ಮೂಡಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಆತ್ಮಹತ್ಯೆ ಗೈದಿರುವ ಯುವಕ ಆಳ್ವಾಸ್ ಕಾಲೇಜಿನ ತೃತೀಯ ವರ್ಷದ ಬಿಬಿಎಂ ವಿದ್ಯಾರ್ಥಿ ಶಶಾಂಕ್ ಎಂದು ಗುರುತಿಸಲಾಗಿದೆ.
ಈತ ಮೂಲತಃ ತಮಿಳುನಾಡಿನ ಚನ್ನಗಿರಿ ಹೊಸೂರು ನಿವಾಸಿಯಾಗಿದ್ದು, ಕಾಲೇಜಿನ ಯಮುನಾ ಬಾಲಕರ ವಸತಿ ನಿಲಯದ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶಶಾಂಕ್ ಆಳ್ವಾಸ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಕಾಲೇಜಿನ ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ. ಕಾಲೇಜಿನ ಉಪನ್ಯಾಸಕರು ಹಾಗೂ ಸಹಪಾಠಿಗಳೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದ. ಇದೇ ಕಾರಣಕ್ಕೆ ಈತ ಎಲ್ಲರ ಪ್ರೀತಿ, ಸ್ನೇಹಕ್ಕೆ ಪಾತ್ರರಾಗಿದ್ದ.
ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಹೆಚ್ಚಿನ ನೈಪುಣ್ಯತೆ ಹೊಂದಿರುವ ಶಶಾಂಕ್ ಗೆ ಕಾಲೇಜಿನ ವತಿಯಿಂದ ಗೌರವ ಧನ ನೀಡುತ್ತಿದ್ದರು. ಆದರೆ ಗುರುವಾರದಂದು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಯ ಅಗಲುವಿಕೆ ಕಾಲೇಜಿನಲ್ಲಿ ಶೋಕ ಸಾಗರಕ್ಕೆ ಕಾರಣವಾಗಿದೆ.
ಸ್ವಾರಿ..ಸ್ವಾರಿ..ಸ್ವಾರಿ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಗೈದಿರುವುದು, ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಸ್ಥಳಕ್ಕೆ ಮೂಡಬಿದ್ರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಡೆತ್ ನೋಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಹೆತ್ತವರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
