ಮಂಗಳೂರು: ವಿಡಿಯೋ ಹುಚ್ಚಿಗಾಗಿ ರೆಸಾರ್ಟ್‌ವೊಂದರ ಈಜುಕೊಳಕ್ಕಿಳಿದ ಮೈಸೂರಿನ ಮೂವರು ಯುವತಿಯರು ಮುಳುಗಿ ಮೃತಪಟ್ಟ ಘಟನೆ ಉಳ್ಳಾಲ ಬಳಿಯ ಸೋಮೆಶ್ವರ ರೆಸಾಟಿನಲ್ಲಿ ನಡೆದಿದೆ. ಉಳ್ಳಾಲದ ಸೋಮೇಶ್ವರದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ.
ಮೈಸೂರು ದೇವರಾಜ ಮೊಹಲ್ಲಾದ ಕೀರ್ತನಾ ಎನ್ (21), ಮೈಸೂರು ಕುರುಬರ ಹಳ್ಳಿ 4ನೇ ಕ್ರಾಸ್ ನಿವಾಸಿ ನಿಶಿತಾ ಎಂ.ಡಿ (21) ಹಾಗೂ ಮೈಸೂರು ಕೆ.ಆರ್.ಮೊಹಲ್ಲ ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಪಾರ್ವತಿ ಎಸ್ (20) ಮೃತಪಟ್ಟ ಯುವತಿಯರು. ಮೂರು ಮಂದಿ ಯುವತಿಯರು ಮೈಸೂರಿನವರು ಎಂದು ತಿಳಿದು ಬಂದಿದೆ.
ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್ ಎಂಬಲ್ಲಿರುವ ರೆಸಾರ್ಟ್‌ಗೆ ಶನಿವಾರ ಈ ಯುವತಿಯರು ಬಂದಿದ್ದರು. ರೆಸಾರ್ಟ್ ಮುಂಭಾಗದಲ್ಲಿರುವ ಕೊಳಕ್ಕೆ ಭಾನುವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ನೀರಾಟವಾಡಲು ಇಳಿದಿದ್ದರು. ಈಜುಕೊಳದ ನೀರಿನತ್ತ ಮೊಬೈಲ್ ಪೋನ್‌ನ ವಿಡಿಯೊ ಕ್ಯಾಮೆರಾ ಆನ್ ಮಾಡಿಟ್ಟು ಯುವತಿಯರು ಈಜಾಡುತ್ತಿದ್ದರು. ಆಳವಿರುವ ಕಡೆ ತೆರಳಿದಾಗ ಈಜು ಬಾರದೆ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.