ರಾಜ್ಯದಲ್ಲಿ ಒಂದು ವರ್ಷದಲ್ಲಿ ಬರೋಬ್ಬರಿ 641 ಡಿಜಿಟಲ್ ಅರೆಸ್ಟ್ ಪ್ರಕರಣಗಳು.!

ರಾಜ್ಯ

ವಂಚಕರಿಂದ ಉದ್ಯಮಿಗಳು, ಸರಕಾರಿ ನೌಕರರು, ವ್ಯಾಪಾರಿಗಳಿಗೆ ಟೋಪಿ..109 ಕೋಟಿ ಲೂಟಿ.!

ಸೈಬರ್ ವಂಚಕರು ಜನಸಾಮಾನ್ಯರಲ್ಲಿ ಆತಂಕ ಹುಟ್ಟಿಸಿ ಡಿಜಿಟಲ್ ಅರೆಸ್ಟ್ ಮೂಲಕ ನಿತ್ಯ ಕೋಟ್ಯಂತರ ರೂಪಾಯಿ ವಂಚಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಬರೋಬ್ಬರಿ 641 ಡಿಜಿಟಲ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು 109 ಕೋಟಿಯಷ್ಟು ಹಣ ಕಳೆದುಕೊಂಡಿದ್ದಾರೆ.

ಸೈಬರ್ ವಂಚಕರ ಹಾವಳಿಯಿಂದಾಗಿ ದಿನನಿತ್ಯ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ಈ ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಈ ಸೈಬರ್ ವಂಚಕರ ಜಾಲದ ಕುರಿತು ಪೊಲೀಸರು ನಿರಂತರವಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರೂ ಅದರ ನಿಯಂತ್ರಣ ಇಲ್ಲದಂತಾಗಿದೆ. ಡಿಜಿಟಲ್ ಅರೆಸ್ಟ್ ಮಾದರಿಯ ಪ್ರಕರಣಗಳಿಂದ ಸಾಮಾನ್ಯ ಜನರಿಂದ ಹಿಡಿದು ಉದ್ಯಮಿಗಳು, ಸರಕಾರಿ ನೌಕರರು, ವ್ಯಾಪಾರಿಗಳು ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.

ಈ ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಬಹುತೇಕರು ಶಿಕ್ಷಣವಂತರು ಬಲಿಯಾಗುತ್ತಿದ್ದಾರೆ. ದೇಶ ವಿದೇಶಗಳಿಂದ ಬರುವ ಕರೆಗಳಿಗೆ ವಿವಿಧ ಕಂಪೆನಿಗಳ ಆಪ್ ಗಳ ಲಿಂಕ್ ಗಳನ್ನು ಕ್ಲಿಕ್ಕಿಸುವ ಮೂಲಕ ದುಷ್ಕರ್ಮಿಗಳ ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಡಿಜಿಟಲ್ ಅರೆಸ್ಟ್ ಪ್ರಕರಣಗಳ ಕುರಿತು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ವಂಚಕರಿಂದ ಕರೆಗಳು ಬಂದಾಗ ಭಯಗೊಳ್ಳುವ ಬದಲು ತಾಳ್ಮೆ ವಹಿಸಿ ಯೋಚಿಸಿ, ನಂತರ ಕ್ರಮ ಕೈಗೊಳ್ಳಬೇಕು ಎಂಬ ಸಂದೇಶವನ್ನು ನೀಡಿದ್ದರು. ಆದರೂ ಸಹ ದೇಶದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

2024 ರ ನವೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 641 ಡಿಜಿಟಲ್ ಅರೆಸ್ಟ್ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 109 ಕೋಟಿ ರೂಪಾಯಿ ವಂಚಕರ ಪಾಲಾಗಿದೆ. ಆ ಪೈಕಿ ಬೆಂಗಳೂರಿನಲ್ಲೇ 480 ಪ್ರಕರಣಗಳು ವರದಿಯಾಗಿದ್ದು 42.4 ಕೋಟಿ ರೂಪಾಯಿ ಹಣ ವಂಚಕರ ಪಾಲಾಗಿದೆ. ವಂಚಕರ ಪಾಲಾದ ಹಣದಲ್ಲಿ ಕೇವಲ 9 ಕೋಟಿ ರೂಪಾಯಿ ಮಾತ್ರ ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಸ್ ಎಂ ಎಸ್, ಇ-ಮೇಲ್ ಅಥವಾ ವಾಟ್ಸಾಪ್ ಮೂಲಕ ಸಂದೇಶ ರವಾನೆ ಅಥವಾ ಕರೆ ಮಾಡುವ ವಂಚಕರು ನಿಮ್ಮ ನಂಬರ್ ಅಥವಾ ಯಾವುದೋ ದಾಖಲೆಗಳು ಮಾದಕ ಸರಬರಾಜು ಜಾಲ, ಅಕ್ರಮ ಹಣ ವರ್ಗಾವಣೆ , ಅಶ್ಲೀಲ ವಿಡಿಯೋ ಗಳ ಸೃಷ್ಟಿಸುವ ಜಾಲದಲ್ಲಿ ಬಳಕೆಯಾಗಿವೆ ಅಂತ ಆತಂಕ ಮೂಡಿಸುತ್ತಾರೆ. ನಂತರ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಎಂದು ನಿರ್ದಿಷ್ಟ ಮೊಬೈಲ್ ನಂಬರ್ ನೀಡುತ್ತಾರೆ. ಬಳಿಕ ಮಾತನಾಡುವ ವ್ಯಕ್ತಿ ತಾನು ಮುಂಬೈ ಪೊಲೀಸ್, ಇ.ಡಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ ದ ಅಧಿಕಾರಿ ಎಂದು ಪರಿಚಯಿಸಿಕೊಂಡು ಕರೆಯಲ್ಲಿ ನಿಮ್ಮ ವಿರುದ್ಧ ಗಂಭೀರ ಆರೋಪ ಮಾಡುವ ವಂಚಕ, ನಕಲಿ ಅರೆಸ್ಟ್ ವಾರೆಂಟ್ ಪೋಟೋ ಕಳಿಸಿ ನಿಮ್ಮನ್ನು ಬಂಧಿಸಬೇಕಾಗಿದೆ ಎಂದು ಹೇಳುತ್ತಾರೆ.

ನಂತರ ತನಿಖೆ ನಡೆಸಲಾಗುತ್ತಿದೆ. ನಿಮ್ಮ ವಿರುದ್ಧದ ಪ್ರಕರಣವನ್ನು ಕೈ ಬಿಡಲು ಹಣ ನೀಡಬೇಕಾಗುತ್ತದೆ ಎಂದು ಬೇಡಿಕೆ ಇಡುತ್ತಾರೆ. ಬ್ಯಾಂಕ್ ಖಾತೆ ವೆರಿಫಿಕೇಷನ್ ಮಾಡಬೇಕಾಗಿದೆ ಎಂದು ಹೇಳುವ ವಂಚಕರು , ತಾವು ಹೇಳಿದ ಸರ್ಕಾರಿ ಖಾತೆಗಳಿಗೆ ನಿಮ್ಮ ಹಣವನ್ನು ವರ್ಗಾಯಿಸಿ , ವಿಚಾರಣೆ ನಡೆಸಿ ಮರು ವರ್ಗಾವಣೆ ಮಾಡುತ್ತೇವೆ ಎನ್ನುತ್ತಾರೆ. ಮಾತು ನಂಬಿ ಹಣ ವರ್ಗಾಯಿಸಿದಂತೆ ಕಾಲ್ ಕಟ್ ಮಾಡುತ್ತಾರೆ. ನಂತರ ತಿಳಿಯುತ್ತದೆ ಇದು ಸೈಬರ್ ವಂಚನೆ ಎಂಬುದಾಗಿ, ಈ ರೀತಿಯ ಪ್ರಕರಣಗಳು ನಿತ್ಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿವೆ.