ಮಂಗಳೂರು ಉತ್ತರದ ಪಂಚಾಯತ್ ಉಪಚುನಾವಣೆ: ಮೂರರಲ್ಲೂ ಕಾಂಗ್ರೆಸ್ ಕ್ಲೀನ್ ಸ್ವೀಪ್; ಬಿಜೆಪಿ ಧೂಳೀಪಟ
ರಾಜಕಾರಣದಲ್ಲಿ ವರ್ಕೌಟ್ ಆಗುವುದು ತಂತ್ರಗಾರಿಕೆ ಅನ್ನುವುದು ನೂರಕ್ಕೆ ನೂರು ಸತ್ಯ. ಎಂತಹ ಬಲಾಢ್ಯರನ್ನು ಮಣ್ಣು ಮುಕ್ಕಿಸಬಹುದು ಅನ್ನುವುದಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವೇ ಸ್ಪಷ್ಟ ನಿದರ್ಶನ. ಮಂಗಳೂರು ಉತ್ತರದಲ್ಲಿ ಬಿಜೆಪಿ ಶಾಸಕರಿದ್ದರೂ, ಬಿಜೆಪಿ ಗೆಲುವಿಗೆ ಹಗಲು ರಾತ್ರಿ ಫೀಲ್ಡಿಗಿಳಿದ ಶಾಸಕರು ಹಾಗೂ ಅವರ ಬಂಟರಿಗೆ ಮತದಾರರು ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಗರಡಿಯಲ್ಲಿ ಪಳಗಿದ ಇನಾಯತ್ ಅಲಿ ತಂತ್ರಗಾರಿಕೆಯ ಚರೀಷ್ಮಾ ವರ್ಕೌಟ್ ಆಗಿದೆ. ಪಂಚಾಯತ್ ನ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಒಂದು ಕ್ಷೇತ್ರ ಬಿಜೆಪಿಯ ಕೈಯಲ್ಲಿತ್ತು. ಅಲ್ಲೂ ಕೂಡ ವಿಜಯ ದುಂದುಭಿ ಬಾರಿಸಿದೆ. ಶಾಸಕ ಭರತ್ ಶೆಟ್ಟಿಗೆ ಮುಖಭಂಗವಾಗಿದೆ.
ರಾಜ್ಯದಲ್ಲಿ ಮೂರು ವಿಧಾನಸಭಾ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ -ಡಿಕೆಶಿ-ಜಮೀರ್ ಜುಗಲ್ಬಂದಿಯಲ್ಲಿ ಗೆದ್ದು ಬಿಜೆಪಿ, ಜೆಡಿಎಸ್ ಗೆ ಮರ್ಮಾಘಾತ ನೀಡಿತ್ತು. ಕಾಂಗ್ರೆಸ್ ಗ್ಯಾರಂಟಿಯನ್ನು ಅಣಕಿಸುತ್ತಿದ್ದ ಬಿಜೆಪಿಗರಿಗೆ ಈ ಫಲಿತಾಂಶ ಅರಗಿಸಿಕೊಳ್ಳದಂತೆ ಮಾಡಿತ್ತು. ಕಾಂಗ್ರೆಸ್ ಗೆದ್ದು ರಣೋತ್ಸಾಹದಲ್ಲಿದೆ.

ಇದೀಗ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮೂರು ಪಂಚಾಯತ್ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದೆ. ಕಳೆದ ಬಾರಿ ಚುನಾವಣೆ ಸ್ಪರ್ದಿಸಲು ಕೊನೆಯ ಕ್ಷಣದಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದ ಇನಾಯತ್ ಅಲಿ ಭರತ್ ಶೆಟ್ಟಿ ವಿರುದ್ಧ ಸೋಲು ಕಂಡಿದ್ದರು. ಇನಾಯತ್ ಅಲಿ ಸೋತರೂ ಕ್ಷೇತ್ರದಾದ್ಯಂತ ಚುರುಕಿನಿಂದ ಓಡಾಡಿದರು, ಜನರ ಸಂಕಷ್ಟಕ್ಕೆ ನೆರವಾದರು. ಪ್ರವಾಹ, ದುರಂತ ಸಂದರ್ಭದಲ್ಲೂ ಜನರ ಮಧ್ಯೆಯೇ ಇದ್ದರು. ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸಲು ಶ್ರಮ ಪಟ್ಟರು. ಇತ್ತ ಶಾಸಕರು ಬೆಂಕಿ ಉಗುಳುವ ಮಾತುಗಳನ್ನು ಆಡುತ್ತಾ ಕಾಲ ಕಳೆದರೆ ವಿನಹಃ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಲಿಲ್ಲ. ಮಂಗಳೂರು ಉತ್ತರದಲ್ಲಿ ಶಾಸಕರ ಕೊರತೆಯನ್ನು ನೀಗಿಸುವಂತೆ ಪರಾಜಿತ ಅಭ್ಯರ್ಥಿ ಇನಾಯತ್ ಅಲಿ ಓಡಾಡಿದರು. ಸರಕಾರದ ಹಲವು ಅನುದಾನಗಳನ್ನು ಕ್ಷೇತ್ರಕ್ಕೆ ತರುವ ಮೂಲಕ ಅಭಿವೃದ್ಧಿಯ ರೂವಾರಿಯಾದರು.
ಇದೀಗ ನಡೆದ ಉಪ ಚುನಾವಣೆಯಲ್ಲಿ ಗಂಜಿಮಠದ ಮೊಗರು ವಾರ್ಡ್ ಬಿಜೆಪಿಯ ಕೈಯಲ್ಲಿತ್ತು. ಇಲ್ಲಿನ ಬಿಜೆಪಿ ಸದಸ್ಯರು ನಿಧನದಿಂದ ತೆರವಾದ ಕಾರಣ ಉಪ ಚುನಾವಣೆ ನಡೆದಿತ್ತು. ಮಾಜಿ ತಾಲೂಕು ಪಂಚಾಯತ್ ಸದಸ್ಯ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುನಿಲ್ ಬಿಜೆಪಿಯನ್ನು ಮಣಿಸಿ ಭರ್ಜರಿಯಾಗಿ ಗೆಲುವು ಕಂಡಿದ್ದಾರೆ.

ಅಡ್ಯಾರ್ ಗ್ರಾಮ ಪಂಚಾಯತ್ ಅಡ್ಯಾರ್ ಪದವು 5ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ದಾಮೋದರ್ ಶೆಟ್ಟಿ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಗೌರವ್ ಶೆಟ್ಟಿ ಭರ್ಜರಿ ಮತಗಳಿಂದ ಜಯಭೇರಿ ಬಾರಿಸಿದ್ದಾರೆ.

ನೀರುಮಾರ್ಗ ಗ್ರಾಮ ಪಂಚಾಯತ್ ಬಿತ್ತು ಪಾದೆ ವಾರ್ಡ್ ನಲ್ಲಿ ಜನನಾಯಕ ಹಮೀದ್ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶ್ರಫ್ ಗೆಲುವು ಸಾಧಿಸಿದ್ದಾರೆ.

ಗಂಜಿಮಠ, ಅಡ್ಯಾರ್, ನೀರುಮಾರ್ಗ ಗ್ರಾಮ ಪಂಚಾಯತ್ ಉಪ ಚುನಾವಣೆ ಗೆಲ್ಲಲು ಶಾಸಕ ಭರತ್ ಶೆಟ್ಟಿ ನೇತ್ರತ್ವದಲ್ಲಿ ಮೇಯರ್, ಬಿಜೆಪಿ ದಂಡು ಆಹೋರಾತ್ರಿ ಶ್ರಮಿಸಿತ್ತು. ಕಾಂಚಾಣ ಚೆಲ್ಲಿ, ಏನೆಲ್ಲಾ ಗಿಮಿಕ್ಸ್ ಮಾಡಿದರೂ ಇನಾಯತ್ ಅಲಿಯ ಚಾಣಾಕ್ಷ ತಂತ್ರಗಾರಿಕೆ ಎದುರು ಬಿಜೆಪಿ ಧೂಳೀಪಟವಾಯಿತು. ಇನಾಯತ್ ಅಲಿ ಖದರ್ರು ಮತ್ತೊಮ್ಮೆ ಸದ್ದು ಮಾಡಿದೆ. ರಾಜ್ಯರಾಜಕಾರಣದಲ್ಲಿ ಸಿದ್ದು, ಡಿಕೆಶಿ, ಝಮೀರ್ ಮಿಂಚಿದರೆ, ಮಂಗಳೂರು ಉತ್ತರದಲ್ಲಿ ಇನಾಯತ್ ಅಲಿ ತನ್ನ ಚರಿಷ್ಮಾ ತೋರಿಸಿದ್ದಾರೆ.