್ಚಿಸುತ್ತಾ ಹೋದವರು.

ಆದರೆ ಈ ಬಾರಿ ಕುಂದಾಪುರ ಕಣ ಅಂತಿಂಥ ರೀತಿಯಲ್ಲಿಲ್ಲ. ಕಾಂಗ್ರೆಸ್ ಪಕ್ಷ ಯುವ ಮುಖ ಗುತ್ತಿಗೆದಾರ, ಸಾಮಾಜಿಕ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಯವರನ್ನು ಕಣಕ್ಕಿಳಿಸಿದೆ. ದಿನೇಶ್ ಹೆಗ್ಡೆ ಹೋದ ಕಡೆಯೆಲ್ಲಾ ಭಾರೀ ಜನಬೆಂಬಲ ದೊರಕುತ್ತಿದೆ. ಕುಂದಾಪುರದಲ್ಲಿ ಮಿರಾಕಲ್ ಸೃಷ್ಟಿಯಾಗುತ್ತದೆ ಅನ್ನುವ ಮಾತು ಮತದಾರರಿಂದ ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಹಾಲಾಡಿ ರಾಜಕೀಯ ನಿವೃತ್ತಿ ಘೋಷಣೆ ದಿನೇಶ್ ಹೆಗ್ಡೆ ಗೆಲುವಿನ ಮಂದಹಾಸವನ್ನು ಮತ್ತಷ್ಟು ಹೆಚ್ಚಿಸಿದೆ.
ಹಾಲಾಡಿ ರವರ ಏಕಾಏಕಿ ರಾಜಕೀಯ ನಿವೃತ್ತಿ ಘೋಷಣೆ ಇದೀಗ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ಮೂಲದ ಪ್ರಕಾರ ಬಿಜೆಪಿ ಈ ಬಾರಿ ಹಾಲಾಡಿ ಶೆಟ್ಟರಿಗೆ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿದೆ, ಇದೇ ಕಾರಣಕ್ಕೆ ಹಾಲಾಡಿ ನಿವೃತ್ತಿ ಘೋಷಿಸಿದ್ದಾರೆ ಅನ್ನುವ ಮಾತುಗಳಿವೆ.

ಹಾಲಾಡಿ ರಾಜಕೀಯ ನಿವೃತ್ತಿ ಘೋಷಣೆಯಿಂದಾಗಿ ಬಿಜೆಪಿ ಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಮೊಳಹಳ್ಳಿ ಎದುರಾಳಿಯಾಗಿ ಬಿಜೆಪಿ ಯುವ ಮುಖ ಕಿರಣ್ ಕೊಡ್ಗಿ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಇತ್ತ ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಒಂದು ವೇಳೆ ಕಿರಣ್ ಕೊಡ್ಗಿ ಕುಂದಾಪುರ ಬಿಜೆಪಿ ಅಭ್ಯರ್ಥಿಯಾದರೆ ಇತ್ತ ಉಡುಪಿಯಲ್ಲಿ ಹಾಲಿ ಶಾಸಕ ರಘುಪತಿ ಭಟ್ಟರ ಸ್ಥಾನಕ್ಕೆ ಕುತ್ತು ಬರಲಿದೆ. ಕಿರಣ್ ಕೊಡ್ಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಇತರ ಜಾತಿಯ ಅಭ್ಯರ್ಥಿಗಳಿಗೆ ಮಣೆ ಹಾಕಬೇಕಾದ ಪರಿಸ್ಥಿತಿ ಬಿಜೆಪಿಗೆ ಬರಲಿದೆ. ರಘುಪತಿ ಭಟ್ಟರ ಬದಲು ಉದಯ್ ಕುಮಾರ್ ಶೆಟ್ಟಿ ಬಿಜೆಪಿ ಅಭ್ಯರ್ಥಿ ಆದರೂ ಅಚ್ಚರಿಯಿಲ್ಲ. ಹಾಲಾಡಿ ಎಫೆಕ್ಟ್ ಬಿಜೆಪಿಗೆ ಈ ಭಾರಿ ದೊಡ್ಡ ರೀತಿಯ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಉಡುಪಿ ಜಿಲ್ಲಾ ಬಿಜೆಪಿಯಲ್ಲಿ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿ ಗೋಜಲುಮಯವಾಗಿದೆ.