ದೂರುದಾರೆಗೆ ಒಲಿದು ಬಂತು ಅಧಿಕಾರದ ಭಾಗ್ಯ.!
ಮೂಡಬಿದಿರೆಯಲ್ಲಿ ಸ್ವಾಹಾ ಪ್ರಕರಣಗಳಿಗೇನೂ ಕಮ್ಮಿಯಿಲ್ಲ. ಇಲ್ಲಿ ಗೋಲ್ಮಾಲ್ ನಡೆಸುವವರಿಗೆ ನೀರು ಕುಡಿದಷ್ಟೇ ಸಲೀಸು. ಮೂಡಬಿದಿರೆಗೆ ಜೀವ ಸೆಲೆಯಾದ ಬಹುತೇಕ ಕೆರೆಯನ್ನು ಪೂರ್ತಿ ನುಂಗಿ ಹಾಕಿದ್ದಾರೆ. ಈ ಬಗ್ಗೆ ಸಮಗ್ರ ವರದಿಯನ್ನು ಸ್ಪೆಷಲ್ ನ್ಯೂಸ್ ಮೀಡಿಯಾ ವರದಿ ಮಾಡಿತ್ತು. ಇದೀಗ ಎಚ್ಚೆತ್ತುಕೊಂಡ ಸ್ಥಳೀಯರು ಕೆರೆ ಉಳಿಸಲು ಹೋರಾಟ ಸಮಿತಿ ರಚನೆಗೆ ಮುಂದಾಗಿದ್ದಾರೆ. ಕೆರೆ ಉಳಿಸಲು ಸಮಿತಿ ರಚನೆಗೆ ಜಿಲ್ಲೆಯ ಅಗ್ರಗಣ್ಯ ಹೋರಾಟಗಾರರಾಗಿರುವ ಸುದತ್ತ್ ಜೈನ್ ಶಿರ್ತಾಡಿ ಯವರಿಂದ ರೂಪುರೇಷೆ ಪಡೆಯಲು ಮುಂದಾಗಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋರಾಟದ ರಂಗಕ್ಕೆ ಹೊಸ ಛಾಪು ಮೂಡಿಸಿದವರು ಸುದತ್ತ್ ಜೈನ್ ಶಿರ್ತಾಡಿ. ಅನ್ಯಾಯದ ವಿರುದ್ಧ ಏಕಾಂಗಿ ಹೋರಾಟ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಅನಿರ್ಧಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿರುವ ದಾಖಲೆ ಈಗಲೂ ಇವರ ಹೆಸರಲ್ಲೇ ಇದೆ. ಮೊದಲು ಹಿಂದೂ ಸಂಘಟನೆಗಳ ಮುಂಚೂಣಿ ಚಳುವಳಿಯಲ್ಲಿ ಭಾಗವಹಿಸುತ್ತಿದ್ದ ಸುದತ್ತ್ ಪ್ರವೀಣ್ ವಾಲ್ಕೆ ಜೊತೆ ಅತ್ಯಂತ ಆಪ್ತ ಬಳಗದಲ್ಲಿ ಕಾಣಿಸಿಕೊಂಡವರು. ಆನಂತರ ಇವರ ಚಳುವಳಿಯ ದಾರಿ ಬೇರೆಯಾಯಿತು. ಸರಕಾರಿ, ಇಎಸ್ಐ ಆಸ್ಪತ್ರೆ ವಿರುದ್ಧ ನಿರಂತರ ಹೋರಾಟ ಮಾಡಿ ಅಧಿಕಾರಸ್ಥರು ಬೆವರಿಳಿಯುವಂತೆ ಮಾಡುತ್ತಿದ್ದರು. ಕಾರ್ಮಿಕ ವಾಣಿ ಪತ್ರಿಕೆಯ ಮೂಲಕ ಸಮಾಜದ ಅನ್ಯಾಯಕ್ಕೊಳಗಾದವರ ಪರ ನಿಂತರು. ಮೇ 1 ಕಾರ್ಮಿಕ ದಿನಾಚರಣೆಯಂದು ಕಳೆದ ಹತ್ತು ವರ್ಷಗಳಿಂದ ಮಾಲೀಕರು-ಕಾರ್ಮಿಕರ ಸಮಾವೇಶ ನಡೆಸಿ ಯಶಸ್ವಿ ಸಂಘಟಕ ಎನಿಸಿಕೊಂಡವರು. ಅಖಿಲ ಭಾರತ ಕಾರ್ಮಿಕ ಸಂಘಟನೆ, ರಾಜ್ಯ ವಿಮಾ ಆಸ್ಪತ್ರೆ ಸದಸ್ಯರಾಗಿ ಅನ್ಯಾಯಕ್ಕೊಳಗಾದವರ ಪರ ನಿಂತು ಹೋರಾಟ ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಮೂಡಬಿದ್ರೆಯ ಕರಿಂಜೆ ಗ್ರಾಮದ ಕೆರೆಯ ವಿರುದ್ಧ ಸ್ಥಳೀಯರಾದ ಕೇಶವ ಸ್ಥಳೀಯರನ್ನು ಒಟ್ಟುಗೂಡಿಸಿ ಹಲವು ವರ್ಷಗಳಿಂದ ಹೋರಾಟಕ್ಕೆ ಇಳಿದಿದ್ದರು. ಕೇಶವ ಮತ್ತವರ ತಂಡದವರಿಂದ ಹೋರಾಟಕ್ಕೆ ಇಳಿದ ಕಾರಣ ಬೆದ್ರದಲ್ಲಿ ಇದ್ದ ಇತರ ಕೆರೆಯಂತೆ ಕಬಳಿಕೆದಾರರಿಗೆ ಪೂರ್ತಿ ನುಂಗಲು ಸಾಧ್ಯವಾಗಲಿಲ್ಲ. ಈ ಕೆರೆ ಕಬಳಿಕೆ ವಿರುದ್ಧ ಕೇಶವ ಆತನ ತಂಡದ ಪ್ರಮುಖರಾದ ಹಾಗೂ ಸ್ಥಳೀಯ ಹಿರಿಯರಾದ ಎರಿಕ್ ಪಿರೇರಾ, ಆನಂದ್, ವಿಠಲ ಪೂಜಾರಿ, ಮೆಲ್ವಿ ಮೊದಲಾದವರು ಹೋರಾಟ ಮಾಡಿದ್ದರು. ಈ ಕೆರೆಯನ್ನು ಕಣ್ಣಾರೆ ಕಂಡಿರುವ ಇವರು ಇತ್ತೀಚೆಗೆ ಕಬಳಿಕೆ ಮಾಡಿರುವವರ ವಿರುದ್ಧ ಆಕ್ರೋಶದ ಮಾತುಗಳನ್ನಾಡುತ್ತಿದ್ದಾರೆ. ಆನಂತರ ಬೆನ್ನಿಗೆ ನಿಂತವರು ಸುದತ್ತ ಜೈನ್. ಕೆರೆ ಹೋರಾಟದ ಚಳುವಳಿ, ಅದಕ್ಕೆ ಬೇಕಾದ ಸಲಹೆ ನೀಡಿದರು. ಕೆರೆ ಕಬಳಿಕೆದಾರರ ಪರವಾಗಿ ನಿಲ್ಲದೆ ಕೆರೆ ಉಳಿಸುವವರ ಪರವಾಗಿ ನಿಂತರು. ಇದೀಗ ಹೋರಾಟ ಸಮಿತಿ ರಚನೆಗೆ ಮುಂದಾಗಿದ್ದಾರೆ.
ದೂರುದಾರೆಗೆ ಒಲಿದು ಬಂತು ಅಧಿಕಾರದ ಭಾಗ್ಯ.!
ಕರಿಂಜೆ ಕೆರೆ ಹೋರಾಟದ ಆರಂಭಿಕ ಕ್ರೆಡಿಟ್ ಕೇಶವ ಅವರಿಗೆ ಸಲ್ಲಬೇಕು. ಆನಂತರ ಸ್ಥಳೀಯ ಪುರಸಭಾ ಸದಸ್ಯರಾಗಿರುವ ಕೇಶವ ರ ಪತ್ನಿ ಜಯಶ್ರೀ ಕೆರೆ ಕಬಳಿಕೆ ವಿರುದ್ಧ ಜಿಲ್ಲಾಧಿಕಾರಿ, ತಹಶೀಲ್ದಾರರು ಸಂಬಂಧಪಟ್ಟ ಇಲಾಖೆಗೆ ಲಿಖಿತ ದೂರು ನೀಡಿದ್ದರು. ಇದೀಗ ಈ ಪ್ರಕರಣ ನ್ಯಾಯಾಲಯದಲ್ಲಿದೆ. ದೂರುದಾರರಾದ ಜಯಶ್ರೀ ಇದೀಗ ನೂತನ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೀಗ ರಾಜಕೀಯ ಅಧಿಕಾರ ಲಭಿಸಿದೆ. ಈ ಅಧಿಕಾರವನ್ನು ಸಮರ್ಥವಾಗಿ ಉಪಯೋಗಿಸಲಿ, ಕೆರೆ ಉಳಿಸುವ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಲು ಮುಂದಾಗಲಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
