ಅಂಡರ್ ವರ್ಲ್ಡ್ ಪಾತಕಿಗಳ ಟ್ರಿಗ್ಗರ್ ಗೆ ಬಲಿಯಾದ್ರು ಡಜನ್ ಗಟ್ಟಲೆ ಶಾಸಕರು..27 ವರ್ಷಗಳ ನಂತರ ನಡೆಯಿತು ಮೊದಲ ಮರ್ಡರ್.!
ಮುಂಬೈ ರಾಜಕಾರಣಕ್ಕೂ ಅಂಡರ್ ವರ್ಲ್ಡ್ ಗೂ ಗಳಸ್ಯ ಕಂಠಸ್ಯ ಸಂಬಂಧ. ಇಲ್ಲಿ ಪಾತಕ ಲೋಕಕ್ಕೆ ಬಿದ್ದ ಹೆಣಗಳಿಗೆ ಲೆಕ್ಕ ಇಲ್ಲ. ಅದರಲ್ಲೂ ಹೈ ಪ್ರೊಫೈಲ್ ರಾಜಕಾರಣಿಗಳು ಪಾತಕಿಗಳ ಟ್ರಿಗ್ಗರ್ ಗೆ ಬಲಿಯಾದ ರಕ್ತಸಿಕ್ತ ಇತಿಹಾಸವನ್ನೇ ಹೊಂದಿದೆ. ಡಜನ್ ಗಟ್ಟಲೆ ದೊಡ್ಡ ದೊಡ್ಡ ಜನ ನಾಯಕರು ಭೂಗತ ಪಾತಕಿಗಳ ಗುಂಡಿಗೆ ಬಲಿಯಾದ ಭೀಕರ ಇತಿಹಾಸವೇ ಇದೆ. 1960 ರ ದಶಕದಿಂದ ಆರಂಭಗೊಂಡ ರಾಜಕಾರಣದ ರಕ್ತಪಾತದ ಭೀಕರ ಇತಿಹಾಸ ಬಾಬಾ ಸಿದ್ದೀಕಿ ಹತ್ಯೆಯವರೆಗೂ ಮುಂದುವರಿದಿದೆ. ಈ ಬಗೆಗಿನ ಡೀಟೈಲ್ಸ್ ಇಲ್ಲಿದೆ.
ಮುಂಬೈನಲ್ಲಿ ಚುನಾಯಿತ ರಾಜಕಾರಣಿಯೊಬ್ಬರ ಹತ್ಯೆ ಇದೇ ಮೊದಲಲ್ಲ. 1960 ರ ದಶಕದಿಂದ, ಮುಂಬೈನಲ್ಲಿ ಗ್ಯಾಂಗ್ ಸಂಬಂಧಿತ ದಾಳಿಗಳಿಗೆ ಡಜನ್ ಗಟ್ಟಲೆ ರಾಜಕೀಯ ಪ್ರಮುಖ ನಾಯಕರು ಬಲಿಯಾಗಿದ್ದಾರೆ.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ, 1999 ರಿಂದ 2014 ರವರೆಗೆ ಮೂರು ಅವಧಿಗೆ ಬಾಂದ್ರಾ ಪಶ್ಚಿಮ ಕ್ಷೇತ್ರದ ಶಾಸಕರಾಗಿದ್ದ ಬಾಬಾ ಸಿದ್ದೀಕಿ ಅವರು ಶನಿವಾರ ಗುಂಡೇಟಿಗೆ ಬಲಿಯಾಗಿದ್ದು, ಹತ್ಯೆಯ ಹಿಂದೆ ಜೈಲಿನಲ್ಲಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಪಾತ್ರ ಇರುವುದು ದೃಢಪಟ್ಟಿದೆ. ಸಿದ್ದೀಕಿ ಹತ್ಯೆ ಮುಂಬೈನಲ್ಲಿ ರಾಜಕಾರಣಿಗಳ ಸುರಕ್ಷತೆಯ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಜನನಾಯಕರಿಗೆ ಸುರಕ್ಷತೆಯೇ ಇಲ್ಲವಾದರೆ ಇನ್ನು ಜನಸಾಮಾನ್ಯರ ಪಾಡೇನು? ಅನ್ನುವ ಆತಂಕ ಎದುರಾಗಿದೆ.
ಸಿದ್ದೀಕಿ ಸಾವು ಮುಂಬೈನ ರಕ್ತಸಿಕ್ತ ಇತಿಹಾಸವನ್ನು ಮತ್ತೆ ಮುನ್ನೆಲೆಗೆ ತಂದಿದೆ. 1978 ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಖೇರವಾಡಿಯಿಂದ ಗೆದ್ದು ಬಂದಿದ್ದ ರಾಮದಾಸ್ ನಾಯಕ್, ನಂತರದ ಚುನಾವಣೆಯಲ್ಲಿ ವಂಡ್ರೆಯಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು. ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷರು, ಪ್ರಭಾವಿ ಮುಖಂಡರಾಗಿದ್ದ ನಾಯಕ್ ದಾವೂದ್ ಇಬ್ರಾಹಿಂ ಬಂಟ ಗ್ಯಾಂಗ್‌ಸ್ಟರ್ ಛೋಟಾ ಶಕೀಲ್ ರೊಂದಿಗೆ ವೈರತ್ವ ಹೊಂದಿದ್ದರು. ಆಗಸ್ಟ್ 28, 1994 ರಂದು ನಾಯಕ್ ಅವರು ಸಿದ್ದಿಕಿ ಅವರ ಮನೆಯಿಂದ ಕೇವಲ 700 ಮೀಟರ್ ದೂರದಲ್ಲಿರುವ ತಮ್ಮ ನಿವಾಸದಿಂದ ತಮ್ಮ ಬಿಳಿ ಅಂಬಾಸಿಡರ್ ಕಾರಿನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಹೊರಟಿದ್ದ ಸಂದರ್ಭ ಛೋಟಾ ಶಕೀಲ್ ಗ್ಯಾಂಗ್ ನ ಆರು ಮಂದಿ ಹಂತಕರು ಹೊಂಚು ಹಾಕಿ ಕುಳಿತಿದ್ದರು. ಅವರಲ್ಲಿ ಕುಖ್ಯಾತ ದರೋಡೆಕೋರರಾದ ಫಿರೋಜ್ ಕೊಕ್ನಿ ಮತ್ತು ಸೋನಿ ಎಂಬ ಸಹಚರರು ಎಕೆ -47 ರೈಫಲ್‌ಗಳಿಂದ ಗುಂಡು ಹಾರಿಸಿ ನಾಯಕ್ ನನ್ನು ನಡುಬೀದಿಯಲ್ಲಿ ಹತೈಗೈದು ಮೋಟಾರ್‌ಸೈಕಲ್‌ನಲ್ಲಿ ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು 12 ಮಂದಿಯನ್ನು ಬಂಧಿಸಿದ್ದರು. ಆ ಪೈಕಿ ಪ್ರಮುಖ ಆರೋಪಿ ಫಿರೋಜ್ ಕೊಕ್ನಿ ಪೊಲೀಸ್ ಕಸ್ಟಡಿಯಿಂದಲೇ ತಪ್ಪಿಸಿಕೊಂಡಿದ್ದ. 13 ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟದ ನಂತರ ಓರ್ವ ಆರೋಪಿಗೆ ಶಿಕ್ಷೆಯಾಯಿತಷ್ಟೇ. ಉಳಿದವರು ದೋಷಮುಕ್ತಗೊಂಡಿದ್ದರು.
ಅದು 1970 ರ ದಶಕ. ಮುಂಬೈನಲ್ಲಿ ಕಮ್ಯುನಿಸ್ಟ್ ಪಕ್ಷ ಬಲಿಷ್ಠವಾಗಿದ್ದ ಕಾಲವದು. ಶಿವಸೇನಾ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಂದರ್ಭ. ಆ ಸಮಯದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಶಾಸಕ ಕೃಷ್ಣ ದೇಸಾಯಿ ಪ್ರಭಾವಿ ರಾಜಕೀಯ ಮುಖಂಡರಾಗಿದ್ದರು. ದೇಸಾಯಿ ಅವರು ಗಿರಣಿ ಕಾರ್ಮಿಕರಾಗಿದ್ದರು, ಅವರು ಸ್ವಾತಂತ್ರ್ಯ ನಂತರದ ಯುಗದಲ್ಲಿ ಜನಪ್ರಿಯ ಒಕ್ಕೂಟದ ನಾಯಕರಾಗಿ ಹೊರಹೊಮ್ಮಿದರು. ಅವರು ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಗೆದ್ದು 1952 ರಲ್ಲಿ ಕಾರ್ಪೊರೇಟರ್ ಆಗಿದ್ದರು . ಆ ನಂತರ 1967 ರಲ್ಲಿ ಸಿಪಿಐ ಟಿಕೆಟ್‌ನಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದರು. ಮುಂಬೈನ ಗಿರಣಿ ಕಾರ್ಮಿಕರ ಹೃದಯಭೂಮಿಯಾದ ಲಾಲ್‌ಬಾಗ್ ಪರೇಲ್ ಪ್ರದೇಶದಲ್ಲಿ ಜನಪ್ರಿಯ ನಾಯಕರಾಗಿ ಮೂಡಿಬಂದಿದ್ದರು. ಮುಂಬೈನಲ್ಲಿ ರಾಷ್ಟ್ರ ಸೇವಾದಳವನ್ನು ರಚಿಸುವಲ್ಲಿ ಮತ್ತು ಬಲಪಡಿಸುವಲ್ಲಿ ದೇಸಾಯಿ ಪ್ರಮುಖ ಪಾತ್ರ ವಹಿಸಿದ್ದರು, ಇದು ಕಮ್ಯುನಿಸ್ಟ್ ಪಕ್ಷದ ಸಾಂಸ್ಕೃತಿಕ ರಂಗವಾಗಿ ಕಾರ್ಯನಿರ್ವಹಿಸಿತು, ಯುವ ಜನಾಂಗ ಈ ಕಾರಣದಿಂದ ಕಮ್ಯುನಿಸ್ಟ್ ಪಕ್ಷದತ್ತ ಆಕರ್ಷಿತರಾಗಿದ್ದರು. ಈ ಸಮಯದಲ್ಲಿ ಮುಂಬೈನಲ್ಲಿ ಬಲಪಂಥೀಯ ಸಿದ್ಧಾಂತದೊಂದಿಗೆ ರಾಜಕಾರಣಕ್ಕೆ ಇಳಿದ ಶಿವಸೇನೆಗೆ ದೇಸಾಯಿ ಸಿಂಹಸ್ವಪ್ನರಾಗಿದ್ದರು. ಕಮ್ಯುನಿಸ್ಟ್ ಹಾಗೂ ಶಿವಸೇನೆ ನಡುವೆ ರಾಜಕೀಯ ಪ್ರಾಬಲ್ಯಕ್ಕಾಗಿ ಸಂಘರ್ಷವು ನಡೆಯುತ್ತಿತ್ತು . ಜೂನ್ 5, 1970 ರ ರಾತ್ರಿ, ಕೃಷ್ಣ ದೇಸಾಯಿ ಅವರು ಸಹವರ್ತಿಯೊಂದಿಗೆ ಮನೆಯಲ್ಲಿದ್ದ ಸಂದರ್ಭ ಯಾರೋ ಭೇಟಿಯಾಗಲು ಬಂದಿದ್ದಾರೆ ಎಂದು ಮನೆಯ ಹೊರಗಡೆ ಬರುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ 20 ರಷ್ಟು ಶಿವಸೇನಾ ಬೆಂಬಲಿಗರು ಏಕಾಏಕಿ ನುಗ್ಗಿ ತಲವಾರಿನಿಂದ ಕಡಿದು ಪರಾರಿಯಾಗಿದ್ದರು. ಮನೆಯ ಮುಂಭಾಗದಲ್ಲೇ ದೇಸಾಯಿ ರಕ್ತ ಚಿಮ್ಮಿತ್ತು. ಈ ಪ್ರಕರಣ ಅವತ್ತಿನ ದಿನಗಳಲ್ಲಿ ಮುಂಬೈ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.

ಈ ಹತ್ಯೆಗೆ ಸಂಬಂಧಿಸಿ 19 ಮಂದಿ ಶಿವಸೇನಾ ಬೆಂಬಲಿಗರನ್ನು ಬಂಧಿಸಲಾಗಿತ್ತು. ಅದರಲ್ಲಿ 16 ಮಂದಿಗೆ ಶಿಕ್ಷೆಯಾದವು. ಈ ಹತ್ಯೆ ಮುಂಬೈ ರಾಜಕಾರಣದಲ್ಲಿ ಶಿವಸೇನಾ ಪಕ್ಷ ಭದ್ರವಾಗಿ ಕಾಲೂರಳು ಕಾರಣವಾಯಿತು.
1990 ರ ದಶಕದಲ್ಲಿ ಮುಂಬೈ ಮಹಾನಗರದಲ್ಲಿ ಗ್ಯಾಂಗ್ ಸ್ಟರ್ ಗಳ ಆರ್ಭಟ ಹೆಚ್ಚಾಯಿತು. ಜೊತೆಗೆ ರಾಜಕೀಯ ನಾಯಕರ ಹತ್ಯಾ ಪ್ರಕರಣಗಳು ಹೆಚ್ಚಿತು . 1992 ರಲ್ಲಿ ಹಣಕಾಸಿನ ವಿಚಾರವಾಗಿ ಗುರು ಸತಮ್ ಗ್ಯಾಂಗ್‌ನ ಸದಸ್ಯರಿಂದ ಶಿವಸೇನೆಯ ಶಾಸಕ ವಿಠ್ಠಲ್ ಚವಾಣ್ ರ ಹತ್ಯೆಯಾದವು.
ಒಂದೇ ವರ್ಷದ ಅಂತರದಲ್ಲಿ ಮೇ 29, 1993 ರಂದು, ಶಿವಸೇನೆಯ ರಾಜಕಾರಣಿ ಮತ್ತು ಟ್ರೇಡ್ ಯೂನಿಯನ್ ಮುಖಂಡ ರಮೇಶ್ ಮೋರೆ ಅವರು ಅಂಧೇರಿಯಲ್ಲಿರುವ ಅವರ ನಿವಾಸದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಾಲ್ವರು ದಾಳಿಕೋರರಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟರು. ಆತನ ಹತ್ಯೆಗೆ ಅರುಣ್ ಗಾವ್ಲಿ ಗ್ಯಾಂಗ್ ಕಾರಣ ಎನ್ನಲಾಗಿದೆ. ಐದು ದಿನಗಳ ನಂತರ, ಜೂನ್ 3, 1993 ರಂದು, ಎರಡು ಬಾರಿ ಬಿಜೆಪಿ ಶಾಸಕರಾಗಿದ್ದ ಪ್ರೇಮ್ ಕುಮಾರ್ ಶಂಕರದತ್ ಶರ್ಮಾ ಅವರು ತಮ್ಮ ಕುಟುಂಬದೊಂದಿಗೆ ಊಟ ಮಾಡುತ್ತಿದ್ದಾಗ ಗ್ರಾಂಟ್ ರಸ್ತೆಯಲ್ಲಿ ಇಬ್ಬರು ಬಂದೂಕುಧಾರಿಗಳಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟರು; ಅವರು ದಾವೂದ್ ಇಬ್ರಾಹಿಂ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದರು.
ಏಪ್ರಿಲ್ 1994 ರಲ್ಲಿ, ಬೈಕುಲ್ಲಾದಲ್ಲಿ ಮುಸ್ಲಿಂ ಲೀಗ್‌ನ ಮಾಜಿ ಶಾಸಕ ಮತ್ತು ಮುಖಂಡರಾಗಿದ್ದ ಜಿಯಾವುದ್ದೀನ್ ಬುಖಾರಿ ಕೊಲ್ಲಲ್ಪಟ್ಟರು. ಅರುಣ್ ಗಾವ್ಲಿ ಗ್ಯಾಂಗ್ ಭಾಗಿಯಾಗಿದ್ದರೂ, ಬಂಧಿತರಾದ ಅನೇಕರು ಆ ನಂತರ ಖುಲಾಸೆಗೊಂದರು.

ಆದಾಗ್ಯೂ, 1995 ರಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಒಕ್ಕೂಟವು ಅಧಿಕಾರಕ್ಕೆ ಬಂದ ನಂತರ ರಾಜಕೀಯ ಕೊಲೆಗಳ ಸರಣಿಯು ಹದ್ದುಬಸ್ತಿಗೆ ಬಂದವು . ಹತ್ಯೆಗೀಡಾದ ಕೊನೆಯ ಪ್ರಮುಖ ರಾಜಕೀಯ ವ್ಯಕ್ತಿ ಮಾಜಿ ಶಾಸಕ ಮತ್ತು ಒಕ್ಕೂಟದ ನಾಯಕ ದತ್ತಾ ಸಾಮಂತ್. ಜನವರಿ 16, 1997 ರಂದು, ಘಾಟ್‌ಕೋಪರ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ, ಸಮಂತ್ ಅವರ ವಾಹನವನ್ನು ಅಡ್ಡಗಟ್ಟಿ, ನಾಲ್ವರು ದುಷ್ಕರ್ಮಿಗಳು 17 ಸುತ್ತುಗಳ ಗುಂಡು ಹಾರಿಸಿ ಕೊಂದು ಬಿಟ್ಟರು. ಛೋಟಾ ರಾಜನ್ ಕಡೆಯವರು ಈ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಇಬ್ಬರು ಶೂಟರ್ ಗಳು ಸೇರಿದಂತೆ ಮೂವರು ಶಿಕ್ಷೆಗೊಳಗಾದರು. ದೀರ್ಘ ಕಾನೂನು ಹೋರಾಟದಿಂದ ಛೋಟಾ ರಾಜನ್ ಈ ಹತ್ಯಾಪ್ರಕರಣದಿಂದ ಖುಲಾಸೆಗೊಂಡಿದ್ದರು.
1997 ರಲ್ಲಿ ನಡೆದ ಸಮಂತ್ ಹತ್ಯೆಯ ನಂತರ, ಮುಂಬೈ ಚುನಾಯಿತ ಪ್ರತಿನಿಧಿಗಳ ಹತ್ಯೆಗೆ ಸಾಕ್ಷಿಯಾಗಿಲ್ಲ. ರಾಜಕೀಯ ಮುಖಂಡರು ನೆಮ್ಮದಿಯ ನಿದ್ರೆಯಲ್ಲಿದ್ದರು. ಇದೀಗ 27 ವರ್ಷಗಳ ತರುವಾಯ ಬಾಬಾ ಸಿದ್ದೀಕಿ ಹತ್ಯೆಯಾಗಿದ್ದಾರೆ. ಮುಂಬೈ ನಲ್ಲಿ ಮತ್ತೆ ಹಳೆಯ ರಕ್ತಸಿಕ್ತ ರಾಜಕೀಯ ಇತಿಹಾಸ ಮರುಕಳಿಸಲಿದೆಯೋ ಅನ್ನುವ ಆತಂಕ ಎದುರಾಗಿದೆ.
