ಸರ್ವಾಧಿಕಾರಿಗಳಿಗೆ, ಜನವಿರೋಧಿ ಐಪಿಎಸ್ ಗಳಿಗೆ ತಲೆಬಾಗುವ ಪ್ರಶ್ನೆಯೇ ಇಲ್ಲ. ಹೋರಾಟ ಮತ್ತಷ್ಟು ವ್ಯಾಪಕಗೊಳ್ಳಲಿದೆ: ಸಿಪಿಐಎಂ ಕುಂದಾಪುರ ತಾಲೂಕು ಸಮಿತಿ
ಪ್ರತಿಭಟನೆ, ಧರಣಿಗಳಿಗೆ ಅನುಮತಿ ನಿರಾಕರಿಸುತ್ತಿರುವ, ಜನಪರ ಸಂಘಟನೆಗಳ ಮೇಲೆ ಸರಣಿ ಮೊಕದ್ದಮೆ ಹೂಡುತ್ತಿರುವ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು, ಮಂಗಳೂರು ನಗರಿದಂದ ಅವರನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ಡಿವೈಎಪ್ಐ ಸಂಘಟನೆಗಳಿಂದ ಜಿಲ್ಲಾದ್ಯಂತ ಪ್ರತಿಭಟನಾ ಸಭೆ ನಡೆಯುತ್ತಾ ಇದೆ. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಕಮೀಷನ್ ಹಠಾವೊ ಘೋಷಣೆಗಳನ್ನು ಕೂಗಿ, ಕಮೀಷನರ್ ವಿರುದ್ಧದ ಆರೋಪಗಳ ಕುರಿತು ಹಾಡು ಕಟ್ಟಿ ಹಾಡಿ ಪ್ರತಿಭಟನೆ ನಡೆಸುತ್ತಾ ಇದ್ದಾರೆ.

ಇದೀಗ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಮೇಲೆ ಶಿಸ್ತು ಕ್ರಮ, ವರ್ಗಾವಣೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ದಕ್ಷಿಣ ಕನ್ನಡ ಜಿಲ್ಲೆಯ ಗಡಿದಾಟಿ ಉಡುಪಿ ಜಿಲ್ಲೆಗೂ ವಿಸ್ತರಣೆಗೊಂಡಿದೆ. ಸೋಮವಾರದಂದು ಕುಂದಾಪುರ ನಗರದ ಶಾಸ್ತ್ರಿ ಸರ್ಕಲ್ ಬಳಿ ಸಿಪಿಐಎಂ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆದಿದೆ. ಅನುಪಮ್ ಅಗ್ರವಾಲ್ ರಂತಹ ಸರ್ವಾಧಿಕಾರಿಗಳಿಗೆ, ಜನವಿರೋಧಿ ಐಪಿಎಸ್ ಗಳಿಗೆ ತಲೆಬಾಗುವ ಪ್ರಶ್ನೆಯೇ ಇಲ್ಲ. ಹೋರಾಟ ಮತ್ತಷ್ಟು ವ್ಯಾಪಕಗೊಳ್ಳಲಿದೆ ಎಂದು ಸಿಪಿಐಎಂ ಕುಂದಾಪುರ ತಾಲೂಕು ಸಮಿತಿ ಆಕ್ರೋಶವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಈ ಹೋರಾಟ ಇನ್ನಷ್ಟು ವಿಸ್ತರಿಸಿ ರಾಜ್ಯ ಮಟ್ಟಕ್ಕೂ ವಿಸ್ತರಣೆಗೊಳ್ಳಲಿದೆ ಎಂಬ ಅಭಿಪ್ರಾಯ ಇದೀಗ ಕೇಳಿಬರುತ್ತಿದೆ.