‘ಜೀಟಿಗೆ’ ಸಿನೆಮಾ ನಿರ್ಮಾಪಕನಿಂದ ಬಂಟ್ವಾಳ ಉದ್ಯಮಿಗೆ 9 ಕೋಟಿ ಉಂಡೆನಾಮ.!

ಕರಾವಳಿ

ಬಣ್ಣ ಬಣ್ಣದ ಮಾತುಗಾರ..ತುಳು ಸಿನೆಮಾ ನಿರ್ಮಾಪಕನ ಮಕ್ಮಲ್ ಟೋಪಿ ಕಥೆ.!

ಸಿನಿಮಾ ಅಂದ್ರೇನೇ ಮಾಯಾ ಲೋಕ. ಇದಕ್ಕೆ ಎಲ್ಲರೂ ಮಾರಿ ಹೋದವರೇ. ಇಲ್ಲಿ ಅನೇಕರು ಮುಖವಾಡದ ಬದುಕನ್ನು ಬದುಕುತ್ತಿರುತ್ತಾರೆ. ಬಣ್ಣ ಬಣ್ಣದ ಮಾತುಗಳಿಂದ ನಂಬಿಸುತ್ತಾರೆ. ಚೂರು ಯಾಮಾರಿದರೂ ತಲೆಗೆ ಮಕ್ಮಲ್ ಟೋಪಿ ಹಾಕಿ ಹಣೆಗೆ ತುಪ್ಪ ಸವರುತ್ತಾರೆ. ಇದ್ದ ಬದ್ದ ಹಣವನ್ನೆಲ್ಲ ದೋಚಿ ಕೈಗೆ ಸಿಗದಂತೆ ಕಣ್ಮರೆಯಾಗಿರುತ್ತಾರೆ ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ನಿರ್ಮಾಪಕ ಅರುಣ್ ರೈ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ. ತುಳು ಚಿತ್ರರಂಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದ ಜೀಟಿಗೆ ಎಂಬ ಚಿತ್ರವನ್ನು ಮಾಡಿದ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಎರಡು ವರ್ಷದ ಹಿಂದೆ ವೀರ ಕಂಬಳ ಎಂಬ ಸಿನೆಮಾದ ನಿರ್ಮಾಪಕರಾಗಿದ್ದರು. ಇದೀಗ ಅರುಣ್ ರೈ ವಿರುದ್ಧ ವಂಚನೆ ಪ್ರಕರಣ ಆರ್.ಎಂ.ಸಿ. ಯಾರ್ಡ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕೊರೊನಾದಿಂದ ಜಗತ್ತು ಕಂಗಾಲಾದ ಸಮಯದಲ್ಲಿ ಗೇರು ಬೀಜಾ ಸಂಸ್ಕರಣಾ ಘಟಕದಲ್ಲಿ 25 ಕೋಟಿ ನಷ್ಟ ಮಾಡಿಕೊಂಡಿದ್ದ ಬಂಟ್ವಾಳ ಮೂಲದ ಉದ್ಯಮಿ ಟಿ. ವರದರಾಜು ಬೆಂಗಳೂರಿನ ತಾಜ್ ಹೋಟೆಲ್​ನಲ್ಲಿ ಅರುಣ್ ರೈ ಪರಿಚಯ ಮಾಡಿಕೊಂಡಿದ್ದರು. ದೆಹಲಿಯಲ್ಲೊಂದು 400 ಕೋಟಿ ಹೂಡಿಕೆ ಮಾಡಿರುವುದಾಗಿ ಸುಳ್ಳು ಹೇಳಿದ್ದಾರೆ.

ತಮಿಳುನಾಡಿನ ದಿಂಡಿಗಲ್ ಕಾಳಿ ಸ್ವಾಮಿಯಿಂದ 50 ಕೋಟಿ ಹಣ ಬರಬೇಕು ಎಂದು ಹೇಳಿದ್ದಾರೆ. ಜಾರ್ಖಂಡ್ ಸರ್ಕಾರದಿಂದ 50 ಕೋಟಿ ಕೆಲಸದ ಬಿಲ್ ಬಾಕಿ ಇದೆ ಎಂದು ಪುಂಖಾನುಪುಂಖವಾಗಿ ಆ ಉದ್ಯಮಿ ಎದುರು ತಮ್ಮನ್ನು ತಾವು ವರ್ಣಿಸಿಕೊಂಡಿದ್ದಾರೆ. ಮಂಗಳೂರಿನ ಗೋಡೌನ್ ನಲ್ಲಿ 40 ಕೋಟಿ ಮೌಲ್ಯದ ಗೋಡಂಬಿ ಇದೆ ಅದನ್ನು 25 ಕೋಟಿಗೆ ಕೊಡುತ್ತೇನೆ ಎಂದು ಹೇಳಿದ್ದಾರೆ.

ಉದ್ಯಮಿಯ ಅಸಹಾಯಕ ಪರಿಸ್ಥಿತಿಯನ್ನೇ ಬಂಡವಾಳವನ್ನಾಗಿಸಿಕೊಂಡು ತಮ್ಮ ವೀರ ಕಂಬಳ ಚಿತ್ರದಿಂದ ಬರುವ ಲಾಭದಲ್ಲಿ ನಿಮಗೆ ಅರವತ್ತು ಲಕ್ಷ ಕೊಡುತ್ತೇನೆ ಎಂದು ಹಣ ಪೀಕಿದ್ದಾರೆ. ಇದಲ್ಲದೇ ಆ ಉದ್ಯಮಿಗೆ ಸಂಪೂರ್ಣ ಬೆಂಗಳೂರಿನ ದರ್ಶನವನ್ನು ಮಾಡಿಸಿರುವ ಅರುಣ್ ರೈ ಕಣ್ಮುಂದೆ ಕಂಡ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳೆಲ್ಲವನ್ನು ತೋರಿಸಿ ಇದೆಲ್ಲ ನನ್ನದೇ ಎಂದು ಹೇಳಿದ್ದಾರೆ. ದುಬೈದಿಂದ ಮಲೇಷ್ಯಾವರೆಗೆ ನನ್ನ ವ್ಯವಹಾರಗಳಿವೆ ಎಂದು ಹೇಳಿದ್ದಾರೆ.

ಎಲಾನ್ ಮಸ್ಕ್‌ ಅವರನ್ನು ಬಿಡದ ಅರುಣ್ ರೈ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯಲ್ಲಿ ನನ್ನ ಆಪ್ತರೊಬ್ಬರು ಹೂಡಿಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಮಾಯಕ ಉದ್ಯಮಿ ಅರುಣ್ ರೈ ಹೇಳಿದ್ದನ್ನೆಲ್ಲವನ್ನು ನಂಬಿ ಬೇರೆ ಬೇರೆ ಕಡೆಗಳಿಂದ ಸಾಲ ಮಾಡಿ ಸುಮಾರು 9 ಕೋಟಿ ಹಣವನ್ನು ಕಂಪೆನಿಯ ಷೇರು ಖರೀದಿಗಾಗಿ ನೀಡಿದ್ದಾರೆ.

ಉದ್ಯಮಿಗೆ ಕೆಲ ನಕಲಿ ಕರಾರು ಪತ್ರಗಳನ್ನು ನಿರ್ಮಾಪಕ ಅರುಣ್ ಮತ್ತು ಆತನ ಕೆಲವು ಸಹಚರರು ನೀಡಿದ್ದಾರೆ. ತಾನು ಮೋಸ ಹೋಗಿರುವುದು ತಿಳಿದ ಮೇಲೆ ಬಂಟವಾಳದ ಉದ್ಯಮಿ ನಿರ್ಮಾಪಕ ಅರುಣ್ ರೈ, ಆತನ ಸಹೋದರ ಅರ್ಜುನ್ ರೈ, ಬನಶಂಕರಿ ರಘು, ಮುಳಬಾಗಿಲು ಗೋವಿಂದಪ್ಪ, ಕೆ.ಪಿ.ಶ್ರೀನಿವಾಸ್ ಎಂಬುವವರ ವಿರುದ್ದ ದೂರು ನೀಡಿದ್ದಾರೆ.