ಸುರ್ಜೇವಾಲ ಬಗ್ಗೆ ಅನುಮಾನ ಯಾಕೆ.? ಸುರ್ಜೇವಾಲ ಮೂಲಕ ಆಟವಾಡಿದ ನಾಯಕ ಯಾರು.?
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ಕುತೂಹಲಕಾರಿ ಮಾಹಿತಿಗಳು ಹೊರಬರುತ್ತಿವೆ. ಅದರ ಪ್ರಕಾರ, ಈ ಪಟ್ಟಕ್ಕೇರುವ ವಿಷಯದಲ್ಲಿ ತುಂಬ ನಾಯಕರು ಹಿಂದೇಟು ಹೊಡೆಯುತ್ತಿದ್ದಾರೆ. ಕೆಲವೇ ಕಾಲದ ಹಿಂದೆ ಡಿಕೆಶಿ ನಂತರ ಈ ಪಟ್ಟಕ್ಕೆ ಬರುವವರು ಯಾರು?ಎಂಬ ಪ್ರಶ್ನೆ ಕೇಳಿದಾಗ ಹಲ ನಾಯಕರು ಉತ್ಸಾಹ ತೋರಿಸಿದ್ದರು. ಆದರೆ ಇತ್ತೀಚೆಗೆ ದಿಲ್ಲಿಗೆ ಹೋದ ಡಿಸಿಎಂ ಡಿಕೆಶಿ: ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯಿಂದ ನನ್ನನ್ನು ಬಿಡುಗಡೆ ಮಾಡಿ ಅಂತ ವರಿಷ್ಟರಿಗೆ ಹೇಳಿದ್ದರಂತೆ.
ಆದರೆ ಯಾವಾಗ ಡಿಕೆಶಿ ಈ ಮಾತು ಹೇಳಿ ಬಂದರೋ? ಇದಾದ ನಂತರ ರಾಜ್ಯ ಕಾಂಗ್ರೆಸ್ ನ ಪ್ರಮುಖ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ತಾವಿಲ್ಲ ಅಂತ ವರಿಷ್ಟರಿಗೆ ಮೆಸೇಜು ಮುಟ್ಟಿಸುತ್ತಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ: ಡಿಕೆಶಿ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕರೊಬ್ಬರು ಬರಬೇಕು ಎಂಬ ಲೆಕ್ಕಾಚಾರ ಇತ್ತು.
ಹೀಗೆ ಲಿಂಗಾಯತ ನಾಯಕರನ್ನು ಈ ಹುದ್ದೆಗೆ ತಂದರೆ ಪ್ರತಿಪಕ್ಷ ಬಿಜೆಪಿಗೆ ಕೌಂಟರ್ ಕೊಡಲು ಸಾಧ್ಯವಾಗುತ್ತದೆ ಎಂಬುದು ಈ ಲೆಕ್ಕಾಚಾರದ ಭಾಗ.
ಅದರ ಪ್ರಕಾರ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಹೆಸರುಗಳು ರೇಸಿಗೆ ಬಂದಿದ್ದವು.

ಆದರೆ ಈ ಹಂತದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಆಸೆ ಈ ಇಬ್ಬರೂ ನಾಯಕರಲ್ಲಿಲ್ಲ. ಕಾರಣ? ಈ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷರಾದರೆ ಆಗುವ ಪ್ರಯೋಜನವೇನೂ ಇಲ್ಲ. ವಿಧಾನಸಭಾ ಚುನಾವಣೆಗಳು ಹತ್ತಿರವಾದಾಗ ಈ ಪಟ್ಟ ಸಿಕ್ಕರೆ ಮುಖ್ಯಮಂತ್ತಿ ಹುದ್ದೆಗೆ ಟ್ರೈ ಕೊಡಬಹುದೇನೋ ನಿಜ. ಆದರೆ ಈಗ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದು ಥ್ಯಾಂಕ್ ಲೆಸ್ ಜಾಬ್ ಆಗಬಹುದು ಎಂಬುದು ಈ ನಾಯಕರ ಆತಂಕ.
ಇನ್ನು ಕೆಪಿಸಿಸಿ ಪಟ್ಟದ ರೇಸಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಕೇಳಿ ಬಂದರೂ, ಕೆಪಿಸಿಸಿ ಅಧ್ಯಕ್ಷನಾಗಲು ನಾನು ಸಿದ್ದ. ಆದರೆ ಈಗಲ್ಲ. 2026 ರ ನಂತರ ಈ ಹುದ್ದೆ ಕೊಡುವುದಾರೆ ಓಕೆ ಅಂತ ಅವರು ಹೇಳಿದ್ದಾರೆ.
ಹೀಗೆ ಹಲವು ನಾಯಕರು ಕೆಪಿಸಿಸಿ ಅಧ್ಯಕ್ಷರಾಗಲು ಹಿಂದೇಟು ಹೊಡೆಯುತ್ತಿರುವುದರಿಂದ ಡಿಕೆಶಿ ಬೆನ್ನು ಬಿದ್ದಿರುವ ವರಿಷ್ಟರು: ಇನ್ನು ಕೆಲ ಕಾಲ ನೀವೇ ಇದ್ದು ಬಿಡಿ. ಹೇಗಿದ್ದರೂ ಉಪಚುನಾವಣೆಯಲ್ಲಿ ಪಕ್ಷ ಭರ್ಜರಿ ಯಶಸ್ಸು ಗಳಿಸಿದೆ. ಹೀಗಾಗಿ ಇದೇ ಭರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿಬಿಡೋಣ. ಅಲ್ಲಿ ಅಧಿಕಾರ ಹಿಡಿದರೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಹೋರಾಡಲು ತಳಮಟ್ಟದ ಯೋಧರು ಸಿಕ್ಕಂತಾಗುತ್ತದೆ ಎಂದಿದ್ದಾರಂತೆ.

ಸುರ್ಜೇವಾಲ ಬಗ್ಗೆ ಅನುಮಾನ ಯಾಕೆ.?
ರಾಜ್ಯದ ಮದ್ಯ ಮಾರಾಟಗಾರರ ಆಕ್ರೋಶಕ್ಕೆ ಗುರಿಯಾಗಿದ್ದ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ್ ಈಗ ಸೇಫ್ ಆಗಿದ್ದಾರೆ. ಅಂದ ಹಾಗೆ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದ ತಿಮ್ಮಾಪುರ್ ಅವರ ಬಗ್ಗೆ ರಾಹುಲ್ ಗಾಂಧಿ ಕಿರಿಕಿರಿ ಮಾಡಿಕೊಂಡಿದ್ದಾರೆ ಅಂತ ರಾಜ್ಯ ಕಾಂಗ್ರೆಸ್ ನ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಿದ್ಧರಾಮಯ್ಯ ಬಳಿ ಹೇಳಿದ್ದರು.
ಸ್ವತ: ರಾಹುಲ್ ಗಾಂಧಿ ಅವರೇ ಕಿರಿಕಿರಿ ಮಾಡಿಕೊಂಡಿದ್ದಾರೆ ಅಂದರೆ ಏನು ಮಾಡುವುದು ಅಂತ ಯೋಚಿಸಿದ್ದ ಸಿದ್ದರಾಮಯ್ಯ ತಮ್ಮ ಸಂಪುಟದ ಸಹೋದ್ಯೋಗಿಗಳ ಬಳಿ ಇದನ್ನು ಹೇಳಿಕೊಂಡಿದ್ದರು. ಹೀಗೆ ಸಿದ್ಧರಾಮಯ್ಯ ಅವರು ತಮ್ಮೆದುರು ಈ ವಿಷಯ ಹೇಳಿಕೊಂಡಾಗ: ‘ಸಾರ್, ತಿಮ್ಮಾಪುರ್ ಅವರನ್ನು ಸಂಪುಟದಿಂದ ಕೈ ಬಿಡುವುದು ಬೇಡ. ಬದಲಿಗೆ ಖಾತೆ ಬದಲಿಸಿದರೆ ಸಾಕು’ ಅಂತ ಹೇಳಿದ್ದರು.
ಆದರೆ ಕಳೆದ ವಾರ ಸಿದ್ಧರಾಮಯ್ಯ ದೆಹಲಿಗೆ ಹೊರಟಾಗ: ‘ಸಾರ್, ತಿಮ್ಮಾಪುರ್ ಅವರ ಖಾತೆಯನ್ನೂ ಬದಲಿಸೋದೂ ಬೇಡ. ಅಂದ ಹಾಗೆ ತಿಮ್ಮಾಪುರ್ ವಿಷಯದಲ್ಲಿ ರಾಹುಲ್ ಗಾಂಧಿ ಸಿಟ್ಟು ಮಾಡಿಕೊಂಡಿದ್ದಾರೆ ಅಂತ ಹೇಳಿದವರು ಯಾರು.?ಸುರ್ಜೇವಾಲಾ ತಾನೇ?
ಆದರೆ ಈ ಕುರಿತು ರಾಹುಲ್ ಗಾಂಧಿ ಅವರೇನೂ ನಿಮ್ಮ ಬಳಿ ಮಾತನಾಡಿಲ್ಲವಲ್ಲ? ಹೇಳಿ ಕೇಳಿ ರಾಹುಲ್ ಗಾಂಧಿ ಅವರು ನಿಮಗೇ ಕ್ಲೋಜು. ಹೀಗಾಗಿ ತಿಮ್ಮಾಪುರ್ ಖಾತೆಯನ್ನು ಬದಲಿಸೋದು ಬೇಡ ಅಂತ ನೀವೇ ಹೇಳಿ ಬಿಡಿ. ಯಾಕೆಂದರೆ ಒಂದು ಸಲ ತಿಮ್ಮಾಪುರ್ ಖಾತೆ ಬದಲಿಸಿದರೆ ಪ್ರತಿಪಕ್ಷಗಳಿಗೆ ನಾವೇ ಅಸ್ತ್ರ ಕೊಟ್ಟಂತಾಗುತ್ತದೆ. ತಪ್ಪು ಮಾಡಿಲ್ಲ ಎಂದರೆ ತಿಮ್ಮಾಪುರ್ ಕೈಯ್ಯಿಂದ ಅಬಕಾರಿ ಖಾತೆ ಯಾಕೆ ಕಿತ್ತುಕೊಂಡಿರಿ ಅಂತ ಅವು ಕೇಳುತ್ತವೆ. ಹೀಗಾಗಿ ಇದನ್ನೇ ರಾಹುಲ್ ಗಾಂಧಿಯವರಿಗೆ ಹೇಳಿಬಿಡಿ’ಎಂದಿದ್ದಾರೆ.

ಹೀಗೆ ಸಂಪುಟದ ಕೆಲ ಸಹೋದ್ಯೋಗಿಗಳು ನೀಡಿದ ಸಲಹೆಯಂತೆ ಸಿದ್ದರಾಮಯ್ಯ ರಾಹುಲ್ ಗಾಂಧಿ ಜತೆ ಮಾತನಾಡಿದಾಗ: ‘ಆಯ್ತು ಬಿಡಿ ಸಿದ್ರಾಮಯ್ಯಾಜೀ’ಎಂಬ ಉತ್ತರ ಬಂದಿದೆ. ಯಾವಾಗ ರಾಹುಲ್ ಗಾಂಧಿ ಹೀಗೆ ಪ್ರತಿಕ್ರಿಯಿಸಿದರೋ? ಇದಾದ ನಂತರ ಸಿದ್ದರಾಮಯ್ಯ ಟೀಮಿಗೆ ಸುರ್ಜೇವಾಲ ಅವರ ಬಗ್ಗೆ ಅನುಮಾನ ಬಂದಿದೆ. ಅರ್ಥಾತ್, ತಿಮ್ಮಾಪುರ್ ವಿಷಯದಲ್ಲಿ ರಾಹುಲ್ ಗಾಂಧಿ ಏನೂ ಹೇಳಿರಲಿಲ್ಲ. ಬದಲಿಗೆ ಇಲ್ಲಿನ ನಾಯಕರೊಬ್ಬರು ಸುರ್ಜೇವಾಲ ಮೂಲಕ ಆಟ ಆಡಿದ್ದಾರೆ ಎಂಬುದು ಈ ಅನುಮಾನ.
✍️. ಆರ್.ಟಿ.ವಿಠ್ಠಲಮೂರ್ತಿ